ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ನೀರಿನ ದರ ಇಳಿಕೆ– ಪಾಲಿಕೆ ಪ್ರಸ್ತಾವಕ್ಕೆ ಸರ್ಕಾರ ಅಸ್ತು

Last Updated 18 ಜುಲೈ 2022, 16:04 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ದರವನ್ನು ಇಳಿಸುವ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಪರಿಷ್ಕೃತ ದರವು ಆಗಸ್ಟ್‌ 1ರಿಂದ ಜಾರಿಗೆ ಬರಲಿದ್ದು, ಒಂದು ವರ್ಷದ ವರೆಗೆ ಚಾಲ್ತಿಯಲ್ಲಿರಲಿದೆ.

ಪಾಲಿಕೆಯು ನೀರಿನ ದರವನ್ನು 2018ರ ಡಿ.03ರಂದು ಪರಿಷ್ಕರಿಸಿತ್ತು. ಆಗ ವಾಣಿಜ್ಯ ಮತ್ತು ಕಟ್ಟಡ ನಿರ್ಮಾಣದ ಉದ್ದೇಶಗಳಿಗೆ ಬಳಸುವ ನೀರಿನ ದರವನ್ನು ಮಾತ್ರ ಹೆಚ್ಚಿಸಲಾಗಿತ್ತು. ಆದರೆ ಗೃಹಬಳಕೆಯ ನೀರಿನ ದರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ನಗರದಲ್ಲಿ ಹತ್ತು ವರ್ಷಗಳಲ್ಲಿ ನೀರಿನ ದರ ಪರಿಷ್ಕರಣೆ ಆಗಿರದ ಕಾರಣ 2019ರ ಜೂನ್‌ 21ರಂದು ಸರ್ಕಾರದ ಮಾರ್ಗಸೂಚಿಯನ್ವಯ ದರ ಪರಿಷ್ಕರಣೆ ಮಾಡಲಾಗಿತ್ತು. ಪ್ರತಿ ತಿಂಗಳು 20 ಸಾವಿರ ಲೀಟರ್‌ಗಳಷ್ಟು ನೀರು ಬಳಸುವವರಿಂದ ಸಂಗ್ರಹಿಸುವ ಕನಿಷ್ಠ ಶುಲ್ಕವನ್ನು ₹ 174ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ನೀರಿನ ದರ ಹೆಚ್ಚಳದ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ತಿಂಗಳಿಗೆ 20 ಸಾವಿರ ಲೀಟರ್‌ವರೆಗೆ ನೀರು ಬಳಸುವವರಿಗೆ ವಿಧಿಸುವ ಕನಿಷ್ಠ ಶುಲ್ಕವನ್ನು ₹ 140ಕ್ಕೆ ಇಳಿಸುವ ಬಗ್ಗೆ2020ರ ಮೇ 13ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರಲಿಲ್ಲ.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಫೆ. 8ರಂದು ನಡೆದ ಸಭೆಯಲ್ಲಿ ನೀರಿನ ದರಗಳ ಎರಡು ಸ್ತರಗಳನ್ನು ಕೈಬಿಟ್ಟು ನಷ್ಟ ಆಗದಂತೆ ದರ ಪರಿಷ್ಕರಣೆ ಮಾಡಲು ಪಾಲಿಕೆಗಳು ಪ್ರಸ್ತಾವ ಸಲ್ಲಿಸಬಹುದು ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಪಾಲಿಕೆಯು 2022ರ ಮೇ ತಿಂಗಳ ಸಾಮಾನ್ಯ ಸಭೆಯಲ್ಲಿ ತಿಂಗಳಿಗೆ 20ಸಾವಿರದವರೆಗೆ ನೀರು ಬಳಸುವವರಿಗೆ ₹ 100 ಶುಲ್ಕ ವಿಧಿಸಲು ತೀರ್ಮಾನ ಕೈಗೊಂಡಿತ್ತು. ಈ ಕುರಿತು ಹೊಸ ದರಪಟ್ಟಿಯನ್ನು ಸಿದ್ಧಪಡಿಸಿದ್ದ ಪಾಲಿಕೆ ಆಯುಕ್ತರು ಜೂನ್‌ 6ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಅನುಮೋದನೆ ನೀಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದ್ದರು. ಪಾಲಿಕೆಯ ಪ್ರಸ್ತಾವಕ್ಕೆ ಸೋಮವಾರ ಅನುಮೋದನೆ ಸಿಕ್ಕಿದೆ.

ತಿಂಗಳಿಗೆ 20 ಸಾವಿರ ಲೀಟರ್‌ವರೆಗೆ ನೀರನ್ನು ಬಳಸುವವರಿಗೆ ಕನಿಷ್ಠ ಶುಲ್ಕದಲ್ಲಿ ₹ 74 ಹಾಗೂ ಗರಿಷ್ಠ 70 ಸಾವಿರ ಲೀಟರ್‌ವರೆಗೆ ನೀರನ್ನು ಬಳಸುವವರಿಗೆ ಕನಿಷ್ಠ ಶುಲ್ಕದಲ್ಲಿ ₹ 29 ಕಡಿತವಾಗಲಿದೆ. ತಿಂಗಳಿಗೆ 1.5 ಲಕ್ಷ ಲೀಟರ್‌ವರೆಗೆ ನೀರನ್ನು ಬಳಸುವವರು ಹಿಂದಿಗಿಂತ ₹ 50 ಹೆಚ್ಚು ದರ ಪಾವತಿಸಬೇಕಾಗುತ್ತದೆ.

‘ಕುಡಿಯುವ ನೀರಿನ ದರವನ್ನು ಕಡಿಮೆಗೊಳಿಸುವಂತೆ ಕೋರಿ ಪಾಲಿಕೆ ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವ ತಿರಸ್ಕಾರಗೊಂಡಿತ್ತು. ಚಾಲ್ತಿಯಲ್ಲಿರುವ ನೀರಿನ ದರದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದುದರಿಂದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ವಿವರವಾಗಿ ಚರ್ಚಿಸಿ ಕುಡಿಯುವ ನೀರಿನ ದರವನ್ನು ಕಡಿಮೆಗೊಳಿಸುವಂತೆ ಸರ್ಕಾರಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಿದ್ದೆವು. ಇದಕ್ಕೆ ಸರ್ಕಾರವು ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಕುಡಿಯುವ ನೀರಿನ ದರ ಪರಿಷ್ಕರಣೆಗೆ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ನಗರದ ಶಾಸಕರನ್ನು ಪಾಲಿಕೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

****

ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಕಡಿಮೆಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಇಂದು ಅಧಿಕೃತ ಆದೇಶ ಬಂದಿದೆ. ನೀರಿನ ದರ ಪರಿಷ್ಕರಣೆಗೆ ತುರ್ತು ಕ್ರಮ ಕೈಗೊಂಡ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು

ಡಿ. ವೇದವ್ಯಾಸ್ ಕಾಮತ್
ಶಾಸಕ, ಮಂಗಳೂರು ನಗರ ದಕ್ಷಿಣ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT