ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ ಫೋನ್‌ ಇನ್‌’ | ಅನಧಿಕೃತ ಫಲಕ ತೆರವಿಗೆ ವಿಶೇಷ ಕಾರ್ಯಾಚರಣೆ

ಕರೆಗಳ ಮಹಾಪೂರ, ಸಮಾಧಾನಕರ ಉತ್ತರ: ಕಾರ್ಯಕ್ರಮದಲ್ಲಿ ಡಾ.ಪಿ.ಎಸ್‌.ಹರ್ಷ
Last Updated 30 ಆಗಸ್ಟ್ 2019, 15:37 IST
ಅಕ್ಷರ ಗಾತ್ರ

ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಶುಕ್ರವಾರ ‘ಪ್ರಜಾವಾಣಿ’ಯ ಮಂಗಳೂರು ಬ್ಯೂರೊ ಕಚೇರಿಯಲ್ಲಿ ಆಯೋಜಿಸಿದ್ದ ನೇರ ಫೋನ್‌ ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಂಚಾರ ದಟ್ಟಣೆ, ಅಡ್ಡಾದಿಡ್ಡಿ ವಾಹನ ನಿಲುಗಡೆ, ಶಾಲಾ ವಾಹನಗಳಲ್ಲಿ ನಿಯಮ ಉಲ್ಲಂಘನೆ, ಅಪರಾಧ ಕೃತ್ಯಗಳ ಹೆಚ್ಚಳ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತು ಓದುಗರು ಅಹವಾಲು ಹೇಳಿದರು. ನಿರಂತರವಾಗಿ ಬರುತ್ತಿದ್ದ ಕರೆಗಳಿಗೆ ಸಾವಧಾನದಿಂದ ಉತ್ತರಿಸಿದ ಕಮಿಷನರ್‌, ಪರಿಹಾರದ ಭರವಸೆ ನೀಡಿದರು. ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೇಳಿಬಂದ ಪ್ರಶ್ನೆ ಮತ್ತು ಉತ್ತರಗಳ ವಿವರ ಇಲ್ಲಿದೆ...

ಲೂಸಿ ರೋಡ್ರಿಗಸ್‌, ಮಂಗಳೂರು

ಬಿಜೈ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಮೀಸಲಿಟ್ಟ ಸ್ಥಳವನ್ನು ನಿತ್ಯವೂ ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಳ್ಳುತ್ತಿದ್ದಾರೆ.

ಕಮಿಷನರ್‌: ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಬೀದಿಬದಿ ವ್ಯಾಪಾರಿಗಳನ್ನು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳಿಸಲಾಗುವುದು.

ವಿನಾಯಕ ಪ್ರಭು, ಸುರತ್ಕಲ್‌

ಬಲ್ಮಠ ರಸ್ತೆಯಲ್ಲಿ ಮಿಲಾಗ್ರಿಸ್‌ ಬಳಿ ಎಲ್ಲೆಂದರಲ್ಲಿ ಬಸ್ಸುಗಳ ನಿಲುಗಡೆ ನೀಡಲಾಗುತ್ತಿದೆ. ಇದರಿಂದ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಕಮಿಷನರ್‌: ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಬಸ್ಸುಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಈ ಸ್ಥಳದಲ್ಲಿ ನಿರಂತರವಾಗಿ ನಿಗಾ ಇಡಲು ಸೂಚಿಸಲಾಗುವುದು.

ಇಸ್ಮಾಯಿಲ್, ಸುರತ್ಕಲ್‌

ವಾಣಿಜ್ಯ ಮಳಿಗೆಗಳವರು ರಸ್ತೆಗೆ ಮುಖಮಾಡಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಇದು ನ್ಯಾಯಯುತ ಕ್ರಮವಲ್ಲ.

ಕಮಿಷನರ್‌: ಸಾರ್ವಜನಿಕ ಸ್ಥಳಗಳ ಭದ್ರತಾ ಕಾಯ್ದೆಯ ಅಡಿಯಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ತಪ್ಪೇನೂ ಇಲ್ಲ. ಮಳಿಗೆಯ ಪ್ರವೇಶ ದ್ವಾರವನ್ನು ಕೇಂದ್ರೀಕರಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

ಅಬ್ದುಲ್‌ ಹಮೀದ್‌, ಸುರತ್ಕಲ್‌

ಮುಖೇಶ್‌, ವಿದ್ಯಾರ್ಥಿ, ಮಂಗಳೂರು ವಿ.ವಿ

ಶಾಲಾ ಮಕ್ಕಳು ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಾರೆ. ಇಂತಹುದಕ್ಕೆ ಕಡಿವಾಣ ಹಾಕಿ. ಶಾಲಾ ವಾಹನಗಳಲ್ಲಿ ನಿಯಮ ಉಲ್ಲಂಘನೆ ತಡೆಗೆ ಕ್ರಮ ಕೈಗೊಳ್ಳಬೇಕು.

ಕಮಿಷನರ್‌: ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುವುದು ಅಪಾಯಕಾರಿ. ಮಾನವ ಜೀವಕ್ಕೆ ಕುತ್ತು ತರುವಂತಹ ಸಂಗತಿ. ಈ ಬಗ್ಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಗಮನ ಹರಿಸಲಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಮಾಲೀಕರು ಮತ್ತು ಚಾಲಕರ ಸಭೆ ಕರೆದು, ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುವುದು.

ರಮೇಶ್‌, ಸುರತ್ಕಲ್‌

ಸುರತ್ಕಲ್‌ನಲ್ಲಿ ಎಲ್ಲೆಂದರಲ್ಲಿ ಬಸ್ಸುಗಳ ನಿಲುಗಡೆ ಮಾಡುತ್ತಿದ್ದು, ಪಾದಚಾರಿಗಳು ಮತ್ತು ಇತರೆ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ಕಮಿಷನರ್‌: ಆ ಭಾಗದಲ್ಲಿ ವಾಹನ ನಿಲುಗಡೆ ಕುರಿತು ಗಮನ ಹರಿಸುವಂತೆ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಲಾಗುವುದು. ಬಸ್‌ ನಿಲ್ದಾಣದಲ್ಲೇ ನಿಲುಗಡೆ ನೀಡುವಂತೆ ನಿರ್ದೇಶನ ನೀಡಲಾಗುವುದು.

ದಿವ್ಯಾ, ಕರಂಗಲ್ಪಾಡಿ

ಪಿವಿಎಸ್‌ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ವರೆಗಿನ ಮಾರ್ಗದಲ್ಲಿ ಬಸ್‌ಗಳ ಕರ್ಕಷ ಹಾರನ್‌ ಮತ್ತು ಅತಿವೇಗದ ಚಾಲನೆಯಿಂದ ತೊಂದರೆ ಆಗುತ್ತಿದೆ.

ಕಮಿಷನರ್‌: ಈ ಮಾರ್ಗದಲ್ಲಿ ಬಸ್‌ಗಳ ಮೇಲೆ ನಿಗಾ ಇಡಲು ಸಿಬ್ಬಂದಿ ನಿಯೋಜಿಸಲಾಗುವುದು. ಕರ್ಕಷ ಹಾರನ್‌ ಬಳಕೆ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ.

ಡಾ.ಸುಧೀಂದ್ರ, ಕೊಡಿಯಾಲ್‌ಬೈಲ್‌

ಶರವು ದೇವಸ್ಥಾನದ ಪ್ರದೇಶದಲ್ಲಿ ರಸ್ತೆ ಹಾಳಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಕಮಿಷನರ್‌: ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗುವುದು.

ಡೆನ್ನಿಸ್ ಫರ್ನಾಂಡಿಸ್‌, ಜೆಪ್ಪು

ಜೆರೋಸಾ ಪ್ರೌಢ ಶಾಲೆಯಿಂದ ನಂದಿಗುಡ್ಡೆವರೆಗೆ ಅತಿವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಅಲ್ಲಿ ರಸ್ತೆಯುಬ್ಬು ಅಳವಡಿಸಬೇಕು.

ಕಮಿಷನರ್‌: ಅತಿವೇಗದ ಚಾಲನೆ ಪತ್ತೆಗೆ ಇಂಟರ್‌ಸೆಪ್ಟರ್‌ ನಿಯೋಜಿಸಲಾಗುವುದು. ರಸ್ತೆಯುಬ್ಬು ನಿರ್ಮಾಣ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

ಉಮೇಶ್‌, ಕದ್ರಿ

ಕದ್ರಿ ಕಂಬಳ ಪ್ರದೇಶದಲ್ಲಿ ರಸ್ತೆಯ ಮೇಲೆ ಖಾಸಗಿ ಅಪಾರ್ಟ್‌ಮೆಂಟ್‌ನವರು ‘ನೋ ಪಾರ್ಕಿಂಗ್‌’ ಫಲಕ ಹಾಕುತ್ತಿದ್ದಾರೆ.

ಕಮಿಷನರ್‌: ಅನಧಿಕೃವಾದ ಫಲಕಗಳ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು.

ನರಸಿಂಹ, ಡಿಆರ್‌ಡಿಒ ನಿವೃತ್ತ ಉದ್ಯೋಗಿ

‘ಝೀಬ್ರಾ ಕ್ರಾಸ್‌’ಗಳ ಬಣ್ಣ ಮಾಸಿಹೋಗಿದ್ದು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಕಮಿಷನರ್‌: ಮಳೆಗಾಲ ಮುಗಿದ ಬಳಿಕ ‘ಝೀಬ್ರಾ ಕ್ರಾಸ್‌’ಗಳಿಗೆ ಮತ್ತೆ ಬಣ್ಣ ಬಳಿಯಲಾಗುವುದು.

ರಾಜಮೋಹನ್‌ ರಾವ್‌, ಸುರತ್ಕಲ್‌

ಸುರತ್ಕಲ್‌ ಭಾಗದಲ್ಲಿ ಭಿಕ್ಷುಕರ ಹಾವಳಿ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ.

ಕಮಿಷನರ್‌: ಭಿಕ್ಷುಕರನ್ನು ವಶಕ್ಕೆ ಪಡೆದು, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಲು ಕಾರ್ಯಾಚರಣೆ ನಡೆಸಲಾಗುವುದು.

ಅಲೆಕ್ಸಾಂಡರ್‌, ಯೆಯ್ಯಾಡಿ ಜಂಕ್ಷನ್‌

ಯೆಯ್ಯಾಡಿ ಜಂಕ್ಷನ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗದ ಮೇಲೆ ದ್ವಿಚಕ್ರ ವಾಹನ ನಿಲುಗಡೆ ಮಾಡಲಾಗುತ್ತಿದೆ.

ಕಮಿಷನರ್‌: ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಪ್ರೀತಿ, ಮೂಡುಬಿದಿರೆ

ಸಾವಿರ ಕಂಬದ ಬಸದಿಯಲ್ಲಿ ಆಗಾಗ ಕಳ್ಳತನ ನಡೆಯುತ್ತಿದೆ. ಹೊಸದಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಪೊಲೀಸ್‌ ಹೊರಠಾಣೆಯನ್ನು ಬಲಪಡಿಸಬೇಕು.

ಕಮಿಷನರ್‌: ಬಸದಿಯ ಉಸ್ತುವಾರಿ ಹೊಂದಿರುವ ವ್ಯಕ್ತಿಗಳ ಜೊತೆ ಭದ್ರತಾ ವ್ಯವಸ್ಥೆ ಬಲಪಡಿಸುವ ಕುರಿತು ಚರ್ಚಿಸಲಾಗುವುದು. ಪೊಲೀಸ್‌ ಹೊರಠಾಣೆ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಶ್ರೀಧರ ಹೊಳ್ಳ, ಕೊಟ್ಟಾರ

ಉರ್ವ, ಚಿಲಿಂಬಿ ಭಾಗದಲ್ಲಿ ಪೊಲೀಸ್‌ ಇಲಾಖೆಯಿಂದ ಅಳವಡಿಸಿದ್ದ ಸೂಚನಾ ಫಲಕಗಳು ಉರುಳಿಬಿದ್ದಿವೆ.

ಕಮಿಷನರ್‌: ಉರುಳಿಬಿದ್ದಿರುವ ಸೂಚನಾ ಫಲಕಗಳನ್ನು ಗುರುತಿಸಿ, ಸರಿಪಡಿಸಲಾಗುವುದು.

ಉಮೇಶ್‌ ದೇವಾಡಿಗ, ಮೂಡುಬಿದಿರೆ

ಕೃಷ್ಣರಾವ್‌, ಮೂಡುಬಿದಿರೆ

ಮೂಡುಬಿದಿರೆ ಪೊಲೀಸ್‌ ಠಾಣೆಯ ವ್ಯಾಪ್ತಿ ವಿಶಾಲವಾಗಿದ್ದು, ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಅದನ್ನು ಎರಡು ಠಾಣೆಗಳಾಗಿ ವಿಭಜಿಸಬೇಕು. ಮೂಡುಬಿದಿರೆ ಠಾಣೆಯ ಪೊಲೀಸರಿಗೂ ಸರ್ಕಾರದಿಂದ ವಸತಿ ಸೌಕರ್ಯ ಕಲ್ಪಿಸಿ.

ಕಮಿಷನರ್‌: ಮೂಡುಬಿದಿರೆ ಠಾಣೆಯ ವ್ಯಾಪ್ತಿ ವಿಶಾಲವಾಗಿರುವ ಕಾರಣದಿಂದ ಆಗುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಹೊಸ ಠಾಣೆ ಸ್ಥಾಪಿಸುವ ಕುರಿತು ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಪೊಲೀಸರಿಗೆ ಮನೆ ನಿರ್ಮಾಣ ಭರದಿಂದ ಸಾಗಿದೆ. ಎರಡನೇ ಹಂತದಲ್ಲಿ ಮೂಡುಬಿದಿರೆಯಲ್ಲೂ ವಸತಿ ಸೌಕರ್ಯ ಒದಗಿಸಲು ಪ್ರಸ್ತಾವ ಸಲ್ಲಿಸಲಾಗುವುದು.

ಗಿರಿಜಾಶಂಕರ್‌, ಕೊಡಿಯಾಲ್‌ಬೈಲ್‌

ಕೆಪಿಟಿ ವೃತ್ತದಿಂದ ನಂತೂರು ಮಾರ್ಗದಲ್ಲಿ ಸಂಚಾರದಟ್ಟಣೆ ಅವಧಿಯಲ್ಲಿ ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸುವವರ ವಿರುದ್ಧ ಕ್ರಮ ಕೈಗೊಳ್ಳಿ.

ಕಮಿಷನರ್‌: ಆ ಸ್ಥಳದಲ್ಲಿ ಸಂಚಾರ ನಿಯಂತ್ರಣಕ್ಕೆ 10 ಸಿಬ್ಬಂದಿ ನಿಯೋಜಿಸಲಾಗಿದೆ. ಬಸ್‌ಗಳ ವಿರುದ್ಧ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.

ದಿಲನ್‌, ಫಳ್ನೀರ್‌

ಫಳ್ನೀರ್‌ ರಸ್ತೆಯಲ್ಲಿ ಕೆಲವು ಹಾಸ್ಟೆಲ್‌ಗಳ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

ಕಮಿಷನರ್‌: ಹಾಸ್ಟೆಲ್‌ ಮಾಲೀಕರಿಗೆ ನೋಟಿಸ್‌ ನೀಡಿ, ರಸ್ತೆಯ ಮೇಲೆ ವಾಹನ ನಿಲ್ಲಿಸದಂತೆ ಸೂಚಿಸಲಾಗುವುದು.

ದೇವದಾಸ್‌, ಕೊಟ್ಟಾರ ಚೌಕಿ

ಕೊಟ್ಟಾರ ಚೌಕಿ ಸೇತುವೆ ಬಳಿ ದಟ್ಟಣೆ ಅವಧಿಯಲ್ಲಿ ರಸ್ತೆ ದಾಟುವುದಕ್ಕೆ ಆಗುವುದಿಲ್ಲ. ಅಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ.

ಕಮಿಷನರ್‌: ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸೆಲ್ವಿ, ಕಾಟಿಪಳ್ಳ

ಮಂಗಳೂರಿಗೆ ಬರುವ ಬಸ್‌ಗಳು ಅರ್ಧದಲ್ಲೇ ಟ್ರಿಪ್‌ ತುಂಡರಿಸುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಕಮಿಷನರ್‌: ಟ್ರಿಪ್‌ ತುಂಡರಿಸುವ ಬಸ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಸುರೇಶ್‌, ಇರಾ

ಕೊಣಾಜೆ ಪ್ರದೇಶಕ್ಕೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್‌ಗಳು ಬರುತ್ತಿವೆ. ಇತರೆ ಅವಧಿಯಲ್ಲೂ ಬಸ್‌ಗಳನ್ನು ಓಡಿಸಬೇಕು.

ಕಮಿಷನರ್‌: ಬಸ್‌ಗಳ ಸಂಚಾರದ ಅವಧಿಯಲ್ಲಿ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗುವುದು.

ಪುನೀತ್‌, ಜೆಪ್ಪು

ಸೆಪ್ಟೆಂಬರ್‌ 1ರಿಂದ ಬಸ್‌ಗಳಲ್ಲಿ ಟಿಕೆಟ್‌ ನೀಡದಿದ್ದರೆ ಉಚಿತ ಪ್ರಯಾಣ ವ್ಯವಸ್ಥೆ ಜಾರಿಗೆ ಬರಲಿದೆಯೇ?

ಕಮಿಷನರ್‌: ಅದು ಬಸ್‌ ಮಾಲೀಕರ ಸಂಘದ ಘೋಷಣೆ. ಪ್ರಯಾಣಿಕರಿಗೆ ಕಿರುಕುಳ ಆಗಿರುವ ದೂರು ಬಂದರೆ ಕ್ರಮ ಜರುಗಿಸಲಾಗುವುದು.

ಗಿರೀಶ್‌ ನಾವುಡ, ಸುರತ್ಕಲ್‌

ಸುರತ್ಕಲ್‌ ಭಾಗದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಲು ಕ್ರಮ ಕೈಗೊಳ್ಳಬೇಕು.

ಕಮಿಷನರ್‌: ಈ ಸಂಬಂಧ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದು, ಸ್ಥಳ ಗುರುತಿಸುವಂತೆ ಕೋರಲಾಗುವುದು.

ಮಹೇಶ್‌, ಮಾರ್ಕೆಟ್‌ ರಸ್ತೆ

ಕೇಂದ್ರ ಮಾರುಕಟ್ಟೆ ಆವರಣದಲ್ಲಿ ತಳ್ಳು ಗಾಡಿಗಳಿಂದ ತೊಂದರೆ ಆಗುತ್ತಿದೆ.

ಕಮಿಷನರ್‌: ತಳ್ಳು ಗಾಡಿಗಳ ಸಂಚಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲು ಪರಿಶೀಲನೆ ನಡೆಸಲಾಗುವುದು.

ಸೀತಾರಾಮ್‌ ಬೇರಿಂಜ, ಮಂಗಳೂರು

ಕೇಂದ್ರ ಮಾರುಕಟ್ಟೆ ಆವರಣದಲ್ಲಿ ಹಗಲಿನಲ್ಲಿ ಸರಕುಗಳನ್ನು ಇಳಿಸುವುದು ಮತ್ತು ಅಂಗಡಿಗಳ ಎದುರಿನ ಪಾದಚಾರಿ ಮಾರ್ಗ ಒತ್ತುವರಿ ತಡೆಯಬೇಕು.

ಕಮಿಷನರ್‌: ಎರಡೂ ವಿಚಾರಗಳ ಕುರಿತು ಅಂಗಡಿಗಳ ಮಾಲೀಕರ ಸಭೆ ನಡೆಸಿ, ಸೂಚನೆ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT