ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ನಾಯಕರನ್ನು ಸಂಪರ್ಕಿಸಿಲ್ಲ’

ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ: ಎಂ.ಬಿ.ಪಾಟೀಲ
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ‘27 ವರ್ಷಗಳಿಂದ ಕಾಂಗ್ರೆಸ್‌ ನಿಷ್ಠನಾಗಿರುವೆ. ಕೆಲ ತಪ್ಪುಗಳು ನನ್ನಿಂದ ನಡೆದಿರಬಹುದು. ಆದರೆ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ದ್ರೋಹ ಬಗೆದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೂ ಬಿಜೆಪಿ ನಾಯಕರ ಸಂಪರ್ಕದಲ್ಲಿಲ್ಲ’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರಲಿಲ್ಲ. ಯಾರಿಗೂ ಕೊಡಬೇಡಿ ಎಂದು ಎಲ್ಲಿಯೂ ಹೇಳಿರಲಿಲ್ಲ. ಆದರೆ ಕೆಲವರು ನನಗೆ ಸಚಿವ ಸ್ಥಾನ ಕೊಡಲೇ ಕೂಡದು. ಕೊಟ್ಟರೆ ರಾಜೀನಾಮೆ ನೀಡುವುದಾಗಿ ವರಿಷ್ಠರ ಬಳಿ ಬ್ಲಾಕ್‌ಮೇಲ್‌ ಮಾಡಿದ್ದರಿಂದ ನಾನು ಬಲಿಪಶುವಾದೆ’ ಎಂದರು.

‘ಆರೋಗ್ಯ ಸಚಿವ ಶಿವಾನಂದ ಪಾಟೀಲರನ್ನು ಅಭಿನಂದಿಸುತ್ತೇನೆ. ನನಗಾಗಿ ಅವರು ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ನಿಮ್ಮ ಸ್ಥಾನ ಬಿಟ್ಟುಕೊಡಬೇಡಿ; ನಾನು ನನ್ನ ಹಕ್ಕನ್ನಷ್ಟೇ ಕೇಳಿದ್ದೆ. ನನಗೆ, ಐದು ವರ್ಷ ಯಾವ ರೀತಿ ಸಹಕಾರ ನೀಡಿದ್ದೀರೋ ಅದಕ್ಕೂ ನೂರುಪಟ್ಟು ಹೆಚ್ಚಿನ ಸಹಕಾರವನ್ನು ನಿಮಗೆ ನೀಡುತ್ತೇನೆಂದು ಈಗಾಗಲೇ ಅವರಿಗೆ ತಿಳಿಸಿರುವೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

‘ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ ನನ್ನ ನಾಯಕರು. ಎಐಸಿಸಿ ಸೂಚನೆಯಂತೆ ನವದೆಹಲಿಗೆ ತೆರಳಿ ರಾಹುಲ್‌ ಜತೆ ಈಗಾಗಲೇ ಮಾತನಾಡಿರುವೆ. ಯಾವ ಭರವಸೆಯನ್ನೂ ಅವರು ನೀಡಿಲ್ಲ. ನನಗಾಗಿ ಸಮಯ ನೀಡಿದ್ದರಷ್ಟೆ’ ಎಂದರು.

‘ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಹೇಳುವವರು, ನನಗೆ ಸಚಿವ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ ವರಿಷ್ಠರಿಗೆ ಬ್ಲಾಕ್‌ಮೇಲ್‌ ಮಾಡುವ ಅಗತ್ಯವೇನಿತ್ತು?’ ಇದರಲ್ಲೇ ಅವರ ಬುದ್ಧಿ ಏನು ಎಂಬುದು ಜಗಜ್ಜಾಹೀರಾಗಿದೆ’ ಎಂದು ಸಚಿವ ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಸಿ.ಎಸ್‌.ನಾಡಗೌಡ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ತಮಗೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಬಬಲೇಶ್ವರ, ತಿಕೋಟಾದಲ್ಲಿ ಜನರು ಹಾಗೂ ಅಭಿಮಾನಿಗಳು ಸರದಿ ಉಪವಾಸ ನಡೆಸುತ್ತಿದ್ದು, ಇದಕ್ಕಾಗಿ ಅವರಿಗೆ ಚಿರಋಣಿಯಾಗಿರುವುದಾಗಿ ಹೇಳಿದರು. ಹೋರಾಟ ಕೈ ಬಿಡುವಂತೆ ಮನವಿ ಮಾಡಿಕೊಳ್ಳುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT