ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾಧೀನ ಕೈದಿ ಪರಾರಿ

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳ
Last Updated 9 ನವೆಂಬರ್ 2019, 9:51 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ವಿವಿಧೆಡೆ ದೇವಾಲಯಗಳ ಕಳವು, ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಕುಖ್ಯಾತ ಕಳ್ಳನೊಬ್ಬ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಹಿಂದಿರುಗುವಾಗ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಬಂಟ್ವಾಳ ತಾಲ್ಲೂಕಿನ ಗೂಡಿನ ಬಳಿ ನಿವಾಸಿ ಮುಹಮ್ಮದ್ ರಫೀಕ್‌ (32) ಪರಾರಿಯಾಗಿರುವ ಆರೋಪಿ. ವೇಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸು ಕರೆತರುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಜಿಲ್ಲಾ ಕಾರಾಗೃಹದ ಪ್ರವೇಶ ದ್ವಾರದ ಬಳಿಯಿಂದಲೇ ತಪ್ಪಿಸಿಕೊಂಡಿದ್ದಾನೆ.

ಬೆಂಗಳೂರು ಪೊಲೀಸರು ರಫೀಕ್‌ನನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆತನನ್ನು ವೇಣೂರು ಪೊಲೀಸರು ಬಾಡಿ ವಾರೆಂಟ್‌ ಪಡೆದು ಕರೆತಂದಿದ್ದರು. ಕುತ್ಲೂರು ಬಸದಿಯಲ್ಲಿ ಕಳ್ಳತನ ಮತ್ತು ಮೂಡ್ಲದಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಳವು ಮಾಡಿದ ಆರೋಪದ ಮೇಲೆ ಈತನ ವಿರುದ್ಧ ಪ್ರಕರಣಗಳಿವೆ. ಮೂಲ್ಕಿ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯ ಹಲವೆಡೆ ಈತನ ವಿರುದ್ಧ ಪ್ರಕರಣಗಳಿವೆ.

ಆರು ತಿಂಗಳಿನಿಂದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ರಫೀಕ್‌ನನ್ನು ವೇಣೂರು ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ದೇವರಾಜ್‌ ಮತ್ತು ಕಾನ್‌ಸ್ಟೆಬಲ್‌ ಮಂಜುನಾಥ್‌ ಶುಕ್ರವಾರ ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಸಂಜೆ ಕಾರಾಗೃಹದ ಸಮೀಪ ನಡೆದು ಬರುತ್ತಿದ್ದಾಗ ಇಬ್ಬರೂ ಪೊಲೀಸರನ್ನು ತಳ್ಳಿ ಕೈಕೋಳದ ಸಮೇತ ಪರಾರಿಯಾಗಿದ್ದಾನೆ.

ಸಹಚರರ ನೆರವು: ರಫೀಕ್‌ ಪರಾರಿಗೆ ಮೊದಲೇ ಸಂಚು ರೂಪಿಸಲಾಗಿತ್ತು. ಆತ ಪೊಲೀಸರನ್ನು ತಳ್ಳಿಕೊಂಡು ಬರುವಷ್ಟರಲ್ಲಿ ಸಮೀಪದಲ್ಲೇ ಆತನ ಸಹಚರನೊಬ್ಬ ಯಮಹಾ ಆರ್‌ಎಕ್ಸ್‌– 100 ಬೈಕ್‌ ನಿಲ್ಲಿಸಿಕೊಂಡು ಕಾಯುತ್ತಿದ್ದ. ಅದರಲ್ಲಿ ಹತ್ತಿಕೊಂಡು ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯ ಪತ್ತೆಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗುವುದು’ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT