ಬುಧವಾರ, ಜನವರಿ 22, 2020
28 °C

ಪ್ರತಿಮೆ ವಿಚಾರದಲ್ಲಿ ರಾಜಕೀಯ ನಿಲ್ಲಿಸಿ: ಐವನ್‌ ಡಿಸೋಜ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಧರ್ಮೀಯರು ಬೃಹತ್‌ ಏಸು ಪ್ರತಿಮೆ ಸ್ಥಾಪಿಸುವ ಯೋಜನೆಯನ್ನು ರಾಜಕೀಯ ದುರುದ್ದೇಶದಿಂದ ವಿರೋಧಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಕೈಬಿಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆಗ್ರಹಿಸಿದರು.

ಮಂಗಳೂರು ಪ್ರದೇಶ ಕೆಥೋಲಿಕ್‌ ಸಭಾ ಪದಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಕ್ರೈಸ್ತ ಧರ್ಮೀಯ ಸದಸ್ಯರೊಂದಿಗೆ ಶನಿವಾರ ತಮ್ಮ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾರೋಬೆಲೆಯಲ್ಲಿ ಪ್ರತಿಮೆ ನಿರ್ಮಿಸುತ್ತಿರುವುದು ಶಾಸಕ ಡಿ.ಕೆ.ಶಿವಕುಮಾರ್‌ ಅವರಲ್ಲ. ಶತಮಾನಗಳ ಕಾಲದಿಂದ ಅಲ್ಲಿ ನೆಲೆಸಿರುವ ಕ್ರೈಸ್ತ ಧರ್ಮೀಯರು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಆದರೆ, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಸುಳ್ಳು ಆರೋಪ ಮಾಡುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

1,662ನೇ ಇಸವಿಯಲ್ಲೇ ಹಾರೋಬೆಲೆ ಗ್ರಾಮಕ್ಕೆ ಕ್ರೈಸ್ತ ಧರ್ಮೀಯರು ಬಂದಿದ್ದರು. ಅಂದಿನಿಂದ ಈವರೆಗೆ ಅಲ್ಲಿ ಸಾವಿರಾರು ಮಂದಿ ಕ್ರೈಸ್ತರು ನೆಲೆಸಿದ್ದಾರೆ. ಈಗ ಹಾರೋಬೆಲೆ ಗ್ರಾಮದಲ್ಲಿ ಸುಮಾರು 1,400 ಕ್ರೈಸ್ತ ಧರ್ಮೀಯ ಕುಟುಂಬಗಳು ನೆಲೆಸಿವೆ. ಆ ಜನರೇ ‘ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌’ ಹೆಸರಿನಲ್ಲಿ ಪ್ರತಿಮೆ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎಂದರು.

ಕ್ರೈಸ್ತ ಧರ್ಮೀಯರ ಕಾರಣದಿಂದಾಗಿಯೇ ಆ ಸ್ಥಳಕ್ಕೆ ‘ಕಪಾಲ ಬೆಟ್ಟ’ ಎಂಬ ಹೆಸರು ಬಂದಿದೆ. ‘ಕಪಾಲ’ ಎಂದರೆ ಏಸು ಕ್ರಿಸ್ತ ಶಿಲುಬೆಗೇರಿದ ಬೆಟ್ಟದ ಹೆಸರು. ಕಪಾಲ ಬೆಟ್ಟದಲ್ಲಿ ಪ್ರತಿಮೆ ಸ್ಥಾಪಿಸುವ ವಿಷಯ ದಿಢೀರನೆ ಹುಟ್ಟಿಕೊಂಡಿಲ್ಲ. ಟ್ರಸ್ಟ್‌ ಮನವಿ ಆಧರಿಸಿ 2017ರಲ್ಲೇ 10 ಎಕರೆ ಜಮೀನನ್ನು 98 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು. 2019ರಲ್ಲಿ ಗುತ್ತಿಗೆ ಶುಲ್ಕವನ್ನು ಪರಿಷ್ಕರಿಸಿ ಹೊಸ ಆದೇಶ ಹೊರಡಿಸಲಾಗಿದೆ. ₹ 10.80 ಲಕ್ಷ ಗುತ್ತಿಗೆ ಶುಲ್ಕವನ್ನು ಮಾತ್ರ ಶಿವಕುಮಾರ್ ಅವರು ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ತಪ್ಪಾಗಿ ಬಿಂಬಿಸಿ, ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಸೌಹಾರ್ದತೆ ಕೊಳ್ಳಿ ಇಡಬೇಡಿ

ಕನಕಪುರದಲ್ಲಿ ಎಲ್ಲ ಧರ್ಮದ ಜನರು ಒಟ್ಟಾಗಿ ಬದುಕುತ್ತಿದ್ದಾರೆ. ಅಲ್ಲಿನ ಕ್ರೈಸ್ತ ಧರ್ಮೀಯರು ಉತ್ತಮ ಕೃಷಿಕರಾಗಿ ಹೆಸರು ಮಾಡಿದ್ದಾರೆ. ಹಾರೋಬೆಲೆಯಿಂದ 36 ಮಂದಿ ಧರ್ಮ ಗುರುಗಳು ಮತ್ತು 114 ಸಿಸ್ಟರ್‌ಗಳು ಬಂದಿದ್ದಾರೆ. ಸಮಾಜ ಸೇವೆಯ ಅತ್ಯುತ್ತಮ ಮಾದರಿ ಆ ಗ್ರಾಮದಲ್ಲಿದೆ. ಪ್ರತಿಮೆ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡು ಸೌಹಾರ್ದತೆಗೆ ಕೊಳ್ಳಿ ಇಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡಬಾರದು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವೇ ಪ್ರತಿಮೆ ನಿರ್ಮಾಣಕ್ಕೆ ಎಲ್ಲ ರೀತಿಯ ನೆರವು ನೀಡಬೇಕು. ಆ ಮೂಲಕ ಕ್ರೈಸ್ತ ಧರ್ಮೀಯರ ಭಾವನೆಗಳನ್ನು ಗೌರವಿಸಬೇಕು. ಪ್ರತಿಮೆಯ ವಿಷಯವನ್ನು ವಿವಾದವನ್ನಾಗಿ ಮಾಡಲು ಹೊರಟಿರುವ ಮುಖಂಡರಿಗೆ ಬಿಜೆಪಿ ವರಿಷ್ಠರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ರವಾನಿಸಲಾಗಿದೆ. ಶೀಘ್ರದಲ್ಲಿಯೇ ಈ ಭಾಗದ ಮುಖಂಡರ ನಿಯೋಗ ಕರೆದೊಯ್ದು ಮನವಿ ಸಲ್ಲಿಸಲಾಗುವುದು ಎಂದರು.

ಮಂಗಳೂರು ಪ್ರದೇಶ ಕೆಥೋಲಿಕ್‌ ಸಭಾ ಅಧ್ಯಕ್ಷ ಪಾವ್ಲ್‌ ರೋಲ್ಫಿ ಡಿಕೋಸ್ತಾ, ಮಹಾನಗರ ಪಾಲಿಕೆ ಸದಸ್ಯರಾದ ನವೀನ್‌ ಡಿಸೋಜ, ಎ.ಸಿ.ವಿನಯರಾಜ್‌, ಲ್ಯಾನ್ಸಿಲೋಟ್‌ ಪಿಂಟೊ, ಜೆಸಿಂತಾ ವಿಜಯ್‌ ಆಲ್ಫ್ರೆಡ್‌, ಜೆಡಿಎಸ್‌ ಮುಖಂಡ ಸುಶೀಲ್‌ ನರೋನ್ಹಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು