ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಪೊಲೀಸ್ ಗಿರಿ: ದಂಪತಿ ಮೇಲೆ ಹಲ್ಲೆ

Last Updated 28 ಜನವರಿ 2019, 19:32 IST
ಅಕ್ಷರ ಗಾತ್ರ

ಉಳ್ಳಾಲ: ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ 50 ಮಂದಿಯ ತಂಡವೊಂದು ದಾಳಿ ನಡೆಸಿ ಕಾರು ಪುಡಿಪುಡಿ ಮಾಡಿ ನೈತಿಕ ಪೊಲೀಸ್‌ಗಿರಿ ಮೆರೆದಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ಸೋಮವಾರ ಸಂಜೆ ನಡೆದಿದೆ.

ಪ್ರಕರಣ ಸಂಬಂಧ ನಾಲ್ವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಡಿಪು ಸ್ಮಾರ್ಟ್ ಮೋಟಾರ್ ಡ್ರೈವಿಂಗ್ ಶಾಲೆಯ ಥಾಮಸ್ (45) ಮೇಲೆ ಗಂಭೀರ ಹಲ್ಲೆ ನಡೆದಿದೆ.

ಥಾಮಸ್ ಮತ್ತು ಅವರ ಪತ್ನಿ ಕಾರನ್ನು ಚಲಾಯಿಸುತ್ತಿದ್ದ ಸಂದರ್ಭ, ಅದೇ ಕಾರಿನಲ್ಲಿ ಕಾರು ಕಲಿಯಲು ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರು ಇದ್ದರು. ಈ ಬಗ್ಗೆ ಕೆಂಗಣ್ಣು ಬೀರಿದ ‘ನೈತಿಕ ಪೊಲೀಸ’ರ ತಂಡವೊಂದು ಕಾರನ್ನು ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ತಡೆದಿದ್ದಾರೆ. ಬಳಿಕ ಕಲ್ಲಿನಿಂದ ಗಾಜು ಪುಡಿ ಮಾಡಿ ಕಾರಿಗೆ ಹಾನಿಗೊಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಥಾಮಸ್ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ, ಪತ್ನಿಯ ಮೇಲೂ ದಾಳಿ ನಡೆಸಿದ್ದಾರೆ. ಸುಮಾರು 50 ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ಮುಸ್ಲಿಂ ಮಹಿಳೆ ಇದ್ದುದರಿಂದಲೇ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ಮಹಿಳೆ ಪಂಚಾಯಿತಿ ಸದಸ್ಯರೊಬ್ಬರ ಪುತ್ರಿಯಾಗಿದ್ದಾರೆ.

ಉದ್ರಿಕ್ತ ವಾತಾವರಣ: ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಕೊಣಾಜೆ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರನ್ನು ವಶಕ್ಕೆ ಪಡೆಯುತ್ತಿದ್ದಂತೆ, ಸ್ಥಳೀಯರು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದರು. ನಂತರ ಕೊಣಾಜೆ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಎಸಿಪಿ ರಾಮರಾವ್, ಕೊಣಾಜೆ ಠಾಣಾಧಿಕಾರಿ ರವೀಶ ನಾಯಕ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಸ್ಥಳಕ್ಕೆ ಬಂದು, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT