ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ನೆರೆ ಖಚಿತವಾದರೂ ಕೃಷಿ ಕೈಬಿಡದ ಛಲ

ಮಂಗಳೂರು ವಿಮಾನ ನಿಲ್ದಾಣ ಸಮೀಪದ ಮೊಗೇರ್ ಕುದ್ರು ಪ್ರದೇಶ ಜೋರುಮಳೆಗೆ ದ್ವೀಪವಾಗಿ ಮಾರ್ಪಾಡು
Published 28 ಜೂನ್ 2024, 5:40 IST
Last Updated 28 ಜೂನ್ 2024, 5:40 IST
ಅಕ್ಷರ ಗಾತ್ರ

ಮಂಗಳೂರು: ಗದ್ದೆಗಳ ನಡುವೆ ಸಾಗುವ ಕಿರಿದಾದ ರಸ್ತೆಯ ಮೂಲಕ ಬುಧವಾರ ಸಂಜೆ ಬಂದ ಆಟೊ ಶಿವರಾಮ ಅವರನ್ನು ಮನೆಯ ಮುಂದೆ ಇಳಿಸಿಹೋಗಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಅದೇ ಮನೆಯ ಸುತ್ತ ನೀರು ತುಂಬಿತ್ತು. ಒಂದು ಮನೆಯಲ್ಲ, ಮೊಗೇರ್ ಕುದ್ರು ಪ್ರದೇಶದ ಎಲ್ಲ 30 ಮನೆಗಳೂ ರಾತ್ರಿ ಬೆಳಗಾಗುವುದರ ಒಳಗೆ ಜಲಾವೃತಗೊಂಡಿದ್ದವು.

ಮಂಗಳೂರು ವಿಮಾನ ನಿಲ್ದಾಣದ ಸಮೀಪದ ಕೆಂಜಾರು ಗ್ರಾಮದಿಂದ ಒಳಗೆ ಹೋದರೆ ಸಿಗುವ ಮೊಗೇರ್ ಕುದ್ರು ಪ್ರತಿ ಮಳೆಗಾಲದಲ್ಲೂ ಆಗಾಗ ನಡುಗಡ್ಡಯಾಗುತ್ತದೆ. ಆಗ ಪ್ರತಿ ಮನೆಯ ದೋಣಿಗಳು ನೀರಿಗೆ ಇಳಿಯುತ್ತವೆ. ನೆರೆ ಇಳಿಯುವ ವರೆಗೂ ಅಲ್ಲಿನವರಿಗೆ ಮತ್ತೆ ಅದೇ ವಾಹನ. ಈ ಎಲ್ಲ ಸಂಕಷ್ಟಗಳ ನಡುವೆಯೂ ಇಲ್ಲಿನವರು ಕೃಷಿಯನ್ನು ಕೈಬಿಟ್ಟಿಲ್ಲ. 

ಇಲ್ಲಿಗೆ ಅನತಿ ದೂರದಲ್ಲಿ, ವಿಮಾನ ನಿಲ್ದಾಣ ರಸ್ತೆಯ ಸಮೀಪ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 2012ರಲ್ಲಿ ಫಲ್ಗುಣಿ ನದಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟೆಯ ಅವೈಜ್ಞಾನಿಕ ಕಾಮಗಾರಿಯೇ ಸಮಸ್ಯೆಯ ಮೂಲ ಎಂಬುದು ಮೊಗೇರ್ ಕುದ್ರು ನಿವಾಸಿಗಳ ದೂರು.

‘ಎಲ್ಲವೂ ಸರಿಯಾಗಿಯೇ ಇತ್ತು. ಸುಂದರ ಪರಿಸರದಲ್ಲಿ ಕೃಷಿ ಮಾಡುತ್ತ ಖುಷಿಯಿಂದ ಇದ್ದೆವು. ಕಿಂಡಿ ಅಣೆಕಟ್ಟೆ ನಿರ್ಮಿಸಿದಾಗಿನಿಂದ ಸಮಸ್ಯೆ ಆರಂಭವಾಯಿತು. ಹಾಗೆಂದು ಅಣೆಕಟ್ಟೆಯ ಬಗ್ಗೆ ನಮಗೆ ತಕರಾರು ಇಲ್ಲ. ಅದು ಜನೋಪಯೋಗಿ ಯೋಜನೆ. ಆದರೆ ಅದರ ಎರಡೂ ಬದಿಯಲ್ಲಿ ತುರ್ತು ಗೇಟ್‌ಗಳನ್ನು ಅಳವಡಿಸಿದ್ದರೆ ಯಾವ ಸಮಸ್ಯೆಯೂ ಇರಲಿಲ್ಲ. ವರ್ಷಗಳಿಂದ ಈ ಬೇಡಿಕೆಯನ್ನು ಇರಿಸಿ ಸರ್ಕಾರದ ಮಟ್ಟಕ್ಕೂ ಮನವಿ ಸಲ್ಲಿಸಿ ಆಗಿದೆ. ಈ ವರ್ಷ ಸಾತ್ವಿಕ ಕೋಪದಿಂದ ಯಾರ ಬಳಿಗೂ ಹೋಗಲಿಲ್ಲ’ ಎಂದು ಶಿವರಾಮ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಏಣೇಲ್‌ ಬೆಳೆ (ತುಳುನಾಡಿನಲ್ಲಿ ಮಳೆಗಾಲದ ಭತ್ತದ ಬೆಳೆ) ಪ್ರತಿಬಾರಿಯೂ ನೀರಿನಲ್ಲಿ ಮುಳುಗಿ ನಾಶವಾಗುತ್ತದೆ. ಜೋರು ಮಳೆಯಾದರೆ ಫಲ್ಗುಣಿ ನದಿ ಉಕ್ಕಿ ಈ ಪ್ರದೇಶದಲ್ಲಿ ನೆರೆಯಾಗುವುದು ಖಚಿತ. ಒಮ್ಮೆ ನೀರು ಬಂದರೆ ಇಳಿಯಲು ಒಂದು ವಾರ ಬೇಕಾಗುತ್ತದೆ. ಮುಳುಗಿದ ಭತ್ತದ ಸಸಿಗಳು ಎರಡನೇ ದಿನದಲ್ಲಿ ಕೊಳೆತುಹೋಗುತ್ತವೆ. ಬಾಳೆ ಸೇರಿದಂತೆ ಎಲ್ಲ ಕೃಷಿಯೂ ಹಾಳಾಗುತ್ತದೆ. ಆದರೂ ನೆರೆ ಬಾರದಿರಲಿ ಎಂಬ ಆಶಯದೊಂದಿಗೆ ಪ್ರತಿ ಬಾರಿ ಕೃಷಿ ಮಾಡಿಯೇ ಮಾಡುತ್ತೇವೆ’ ಎಂದು ಅವರು ಹೇಳುತ್ತಾರೆ.

ಮೊಗೇರ್‌ ಕುದ್ರು ನಿವಾಸಿಗಳಿಗೆ ತಗ್ಗು ಪ್ರದೇಶದಲ್ಲಿಯೂ ಸಣ್ಣ ಹಿಡುವಳಿಗಳಿವೆ. ಅಲ್ಲಿನ ಗದ್ದೆಗಳಿಗೆ ಸುಗ್ಗಿ (ಬೇಸಿಗೆಯಲ್ಲಿ ತೆಗೆಯುವ ಬೆಳೆ) ಕಾಲದಲ್ಲೂ ನೀರು ನುಗ್ಗುತ್ತದೆ. ಆಗ ನಾಶವಾಗುವ ಕೃಷಿಯ ಬಗ್ಗೆ ಹೆಚ್ಚು ಚಿಂತೆಪಡುವುದಿಲ್ಲ, ಅದರ ಬಗ್ಗೆ ಮಾತನಾಡಿ ಕುಡಿಯುವ ನೀರಿನ ಯೋಜನೆಯನ್ನು ದೂರುವುದಕ್ಕೆ ಹೋಗುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

‘ವಿಶಾಲವಾದ ಪ್ರದೇಶದಲ್ಲಿ ಏಣೇಲ್‌ ಬೆಳೆ ತೆಗೆಯುತ್ತೇವೆ. ಇದು ನೀರಿನಡಿ ಮುಳುಗಿ ನಾಶವಾದಾಗ ಹೊಟ್ಟೆ ಉರಿಯತ್ತದೆ. ಕೃಷಿಕಾಯಕವೇ ಇಲ್ಲದಾಗುತ್ತಿರುವ ಈ ಕಾಲದಲ್ಲಿ ಖುಷಿಯಿಂದ ಭತ್ತ ಬೆಳೆಯುವ ನಮ್ಮ ನೋವಿಗೆ ಯಾರೂ ಕಿವಿಯಾಗಲೇ ಇಲ್ಲ ಎಂಬುದು  ಬೇಸರ ತಂದಿದೆ’ ಎಂದು ಕೃಷಿಕ ಶೀನ ಕಾವ ಬೇಸರಿಸಿದರು.

ಲೈನ್ ‘ಫಾಲ್ಟ್‌’ ದುರಸ್ತಿ ಮಾಡಲು ಮೆಸ್ಕಾಂ ಸಿಬ್ಬಂದಿಯನ್ನು ದೋಣಿಯಲ್ಲಿ ಕರೆದೊಯ್ಯುತ್ತಿರುವುದು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಲೈನ್ ‘ಫಾಲ್ಟ್‌’ ದುರಸ್ತಿ ಮಾಡಲು ಮೆಸ್ಕಾಂ ಸಿಬ್ಬಂದಿಯನ್ನು ದೋಣಿಯಲ್ಲಿ ಕರೆದೊಯ್ಯುತ್ತಿರುವುದು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಇಲ್ಲಿನದು ವಾರಗಟ್ಟಲೆ ಮಳೆ ಬಂದು ಆಗುವ ಸಮಸ್ಯೆಯಲ್ಲ. ಧಾರಾಕಾರವಾಗಿ ಒಂದು ಮಳೆ ಸುರಿದರೆ ನೀರು ಸುತ್ತುವರಿಯುತ್ತದೆ. ಮುಂದಿನ ವರ್ಷವಾದರೂ ಅಣೆಕಟ್ಟೆಗೆ ತುರ್ತು ಗೇಟ್ ಅಳವಡಿಸಿದರೆ ಸಾಕಿತ್ತು. –ಶಿವರಾಮ ಮೊಗೇರ್ ಕುದ್ರು ನಿವಾಸಿ

ಎಲ್ಲ ಸೇವೆಯೂ ದೋಣಿ ಮೂಲಕ

ಮೊಗೇರ್ ಕುದ್ರು ನಿವಾಸಿ ಶೀನ ಕಾವ ಅವರ ಮನೆಯ ವಿದ್ಯುತ್ ಲೈನ್ ಗುರುವಾರ ‘ಫಾಲ್ಟ್’ ಆಗಿತ್ತು. ಮೆಸ್ಕಾಂಗೆ ಕರೆ ಹೋಯಿತು. ಕೆಲವು ತಾಸುಗಳಲ್ಲಿ ಸಿಬ್ಬಂದಿ ಬಂದರು. ಅವರು ಬೈಕ್ ನಿಲ್ಲಿಸಿದ ರಸ್ತೆಯ ಬದಿಗೆ ಎರಡು ದೋಣಿಗಳೂ ಬಂದವು. ಅರ್ಧ ಕಿಲೊಮೀಟರ್ ದೂರದಲ್ಲಿದ್ದ ಮನೆಗೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಲೈನ್ ದುರಸ್ತಿ ಮಾಡಿದ ನಂತರ ಅಲ್ಲಿಗೇ ತಂದು ಬಿಡಲಾಯಿತು. ನೆರೆಯಾದರೆ ಇಲ್ಲಿ ಶಾಲೆಗೆ ಹೋಗಲು ಅಂಗಡಿಯಿಂದ ಸಾಮಗ್ರಿ ತರಲು ಆಸ್ಪತ್ರೆಗೆ ತೆರಳಲು ಎಲ್ಲದಕ್ಕೂ ದೋಣಿಯನ್ನೇ ಅವಲಂಬಿಸಬೇಕಾಗುತ್ತದೆ. ತೆಂಗು ಕಂಗು ಬಾಳೆ ಮತ್ತಿತರ ಬೆಳೆಯೂ ಇರುವ ಈ ಪ್ರದೇಶದ 30 ಮನೆಗಳ ಪೈಕಿ 13 ಮಂದಿಗೆ ದೋಣಿ ನಡೆಸಲು ಗೊತ್ತಿದೆ. ಗೊತ್ತಿಲ್ಲದವರ ಮನೆಯವರಿಗೆ ಅಗತ್ಯವಿದ್ದರೆ ಬೇರೆ ಮನೆಯವರು ನೆರವು ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT