ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತೀಯ ಗೂಂಡಾಗಿರಿ ಪ್ರಕರಣ: ಸಂತ್ರಸ್ತನ ಜೊತೆ ಪೊಲೀಸ್‌ ಅನುಚಿತ ವರ್ತನೆ

Published 5 ಜೂನ್ 2023, 15:37 IST
Last Updated 5 ಜೂನ್ 2023, 15:37 IST
ಅಕ್ಷರ ಗಾತ್ರ

ಮಂಗಳೂರು: ‘ಸೋಮೇಶ್ವರ ಕಡಲ ಕಿನಾರೆಯಲ್ಲಿ ನಮ್ಮ ಮೇಲೆ ಈಚೆಗೆ ಮತೀಯ ಗೂಂಡಾಗಿರಿ ನಡೆದ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿಯೂ ನನ್ನ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಈ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿಯೊಬ್ಬರು ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರಿಗೆ ದೂರು ನೀಡಿದ್ದಾರೆ.

‘ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿಯೊಬ್ಬರು ಸ್ಥಳೀಯ ಠಾಣೆಯ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಕುರಿತು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ  ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರಿಗೆ ಸೂಚನೆ ನೀಡಿದ್ದೇನೆ. ಸ್ಥಳೀಯ ಠಾಣೆಯ ಸಿಬ್ಬಂದಿ ತಪ್ಪೆಸಗಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ. 

‘ನಮ್ಮ ಮೇಲೆ ಹಲ್ಲೆ ನಡೆದ ಬಳಿಕ ಸ್ಥಳೀಯ ಠಾಣೆಯ ಪಿಎಸ್‌ಐ ನಮ್ಮನ್ನು ಠಾಣೆಗೆ ಕರೆಸಿಕೊಂಡು ಖಾಲಿ ಕಾಗದಕ್ಕೆ ಬಲವಂತದಿಂದ ಸಹಿ ಪಡೆದಿದ್ದರು. ಇದನ್ನು ಪ್ರಶ್ನಿಸಿದಾಗ ಅವರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಸಂತ್ರಸ್ತ ವಿದ್ಯಾರ್ಥಿ ಪೊಲೀಸ್‌ ಕಮಿಷನರ್ ಅವರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಗೊತ್ತಾಗಿದೆ.

ನಗರದ ಪ್ಯಾರಾ ಮೆಡಿಕಲ್‌ ಕಾಲೇಜಿನ ಮೂವರು ವಿದ್ಯಾರ್ಥಿನಿಯರು  ಮೂವರು ವಿದ್ಯಾರ್ಥಿಗಳ ಜೊತೆ ಗುರುವಾರ (ಜೂನ್‌ 1ರಂದು)  ಸಂಜೆ ಸೋಮೇಶ್ವರ ಕಿನಾರೆಗೆ ತೆರಳಿದ್ದರು. ಯುವತಿಯರು ಬೇರೆ ಧರ್ಮದ  ವಿದ್ಯಾರ್ಥಿಗಳ ಜೊತೆಗೆ ಕಿನಾರೆಗೆ ಬಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಕೆಲವು ಯುವಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿದ್ಯಾರ್ಥಿನಿಯ ಜೊತೆಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ  ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT