ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಗೊಂದಲದಿಂದ ಜನತೆಗೆ ಆತಂಕ: ಖಾದರ್

ಬದಲಾದ ನಿರ್ಧಾರಗಳ ಬಹಿರಂಗ ಪಡಿಸಲು ಆಗ್ರಹ
Last Updated 26 ಡಿಸೆಂಬರ್ 2020, 12:03 IST
ಅಕ್ಷರ ಗಾತ್ರ

ಮಂಗಳೂರು: ‘ರಾತ್ರಿ ಕರ್ಫ್ಯೂ ವಿಧಿಸಿದ, ಬದಲಾಯಿಸಿದ ಮತ್ತು ಹಿಂಪಡೆದ ಕಾರಣಗಳನ್ನು ಸರ್ಕಾರ ಬಹಿರಂಗ ಪಡಿಸಲಿ’ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ನಿರ್ಧಾರಗಳು ರಾಜಕೀಯವಾಗಿ ಕೈಗೊಂಡರೇ? ವೈಜ್ಞಾನಿಕ ಕಾರಣಗಳಿವೆಯೇ? ಎಂಬುದನ್ನು ಜನತೆಗೆ ತಿಳಿಸಲಿ. ಸರ್ಕಾರದ ಗೊಂದಲಮಯ ನಿರ್ಧಾರಗಳಿಂದಾಗಿ ಜನರಲ್ಲಿ ಆತಂಕ ಹೆಚ್ಚಿದೆ’ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದರು.

‘ಸರ್ಕಾರದ ಆದೇಶಗಳು ತಾಂತ್ರಿಕ ಕಾರಣ ಹಾಗೂ ತಜ್ಞರ ಸಮಿತಿ ವರದಿ ಆಧರಿಸಿರುತ್ತವೆ. ಅಂತಹ ದಾಖಲೆಗಳಿದ್ದರೆ ನೀಡಲಿ. ಗೊಂದಲ ಸೃಷ್ಟಿಸುವ ಬದಲಾಗಿ, ಕೋವಿಡ್ 2ನೇ ಅಲೆ ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಿ. ಲಸಿಕೆಯ ಬಗ್ಗೆಯೂ ಸ್ಪಷ್ಟಪಡಿಸಲಿ. ಜಾಗೃತಿ ಮೂಡಿಸಲಿ. ಕೊರೊನಾದ ಖರ್ಚು–ವೆಚ್ಚಗಳ ಬಗ್ಗೆ ಲೆಕ್ಕ ನೀಡಲಿ’ ಎಂದು ಸಲಹೆ ನೀಡಿದರು.

‘ಕೋವಿಡ್ ಕಡಿಮೆಯಾದ ಮೇಲೆ ಸಿದ್ಧತೆ ಮಾಡಿದಂತೆ 2ನೇ ಹಂತದಲ್ಲಿ ಎಡವುದು ಬೇಡ. ಮುಖ್ಯಮಂತ್ರಿ, ಸಚಿವರುಗಳ ನಡುವಿನ ಸಮನ್ವಯತೆ ಕೊರತೆಯ ಹೊರೆಯನ್ನು ಜನರ ಮೇಲೆ ಹೇರುವುದು ಬೇಡ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗೊಂದು ಆದೇಶಗಳೂ ಬೇಡ. ಇದರಿಂದ ಆಡಳಿತದ ಅತಂತ್ರ ಮಾತ್ರವಲ್ಲ, ಜನರೂ ಆತಂಕಕ್ಕೀಡಾಗುತ್ತಿದ್ದಾರೆ’ ಎಂದರು.

‘ವಿದೇಶದಿಂದ ಬರುವವರನ್ನು ಪರೀಕ್ಷಿಸಿದರೆ ಸಾಕೇ? ವೈರಸ್‌ ದೇಶದೊಳಗೆ ರೂಪಾಂತರಗೊಳ್ಳುವ ಸಾಧ್ಯತೆ ಇಲ್ಲವೇ? ಕೋವಿಡ್ ಮೊದಲ ಹಂತದ ನಿರ್ವಹಣೆ, ರೋಗದ ಬಗ್ಗೆ ಏನು ಸಂಶೋಧನೆ–ಅಧ್ಯಯನ ನಡೆಸಿದ್ದಾರೆ? ವರದಿ ಏನಿದೆ? ಆಯುಷ್ಮಾನ್‌ ಯೋಜನೆಯಿಂದ ಸಾಮಾನ್ಯ ಕೋವಿಡ್ ಸೋಂಕಿತರನ್ನು (ಐಸಿಯು ಹೊರತುಪಡಿಸಿ) ಹೊರಗಿಟ್ಟದ್ದೇಕೆ?’ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಪೊಲೀಸರ ಮೇಲೆ ವಿಶ್ವಾಸ:‘ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿದ್ದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಆದರೆ, ಬೆಂಗಾವಲು ಪೊಲೀಸರೇ ಕ್ರಮ ಕೈಗೊಂಡಿದ್ದು, ಆರೋಪಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತೇನೆ. ಪೊಲೀಸರ ಮೇಲೆ ವಿಶ್ವಾಸ ಇದೆ. ಅವರು ವಿಚಾರಣೆ ನಡೆಸಿಯೇ ಆರೋಪಿಯನ್ನು ಬಿಟ್ಟಿರುವುದನ್ನು. ಅದನ್ನು ಪ್ರಶ್ನಿಸುವುದಿಲ್ಲ. ನಾನು ಕೇಳಿ ಭದ್ರತೆ ಪಡೆದಿಲ್ಲ. ಸರ್ಕಾರವೇ ನೀಡಿದೆ’ ಎಂದು ಅವರನ್ನು ವ್ಯಕ್ತಿಯೊಬ್ಬ ಹಿಂಬಾಲಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದರು.

‘ಆದರೆ, ಜಿಲ್ಲೆಯಲ್ಲಿ ಈಚೆಗೆ ರೌಡಿಗಳ ಅಟ್ಟಹಾಸ, ಕೊಲೆ, ಹಲ್ಲೆ, ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಯಾರ ಲಾಬಿಗೆ ಮಣಿಯುತ್ತಿದ್ದಾರೆ?

‘ಸರ್ಕಾರದ ಕ್ಷಣಕ್ಕೊಂದು ನಿರ್ಧಾರದಿಂದ ಪೋಷಕರು, ವಿದ್ಯಾರ್ಥಿ ಸಮೂಹ ಹಾಗೂ ಶಿಕ್ಷಣ ವ್ಯವಸ್ಥೆ ಒತ್ತಡಕ್ಕೆ ಸಿಲುಕಿದೆ. ಯಾರ ಲಾಬಿಗೆ ಮಣಿಯುತ್ತಿದ್ದಾರೆ? ಮಿದುಳು ಇಲ್ಲವೇ?’ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಸ್ಪಷ್ಟ ನಿಲುವುಗಳನ್ನು ನೀಡಬೇಕು. ಮತ್ತೊಮ್ಮೆ ಶಿಕ್ಷಣ ವಲಯವನ್ನು ಸಂದಿಗ್ಧತೆಗೆ ದೂಡಬಾರದು’ ಎಂದು ಮನವಿ ಮಾಡಬಾರದು.

ಎನ್‌ಆರ್‌ಸಿ, ಸಿಎಎ ಸದ್ಯ ಚರ್ಚೆ ಇಲ್ಲ: ಶಾಸಕ

‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗಳ ಜಾರಿ ಇಲ್ಲ ಎಂದು ಸಂಸತ್ತಿನಲ್ಲಿ ಪ್ರಧಾನಿ ಭರವಸೆ ನೀಡಿದ್ದು, ಸದ್ಯಕ್ಕೆ ಆ ಬಗ್ಗೆ ಚರ್ಚೆ ಇಲ್ಲ’ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

‘ಜಾರಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ’ ಎಂಬ ಪ್ರಶ್ನೆಗೆ, ‘ಪ್ರಧಾನಿಯ ಸಂಸತ್ತಿನ ಹೇಳಿಕೆಗಿಂತಲೂ ಹೊರಗೆ ಪ್ರಚಾರಕ್ಕಾಗಿ ಯಾರೋ ನೀಡುವ ಹೇಳಿಕೆ ಮುಖ್ಯವೇ?’ ಎಂದು ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಈಶ್ವರ್‌ ಉಳ್ಳಾಲ್, ಮುಸ್ತಾಫ, ಜಬ್ಬಾರ್, ಆಯ್ಯೂಬ್, ಉಸ್ಮಾನ್, ಗಿರೀಶ್ ಶೆಟ್ಟಿ, ಮುನೀರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT