ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮತೀಯ ಗೂಂಡಾಗಿರಿ; ಆರೋಪಿಗಳಿಂದ ಮುಚ್ಚಳಿಕೆ ಪಡೆಯಲಿರುವ ಪೊಲೀಸರು

Published 3 ಜೂನ್ 2023, 16:35 IST
Last Updated 3 ಜೂನ್ 2023, 16:35 IST
ಅಕ್ಷರ ಗಾತ್ರ

ಮಂಗಳೂರು: ಮತೀಯ ಗೂಂಡಾಗಿರಿ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕಲು ಮುಂದಾಗಿರುವ ಮಂಗಳೂರು ಪೊಲೀಸ್‌ ಕಮಿಷನರೇಟ್‌ನ ಪೊಲೀಸರು, ಐದು ವರ್ಷಗಳಿಂದ ಈಚೆಗೆ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ, ಅವರಿಂದ ಮುಚ್ಚಳಿಕೆ ಪಡೆಯಲು ನಿರ್ಧರಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಇಲ್ಲಿ ಶನಿವಾರ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್ ಕುಲದೀಪ್‌ ಕುಮಾರ್‌ ಆರ್‌. ಜೈನ್‌, ‘ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಇದೆ. ಮತೀಯ ಗೂಂಡಾಗಿರಿ ನಡೆಸುವವರಿಂದಲೂ ಇದೇ ರೀತಿ ನಿರ್ದಿಷ್ಟ ಮೊತ್ತದ ಬಾಂಡ್‌ ಪಡೆದು, ಮುಚ್ಚಳಿಕೆ ಬರೆಸಿಕೊಳ್ಳಲಿದ್ದೇವೆ. ಮುಚ್ಚಳಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಅವರು ನಡೆದುಕೊಳ್ಳದಿದ್ದರೆ, ಬಾಂಡ್‌ನ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು, ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ’ ಎಂದು ತಿಳಿಸಿದರು.

‘ಐದು ವರ್ಷಗಳಿಂದ ಈಚೆಗೆ ಮತೀಯ ಗೂಂಡಾಗಿರಿಯಲ್ಲಿ ತೊಡಗಿಸಿಕೊಂಡವರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮುಚ್ಚಳಿಕೆ ಉಲ್ಲಂಘನೆ ಸಂಬಂಧ 2023ರಲ್ಲಿ ಇದುವರೆಗೆ 9 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅವರಿಂದ ಒಟ್ಟು ₹1.92 ಲಕ್ಷ ದಂಡ ವಸೂಲಿ ಮಾಡಿ ಸರ್ಕಾರಿ ಖಜಾನೆಗೆ ಜಮೆ ಮಾಡಲಾಗಿದೆ’ ಎಂದು ಡಿಸಿಪಿ (ಕಾನೂನು ಸುವ್ಯವಸ್ಥೆ) ಅಂಶು ಕುಮಾರ್‌ ತಿಳಿಸಿದರು.

‘ಮತೀಯ ಗೂಂಡಾಗಿರಿ ಪ್ರಕರಣಗಳು ಮರುಕಳಿಸುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಲು ಕ್ರಮಕೈಗೊಳ್ಳುತ್ತೇವೆ. ವಿಶೇಷವಾಗಿ ಕಡಲ ಕಿನಾರೆ, ಮಾಲ ಮುಂತಾದ ಪ್ರದೇಶಗಳಲ್ಲಿ ಸಂಜೆ ವೇಳೆ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲಿದ್ದೇವೆ. ಸಾರ್ವಜನಿಕರ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಮದ್ಯಪಾನ ಅಥವಾ ಧೂಮಪಾನ ಮಾಡುವುದು ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಡಿಸಿಪಿ (ಅಪರಾಧ ಪತ್ತೆ ವಿಭಾಗ)  ದಿನೇಶ್‌ ಕುಮಾರ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT