ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಬಳ ಅನುದಾನ: ಮುಖ್ಯಮಂತ್ರಿ ಭೇಟಿಗೆ ನಿರ್ಧಾರ

ಜೂ.19ರಂದು ಬೆಂಗಳೂರಿಗೆ ತೆರಳಲು ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ತೀರ್ಮಾನ
Published 17 ಜೂನ್ 2024, 5:43 IST
Last Updated 17 ಜೂನ್ 2024, 5:43 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಂಬಳಕ್ಕೆ ಸರ್ಕಾರದಿಂದ ಸಿಗಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಇದೇ 19ರಂದು ಜಿಲ್ಲಾ ಕಂಬಳ ಸಮಿತಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ಭಾನುವಾರ ಇಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಈ ವರ್ಷ ನಡೆದ 24 ಕಂಬಳಗಳಿಗೆ ತಲಾ ₹ 5 ಲಕ್ಷ ಮಂಜೂರಾಗಿದೆ. ಆದರೆ ಬಿಡುಗಡೆಯಾಗಲಿಲ್ಲ. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ನೇತೃತ್ವದಲ್ಲಿ 19ರಂದು ಕಂಬಳ ಸಮಿತಿಯ ಪ್ರಮುಖರು, ವ್ಯವಸ್ಥಾಪಕರು ಮುಖ್ಯಮಂತ್ರಿ, ಕ್ರೀಡಾ ಸಚಿವರು, ಪ್ರವಾಸೋದ್ಯಮ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿಯಾಗಲಿರುವುದಾಗಿ ತಿಳಿಸಿದರು.

ಕಂಬಳವು ರಾಜಕೀಯರಹಿತ, ರೈತಾಪಿ ವರ್ಗದ ಕ್ರೀಡೆಯಾಗಿದೆ. ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಇದರ ಉಳಿವಿಗಾಗಿ ಹಲವಾರು ಹೋರಾಟಗಳು ನಡೆದಿವೆ. ಕಂಬಳವನ್ನು ಬೆಳೆಸಿ, ಉಳಿಸುವುದಕ್ಕಾಗಿ ಸರ್ಕರ ಪ್ರೋತ್ಸಾಹಿಸಬೇಕು ಎಂದರು.

ಮಂಗಳೂರು ಕಂಬಳದ ವ್ಯವಸ್ಥಾಪಕ, ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದಿಸಲಾಯಿತು. ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಮಾತನಾಡಿ ಬೆಂಗಳೂರು ಕಂಬಳಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾದ ಕಾರಣ ಉಳಿದ ಕಂಬಳಗಳಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಎಲ್ಲ ಕಂಬಳಗಳಿಗೂ ಹಣ ಬಿಡುಗಡೆಯಾಗಬೇಕು ಎನ್ನುವುದು ನಮ್ಮ ಮನವಿ ಎಂದರು.

ಕಂಬಳದ ಓಟಗಾರರು ಒಂದೇ ಕೂಟದಲ್ಲಿ ಐದಾರು ಕೋಣಗಳನ್ನು ಓಡಿಸುತ್ತಾರೆ. ಒಂದು ಕೂಟದಲ್ಲಿ ಅವರು ಗರಿಷ್ಠ ಮೂರು ಕೋಣಗಳನ್ನು ಮಾತ್ರ ಓಡಿಸುವುದು, ಕೋಣಗಳನ್ನು ಬಿಡುವವರು ಕೂಡ ಮೂರು ಜೊತೆ ಕೋಣಗಳನ್ನು ಬಿಡುವ ನಿಯಮವನ್ನು ಮುಂದಿನ ಕಂಬಳಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಭಾಸ್ಕರ್ ಕೋಟ್ಯಾನ್ ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಉಪಾಧ್ಯಕ್ಷರಾದ ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ಶ್ರೀಕಾಂತ್ ಭಟ್ ನಂದಳಿಕೆ, ಸತೀಶ್ಚಂದ್ರ ಸಾಲ್ಯಾನ್, ಸಮಿತಿಯ ಮಾಜಿ ಅಧ್ಯಕ್ಷ ಪಿ.ಆರ್ ಶೆಟ್ಟಿ ಇದ್ದರು.

ಕಂಬಳಗಳಿಗೆ ತಲಾ ₹ 5 ಲಕ್ಷ ಮಂಜೂರಾಗಿದೆ: ದೇವಿಪ್ರಸಾದ್ ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಕಂಬಳ ಉಳಿಸಬೇಕು ಮಂಗಳೂರು ಕಂಬಳದ ವ್ಯವಸ್ಥಾಪಕ, ಸಂಸದ ಬ್ರಿಜೇಶ್‌ ಅಭಿನಂದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT