ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕದಲ್ಲಿ ಪಟ್ಲ ಫೌಂಡೇಷನ್ ಯಕ್ಷ ಪ್ರದರ್ಶನ

ಜು.9ರಿಂದ 75 ದಿನಗಳ ಕಲಾ ಪ್ರವಾಸ
Published 2 ಜುಲೈ 2024, 4:48 IST
Last Updated 2 ಜುಲೈ 2024, 4:48 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರು ಅಮೆರಿಕದಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಅಣಿಯಾಗಿದ್ದು, ಇದೇ 9ರಂದು ಪ್ರವಾಸ ಹೊರಡಲಿದ್ದಾರೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ ಪಟ್ಲ ಫೌಂಡೇಷನ್ ಟ್ರಸ್ಟ್ ಅಮೆರಿಕ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ.ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಅಭಿಯಾನದ ಭಾಗವಾಗಿ ಪ್ರದರ್ಶನ ಆಯೋಜಿಸಿದ್ದಾರೆ’ ಎಂದರು.

‘ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದದಲ್ಲಿ ನಡೆಯುವ ಕಲಾ ಪ್ರವಾಸದಲ್ಲಿ ಹಿಮ್ಮೇಳದ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೊ.ಎಂ.ಎಲ್. ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಸೇರಿ ಒಟ್ಟು ಒಂಬತ್ತು ಕಲಾವಿದರು 75 ದಿನಗಳ ಕಾಲ ಕಲಾ ಪ್ರವಾಸ ನಡೆಸಲಿದ್ದಾರೆ. ಪುತ್ತಿಗೆ ಮಠದ ಶಾಖೆಗಳು, ಕನ್ನಡ ಕೂಟ, ಯಕ್ಷಗಾನ ಸಂಘ, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ –ಸಂಸ್ಥೆಗಳು ಸಹಕಾರ ನೀಡಲಿವೆ’ ಎಂದು ತಿಳಿಸಿದರು. 

‘ದೇವಿ ಮಹಾತ್ಮೆ, ಮಹಿಷಮರ್ದಿನಿ, ಸುದರ್ಶನ ವಿಜಯ, ನರಾಸುರ ಮೋಕ್ಷ ಮೊದಲಾದ ಎರಡು ತಾಸಿನ ಮಿತಿಯಲ್ಲಿ ಪ್ರದರ್ಶಿಸಬಹುದಾದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳಲಾಗಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಎಡಿಸನ್, ಕೊಲಂಬಸ್, ಬಾಸ್ಟನ್ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ಆಯೋಜನೆಯಾಗಿದೆ’ ಎಂದರು.

ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ‘2023ರ ಜೂನ್– ಜುಲೈ ತಿಂಗಳಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ನೇತೃತ್ವದಲ್ಲಿ ನಮ್ಮ ತಂಡವು ಯುರೋಪ್ ಖಂಡದ ಲಂಡನ್, ಸ್ಕಾಟ್‌ಲ್ಯಾಂಡ್, ಜರ್ಮನಿ, ಫ್ರಾನ್ಸ್, ಪ್ಯಾರಿಸ್ ಮುಂತಾದ ಕಡೆ ಕಾರ್ಯಕ್ರಮ ನೀಡಿ ವಿದೇಶಿಗರು, ಭಾರತೀಯರು, ಕೆಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕಲೆ ಪರಿಚಯಿಸುವಲ್ಲಿ ಸಫಲವಾಗಿದೆ. ಅಲ್ಲಿನ ಲೀಡ್ಸ್ ಹಾಗೂ ಡರ್‌ಹಮ್ ವಿಶ್ವವಿದ್ಯಾಲಯಗಳಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಲಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT