ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನ ಅಭ್ಯರ್ಥಿಗಳ ಭರಾಟೆ

ಮಂಗಳೂರು ಮಹಾನಗರ ಪಾಲಿಕೆ ಒಟ್ಟು 236 ನಾಮಪತ್ರ ಸಲ್ಲಿಕೆ
Last Updated 1 ನವೆಂಬರ್ 2019, 10:57 IST
ಅಕ್ಷರ ಗಾತ್ರ

ಮಂಗಳೂರು: ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಇದೇ 12 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದು, ಒಟ್ಟಾರೆ 236 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬುಧವಾರದವರೆಗೆ ಕೇವಲ 45 ನಾಮಪತ್ರ ಸಲ್ಲಿಕೆಯಾಗಿತ್ತು. ಗುರುವಾರ ಒಂದೇ ದಿನ 191 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊನೆಯ ಗಳಿಗೆಯವರೆಗೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ತಂತ್ರ ರೂಪಿಸಿದ್ದರಿಂದ ಕೊನೆಯ ದಿನವೇ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದೆ. ಹೀಗಾಗಿ ಕೊನೆಯ ದಿನವೇ ಬಹುತೇಕ ಅಭ್ಯರ್ಥಿಗಳು ಪಕ್ಷದ ಅಧಿಕೃತ ಬಿ. ಫಾರ್ಮ್‌ ಜತೆಗೆ ನಾಮಪತ್ರ ಸಲ್ಲಿಸಿದರು.

ದೇವಸ್ಥಾನಗಳ ಭೇಟಿ: ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗುರುವಾರ ಬೆಳಿಗ್ಗೆಯಿಂದಲೇ ನಗರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಚುನಾವಣೆಯಲ್ಲಿ ಜಯ ದೊರೆಯುವಂತೆ ಮಾಡಲು ದೇವರಲ್ಲಿ ಪ್ರಾರ್ಥಿಸಿದರು.

ನಂತರ ತಮ್ಮ ಬೆಂಬಲಿಗರ ಜತೆಗೂಡಿ, ಪಾಲಿಕೆಯ ಚುನಾವಣಾ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು. ಗುರುವಾರ ಇಡೀ ದಿನ ಲಾಲ್‌ಬಾಗ್‌ನ ಪಾಲಿಕೆ ಕಚೇರಿ ಎದುರು ಜನದಟ್ಟಣೆ ಹೆಚ್ಚಾಗಿತ್ತು. ಅಧಿಕಾರಿಗಳು ಬಿಡುವಿಲ್ಲದೇ ನಾಮಪತ್ರ ಸ್ವೀಕಾರದಲ್ಲಿ ನಿರತರಾಗಿದ್ದರು.

ಸಮಾಧಾನಕ್ಕೆ ಹರಸಾಹಸ: ಕಾಂಗ್ರೆಸ್‌, ಬಿಜೆಪಿ ಮಧ್ಯೆಯೇ ತೀವ್ರ ಪೈಪೋಟಿ ನಡೆಯುತ್ತಿದ್ದು, ಉಭಯ ಪಕ್ಷಗಳಲ್ಲಿ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಆದರೆ, ಹಲವರಿಗೆ ಈ ಬಾರಿ ಅವಕಾಶ ದೊರೆಯದೇ ಇದ್ದುದರಿಂದ ಸಹಜವಾಗಿ ಉಭಯ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಗುರುವಾರ ಬೆಳಿಗ್ಗೆಯಿಂದಲೇ ಅವಕಾಶ ವಂಚಿತರನ್ನು ಸಮಾಧಾನ ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ಬಾರಿಯ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು, ಶತಾಯ ಗತಾಯ ಅಧಿಕಾರ ಪಡೆಯಬೇಕು ಎನ್ನುವ ಕಾರ್ಯಯೋಜನೆ ಉಭಯ ಪಕ್ಷಗಳದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT