ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ನೆಲೆಯಲ್ಲಿ ವರ್ತಿಸಿ

ಪುತ್ತೂರು ತಾ.ಪಂ. ಸಭೆ: ಅಧಿಕಾರಿಗಳಿಗೆ ಶಾಸಕ ಸಂಜೀವ ಮಠಂದೂರು ಸಲಹೆ
Last Updated 30 ಸೆಪ್ಟೆಂಬರ್ 2020, 4:08 IST
ಅಕ್ಷರ ಗಾತ್ರ

ಪುತ್ತೂರು: ‘ಬಡ ಜನರು ಮನೆ ಕಟ್ಟಿಕೊಂಡು ವಾಸ್ತವ್ಯ ಹೂಡಲು ತೊಂದರೆ ನೀಡಬೇಡಿ. ಮಾನವೀಯ ನೆಲೆಯಲ್ಲಿ ವರ್ತಿಸಿ’ ಎಂದು ಶಾಸಕ ಸಂಜೀವ ಮಠಂದೂರು ಅವರು ಅರಣ್ಯ ಇಲಾಖೆಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕಂದಾಯ ಇಲಾಖೆಯ ಹಕ್ಕುಪತ್ರವಿದ್ದರೂ ಕೊಳ್ತಿಗೆ ಮತ್ತು ಒಳಮೊಗ್ರು ಗ್ರಾಮದ 19 ಮಂದಿಗೆ ಮನೆ ಕಟ್ಟಕೊಳ್ಳಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಸದಸ್ಯ ರಾಮ ಪಾಂಬಾರು, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ದೂರಿದರು.

‘ಅರಣ್ಯ ಇಲಾಖೆ ಜಾಗವನ್ನು ಸರ್ವೆ ಮಾಡಿ ಗಡಿ ಗುರುತು ಮಾಡಿಕೊಳ್ಳಲಿ. ಗ್ರಾಮ ಪಂಚಾಯಿತಿ ಜಾಗವನ್ನು ಕಂದಾಯ ಇಲಾಖೆ ತಮ್ಮ ಜಾಗವೆಂದು ಹೇಳಿಕೊಳ್ಳಬಾರದು’ ಎಂದು ಮಠಂದೂರು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕ್ರಿಯಾ ಯೋಜನೆಯಲ್ಲಿ ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ ಇಡಲಾಗಿದ್ದ ₹ 13 ಲಕ್ಷ ಅನುದಾನದಲ್ಲಿ ₹ 9 ಲಕ್ಷ ಮಾತ್ರ ನೀಡಲಾಗಿದೆ. ಹಲವಾರು ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ ಎಂದು ಸದಸ್ಯೆ ಫೌಝಿಯಾ ಇಬ್ರಾಹಿಂ ಆಕ್ಷೇಪಿಸಿದರು.

ತಾಲ್ಲೂಕು ಪಂಚಾಯಿತಿಗೆ ಮಂಜೂರು ಆಗಿದ್ದ ₹ 2 ಕೋಟಿ ಅನುದಾನದಲ್ಲಿ ₹ 50 ಲಕ್ಷ ಕಡಿತ ಮಾಡಲಾಗಿದೆ. ಹೀಗಾಗಿ ಎಲ್ಲ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಕಡಿತವಾಗಿದೆ. ಈ ಸಂಬಂಧ ಚರ್ಚಿಸಲು ವಿಶೇಷ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.

‘ಸಾಮಾನ್ಯ ಸಭೆಯಲ್ಲಿ ಕೇಳುವ ಪ್ರಶ್ನೆಗಳನ್ನು ಒಂದು ವಾರದ ಮುಂಚಿತವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಲಿಖಿತವಾಗಿ ನೀಡಬೇಕು. ಅಧಿಕಾರಿಗಳು ಲಿಖಿತ ರೂಪದಲ್ಲಿ ಉತ್ತರ ನೀಡಬೇಕು. ವಿಧಾನಸಭೆಯಲ್ಲಿ ಇರುವ ಈ ಕ್ರಮವನ್ನು ತಾಲ್ಲೂಕು ಪಂಚಾಯ್ತಿಯಲ್ಲೂ ಅಳವಡಿಸುವಂತಾಗಬೇಕು’ ಎಂದು ಮಠಂದೂರು ಸಲಹೆ ಮಾಡಿದರು.

94ಸಿ ಅಡಿಯಲ್ಲಿ ಜಾಗ ಪಡೆಯಲು ಕೆಲ ಫಲಾನುಭವಿಗಳಿಗೆ ಹಣ ಕಟ್ಟಲು ತೊಂದರೆ ಇದೆ. ದಾನಿಗಳಿಂದ ನೆರವು ಪಡೆದು ಅಂತಹವರಿಗೆ ಸಹಾಯ ಮಾಡಬೇಕು ಎಂದು ಅವರು ಸೂಚಿಸಿದರು. ಉಪಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT