ಶನಿವಾರ, ಜುಲೈ 31, 2021
21 °C
13 ಮಕ್ಕಳು, 15 ಮಂದಿ ವೃದ್ಧರಿಗೂ ಸೋಂಕು: ಸಂಪರ್ಕ ಪತ್ತೆಯಾಗದ 54 ಮಂದಿ

ಮಂಗಳೂರು: ಒಂದೇ ದಿನ 183 ಕೋವಿಡ್–19 ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಅತ್ಯಧಿಕ 183 ಮಂದಿಗೆ ಕೋವಿಡ್–19 ದೃಢವಾಗಿದ್ದು, ಇದರಲ್ಲಿ 54 ಮಂದಿಗೆ ಸೋಂಕು ಎಲ್ಲಿಂದ ತಗಲಿದೆ ಎಂಬುದನ್ನು ಇನ್ನೂ ಪತ್ತೆ ಮಾಡಲಾಗುತ್ತಿದೆ.

ಸೋಂಕು ತಗಲಿರುವ 183 ಜನರ ಪೈಕಿ 13 ಮಕ್ಕಳಿದ್ದರೆ, 15 ಮಂದಿ ವೃದ್ಧರು ಸೇರಿದ್ದಾರೆ. ಏಳು ದಿನದ ಗಂಡು ಮಗು, 1, 3, 11, 14, 15 ವರ್ಷದ ಬಾಲಕರು, 1 ವರ್ಷದ ಇಬ್ಬರು ಬಾಲಕರು, 3, 4, 5, 11 ಹಾಗೂ 13 ವರ್ಷದ ಬಾಲಕಿಯರಿಗೆ ಕೋವಿಡ್–19 ದೃಢವಾಗಿದೆ. ಬಹುತೇಕ ಮಕ್ಕಳಿಗೆ ಪ್ರಾಥಮಿಕ ಸಂಪರ್ಕದಿಂದಲೇ ಸೋಂಕು ತಗಲಿದ್ದು, 16 ವರ್ಷದ ಬಾಲಕನಲ್ಲಿ ಐಎಲ್‌ಐನಿಂದ ಕೋವಿಡ್–19 ದೃಢವಾಗಿದೆ.

ಇನ್ನು 73, 72, 70, 62, 61, 60 ವರ್ಷದ ವೃದ್ಧರು, 69 ವರ್ಷದ ಇಬ್ಬರು, 65 ವರ್ಷದ ನಾಲ್ವರು, 66 ವರ್ಷದ ಮೂವರಿಗೆ ಸೋಂಕು ಇರುವುದು ದೃಢವಾಗಿದೆ. ರೋಗಿ ಸಂಖ್ಯೆ 10588 ರ ಪ್ರಾಥಮಿಕ ಸಂಪರ್ಕದಿಂದಲೇ 13 ಮಂದಿಗೆ ಸೋಂಕು ತಗಲಿದೆ.

ಪಾಲಿಕೆ ಸದಸ್ಯೆಗೆ ಕೋವಿಡ್‌: ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್‌ ವಾರ್ಡ್‌ನ ಸದಸ್ಯೆಯೊಬ್ಬರಿಗೆ ಹಾಗೂ ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ.

ಪಾಲಿಕೆಯ ಸದಸ್ಯೆ ಕೆಲ ದಿನಗಳ ಹಿಂದೆ ಕುಂಜತ್ತಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸಭೆಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಏಳು ದಿನಗಳಿಂದ ಪಾಲಿಕೆ ಸದಸ್ಯೆ ಕ್ವಾರಂಟೈನ್‌ನಲ್ಲಿದ್ದು, ಬುಧವಾರ ಬಂದ ವರದಿಯಲ್ಲಿ ಅವರಿಗೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಅವರೇ ಮಾಹಿತಿ ನೀಡಿದ್ದಾರೆ.

ಬಾಣಂತಿ ಸೇರಿ ಮೂರು ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನಿಂದ ಬುಧವಾರ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 29ಕ್ಕೆ ಏರಿದೆ.

ಉಳ್ಳಾಲದ 62 ವರ್ಷದ ವೃದ್ಧೆ, ಪುತ್ತೂರಿನ 32 ವರ್ಷದ ಮಹಿಳೆ ಹಾಗೂ ಭಟ್ಕಳದ 60 ವರ್ಷದ ವೃದ್ಧ ಬುಧವಾರ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಆಗಿದ್ದ ಈ ಮೂವರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಪೈಕಿ ಇಬ್ಬರು ಮಹಿಳೆಯರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಭಟ್ಕಳದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ವಾರ ಹೆರಿಗೆಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ತಾಲ್ಲೂಕಿನ ಕೂರ್ನಡ್ಕದ ಮಹಿಳೆಯ ಗಂಟಲ ದ್ರವ ಮಾದರಿಯ ಪರೀಕ್ಷೆಯಲ್ಲಿ ಆಕೆಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತ್ತು. ಆಕೆಯ ಹಸಿಗೂಸಿಗೂ ಸೋಂಕು ತಗಲಿತ್ತು. ಬಾಣಂತಿ ಮತ್ತು ಮಗುವನ್ನು ವೆನ್ಲಾಕ್‌ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಣಂತಿ ಬುಧವಾರ ಮೃತಪಟ್ಟಿದ್ದಾರೆ. ಹಸುಳೆ ಚೇತರಿಸಿಕೊಂಡಿದೆ.

ಸಿಐಎಸ್‌ಎಫ್‌ ಜವಾನರಿಗೂ ಸೋಂಕು

ಸುರತ್ಕಲ್‌ ಪ್ರದೇಶದಲ್ಲಿ ಒಟ್ಟು 33 ಮಂದಿಗೆ ಕೋವಿಡ್-19 ದೃಢವಾಗಿದ್ದು, 24 ಜವಾನರು ಹಾಗೂ ಒಂದು ವರ್ಷದ ಮಗು ಸೇರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯುನಿಟ್‌ನ 25 ಮಂದಿ ಸೋಂಕು ತಗಲಿದೆ.

ಯುನಿಟ್‌ ಅನ್ನು ಜಿಲ್ಲಾಡಳಿತದ ವತಿಯಿಂದ ಸೀಲ್‌ಡೌನ್‌ ಮಾಡದಿದ್ದರೂ, ಎಚ್ಚರಿಕೆಯ ಭಿತ್ತಿಪತ್ರಿಕೆ ಅಲ್ಲಲ್ಲಿ ಅಂಟಿಸಿ, ಸುತ್ತಮುತ್ತಲಿನ ಜನರಿಗೆ ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಹೋಂ ಕ್ವಾರಂಟೈನ್‌ ಮೂಲಕ ಚಿಕಿತ್ಸೆ ನೀಡಲು ಸರ್ಕಾರ ಆದೇಶಿಸಿದ್ದು, ಜವಾನರನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಇರುವಲ್ಲಿಯೇ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ದಿನದ ಮಗುವಿಗೆ ಕೋವಿಡ್

ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪುವಿನ ಏಳು ದಿನದ ಮಗುವಿಗೆ ಸೋಂಕು ದೃಢವಾಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಗೆ ಜೂನ್‌ 30 ರಂದು ಹೆರಿಗೆಯಾಗಿತ್ತು. ಹೆರಿಗೆಯ ಮೊದಲು ಮಹಿಳೆಯ ಗಂಟಲುದ್ರವ ಪರೀಕ್ಷೆ ನಡೆಸಿದ್ದು ಸೋಂಕು ದೃಢವಾಗಿತ್ತು. ಇದೀಗ ಮಹಿಳೆಯ 7 ದಿನದ ಮಗುವಿಗೂ ಸೋಂಕು ದೃಢವಾಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಈ ಮಹಿಳೆ ಮತ್ತು ಆಕೆಯ ಪತಿ ತೊಕ್ಕೊಟ್ಟಿನ ಕಲ್ಲಾಪಿನ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಅಲ್ಲೇ ಪಕ್ಕದಲ್ಲೇ ವಾಸವಾಗಿದ್ದರು.

ಮುಕ್ಕಚ್ಚೇರಿಯಲ್ಲಿ ಅಂತ್ಯಕ್ರಿಯೆ: ಕೋವಿಡ್‌–19 ನಿಂದ ಮೃತಪಟ್ಟ 62 ವರ್ಷದ ಮಹಿಳೆ ಅಂತ್ಯಕ್ರಿಯೆಯನ್ನು ಮುಕ್ಕಚ್ಚೇರಿ ಸಿದ್ದೀಕ್ ಜುಮ್ಮಾ ಮಸೀದಿ ವಠಾರದಲ್ಲಿ ನೆರವೇರಿಸಲಾಯಿತು. ಜಮಾಅತ್ ಆಡಳಿತ ಸಮಿತಿ ಸದಸ್ಯರು, ಊರವರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದರು. ಸ್ಥಳೀಯ ಜಮಾತಿನ ಯುವಕರು ಸೇರಿ ಪಿ.ಪಿ.ಇ. ಕಿಟ್ ಧರಿಸಿ ದಫನ ಕಾರ್ಯ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು