ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಾಣು ಹರಡದಂತೆ ಅಗತ್ಯ ಕ್ರಮ: ಶಾಸಕ ವೇದವ್ಯಾಸ ಕಾಮತ್ ಭರವಸೆ

ಸೀಲ್‌ಡೌನ್ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಕಾಮತ್
Last Updated 1 ಮೇ 2020, 16:08 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ಸೋಂಕು ದೃಢಪಟ್ಟಿರುವ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಕಂಟೈನ್‌ಮೆಂಟ್‌ ಝೋನ್‌ಗಳೆಂದು ಪರಿಗಣಿಸಲಾಗಿದೆ. ಶುಕ್ರವಾರ ಈ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್‌, ಜನರಿಗೆ ಧೈರ್ಯ ಹೇಳಿದರು.

ಸೀಲ್‌ಡೌನ್ ಆಗಿರುವ ಪಡೀಲ್ ಕಣ್ಣೂರು ವಾರ್ಡ್ ಕೊಡಕಲ್, ಶಕ್ತಿನಗರ, ಬೋಳೂರು ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಪ್ರದೇಶಗಳಲ್ಲಿ ವೈರಾಣು ಹರಡದಂತೆ ಪೂರ್ಣ ಪ್ರಮಾಣದಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸೋಂಕಿನಿಂದ ಗುರುವಾರ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಬೋಳೂರಿನಲ್ಲಿ ನಡೆಸಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ವಿಚಾರದಲ್ಲಿ ಸಾರ್ವಜನಿಕರು ಧೈರ್ಯಗೆಡದಂತೆ ಜಾಗೃತಿ ಮೂಡಿಸಲಾಯಿತು ಎಂದು ತಿಳಿಸಿದರು.

ಸೀಲ್‌ಡೌನ್‌ ಆಗಿರುವ ಪ್ರದೇಶಗಳ ಎಲ್ಲ ಮನೆಗಳಿಗೂ ಹಾಲು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೋಲಿಸ್ ಠಾಣಾಧಿಕಾರಿ ಮತ್ತು ಸ್ಥಳಿಯ ಸಂಘ– ಸಂಸ್ಥೆಗಳ ಸಹಕಾರದೊಂದಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

‘ನಮ್ಮೆಲ್ಲರ ರಕ್ಷಣೆಗಾಗಿ ಸೀಲ್‌ಡೌನ್ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಸ್ವಯಂ ರಕ್ಷಣಾ ಕ್ರಮವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ, ಮನೆಯೊಳಗೆ ಇರುವಂತಹ ಕ್ರಮಗಳನ್ನು ಶಿಸ್ತಿನಿಂದ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ತಾವು ಮನೆಯೊಳಗಿದ್ದರೂ ಸ್ವಚ್ಛತೆ ಮತ್ತು ಮನೆಯವರೊಂದಿಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈಗಾಗಲೇ ಒಂದು ಹಂತದಲ್ಲಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಾಗ ಮತ್ತಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಗುವುದು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಪರೀಕ್ಷೆಗಾಗಿ ಮನೆ ಮನೆಗೆ ಬರಲಿದ್ದು, ಆ ಸಂದರ್ಭದಲ್ಲಿ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಚಂದ್ರಾವತಿ ವಿಶ್ವನಾಥ್‌, ಕಿಶೋರ್ ಕೊಟ್ಟಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು,ಪೋಲಿಸ್ ಅಧಿಕಾರಿಗಳು,ಮನಪಾ ಅಧಿಕಾರಿಗಳು, ಪಕ್ಷದ ಮುಖಂಡರಾದ ವಿಶ್ವನಾಥ್, ಯುವರಾಜ್, ರಾಮಚಂದ್ರ ಚೌಟ, ರಾಹುಲ್ ಶೆಟ್ಟಿ, ರೋಷನ್, ಚೇತನ್, ಎಂಪಿಡಬ್ಲ್ಯೂ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT