ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆಗೆ ಖಾಸಗಿ ಏಜೆನ್ಸಿ ಬಳಕೆ: ಡಿವೈಎಫ್‌ಐ ಆಕ್ಷೇಪ

ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕಾ ವಲಯ ಸ್ಥಾಪನೆ
Last Updated 2 ಜುಲೈ 2022, 4:27 IST
ಅಕ್ಷರ ಗಾತ್ರ

ಮಂಗಳೂರು: ‘ಬಳ್ಕುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮಗಳಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ಖಾಸಗಿ ಏಜೆನ್ಸಿಯಿಂದ ನಡೆಸಲಾಗುತ್ತಿದೆ. ಸರ್ವೆ ನಡೆಸುವ ಸಿಬ್ಬಂದಿ, ಈ ಕುರಿತ ಸರ್ಕಾರಿ ಆದೇಶವನ್ನಾಗಲಿ, ಗುರುತಿನ ಚೀಟಿಯನ್ನಾಗಲೀ ಹೊಂದಿಲ್ಲ’ ಎಂದು ಡಿವೈಎಫ್‌ಐ ಆಕ್ಷೇಪ ವ್ಯಕ್ತಪಡಿಸಿದೆ.

‘ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ತಪ್ಪು ದಾರಿ ಅನುಸುರಿಸುತ್ತಿರುವುದು‌ ಖಂಡನೀಯ’ ಎಂದು ಸಂಘಟನೆ ಹೇಳಿದೆ.

‘ಕೈಗಾರಿಕಾ ವಲಯ ಸ್ಥಾಪನೆಗೆ ಫಲವತ್ತಾದ ಕೃಷಿ ಭೂಮಿಯೂ ಸೇರಿದಂತೆ ಸಾವಿರಕ್ಕೂ ಅಧಿಕ ಭೂಸ್ವಾಧೀನ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಲು ಬಳ್ಕುಂಜೆ, ಕೊಲ್ಲೂರು ಗ್ರಾಮಗಳಿಗೆ ನಮ್ಮ ನಿಯೋಗ ಶುಕ್ರವಾರ ಭೇಟಿ ಕೊಟ್ಟಿತ್ತು. ಕೈಗಾರಿಕಾ ವಲಯಕ್ಕೆ ಭೂಮಿ ಕಳೆದು ಕೊಳ್ಳುವ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಗ್ರಾಮದ ಹೋರಾಟಗಾರ ಜೊತೆ ಸುತ್ತಾಡುತ್ತಿದ್ದಾಗ ಅಕ್ರಮವಾಗಿ ಸರ್ವೆ ಮಾಡುತ್ತಿದ್ದ ತಂಡ ಎದುರಾಯಿತು. ಅವರ ಬಳಿ, ಸರ್ವೆಗೆ ಸಂಬಂಧಿಸಿದ ಸರ್ಕಾರ ಆದೇಶವಾಗಲೀ, ಗುರುತಿನ ಚೀಟಿಯಾಗಲೀ ಇರಲಿಲ್ಲ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ತಿಳಿಸಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಸರ್ವೆಕಾರ್ಯದ ಗುತ್ತಿಗೆಯನ್ನು ಸುರತ್ಕಲ್‌ನ ಸಂತೋಷ್ ಅವರ ಖಾಸಗಿ ಏಜನ್ಸಿಗೆ ನೀಡಿದೆ. ಅವರು ನಮ್ಮನ್ನು ಸರ್ವೆ ಕೆಲಸಕ್ಕೆ ನೇಮಿಸಿದ್ದಾರೆ. ನಾವು ಮನೆ ಮನೆಗೆ ತೆರಳಿ ಮನೆ, ಜಮೀನಿನ ಪೂರ್ತಿ ವಿವರ ಪಡೆದು ಅದನ್ನು ದಾಖಲಿಸಿಕೊಂಡು ಸಹಿ ಪಡೆಯುತ್ತೇವೆ‌. ಕುಟುಂಬ ಸದಸ್ಯರನ್ನು ಮನೆ ಮುಂಭಾಗ ನಿಲ್ಲಿಸಿ ಫೋಟೊ ತೆಗೆಯುತ್ತೇವೆ ಎಂದು ಸರ್ವೆ ತಂಡದಲ್ಲಿದ್ದ, 2008ರಲ್ಲಿ ನಿವೃತ್ತರಾಗಿರುವ ಉಪ ತಹಶೀಲ್ದಾರ್ ಚಂದ್ರಮೋಹನ್ ತಿಳಿಸಿದ್ದಾರೆ’ ಎಂದರು.

‘ಈ ರೀತಿ ಖಾಸಗಿ ವ್ಯಕ್ತಿಗಳು ಸರ್ಕಾರದ ಆದೇಶ ಅಥವಾ ಗುರುತಿನಚೀಟಿ ಇಲ್ಲದೆ, ಗ್ರಾಮ ಪಂಚಾಯಿತಿಯ ಗಮನಕ್ಕೂ ತಾರದೆ, ಊರೊಳಗಡೆ ಬಂದು ಮನೆ, ಜಮೀನಿನ ಮಾಹಿತಿ ಸಂಗ್ರಹಿಸುವುದು, ಗ್ರಾಮಸ್ಥರ ಫೋಟೊ ಹಾಗೂ ಸಹಿ ಪಡೆಯವುದು ಅಕ್ರಮ. ಈ ರೀತಿ ಅಮಾಯಕ ಗ್ರಾಮಸ್ಥರನ್ನು ವಂಚಿಸುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿ ಸರ್ವೆ ತಂಡವನ್ನು ನಮ್ಮ ನಿಯೋಗ ಹಾಗೂ ಗ್ರಾಮಸ್ಥರು ಸೇರಿ ವಾಪಾಸು ಕಳುಹಿಸಿದ್ದೇವೆ’ ಎಂದು ತಿಳಿಸಿದರು.

ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಅಶ್ವಿನಿ ಹೆಗ್ಡೆ, ರೈತ ಸಂಘದ ಕೆ.ಯಾದವ ಶೆಟ್ಟಿ, ಡಿವೈಎಫ್ಐನ ನಿತಿನ್ ಬಂಗೇರ, ಶ್ರೀನಾಥ್ ಕುಲಾಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ್, ಭೂಸ್ವಾಧೀನ ವಿರೋಧಿ ಸಮಿತಿಯ ಮುಖಂಡರು ಇದ್ದರು.

‘ಸರ್ವೆ ಕಾರ್ಯ: ಕೆಐಎಡಿಬಿಯಿಂದಲೇ ಹೊರಗುತ್ತಿಗೆ’
‘ಕೈಗಾರಿಕಾ ವಲಯ ಸ್ಥಾಪನೆಗಾಗಿ ಭೂಸ್ವಾಧೀನ ನಡೆಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾದ 1,092 ಎಕರೆ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬದ ವಿವರವನ್ನು ಕಲೆ ಹಾಕಬೇಕಾಗಿದೆ. ಈ ಕುರಿತ ಜಂಟಿ ಸರ್ವೆಗೆ ನಮ್ಮ ಬಳಿ ಅಗತ್ಯ ಪ್ರಮಾಣದಷ್ಟು ಸಿಬ್ಬಂದಿ ಇಲ್ಲ. ಹಾಗಾಗಿ ಜಂಟಿ ಸರ್ವೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆ ನೀಡಿರುವುದು ನಿಜ. ಈ ಕುರಿತು ಸರ್ಕಾರಿ ಆದೇಶವೂ ಆಗಿದೆ. ಸರ್ವೆ ವೇಳೆ ಮಂಡಳಿಯ ಅಧಿಕಾರಿಗಳೂ ಜೊತೆಯಲ್ಲಿರುತ್ತಾರೆ’ ಎಂದು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಿನೋಯ್‌ ತಿಳಿಸಿದರು.

‘ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಜೂನ್‌ 13ರಿಂದ 27ರವರೆಗೆ ಕಾಲಾವಕಾಶ ಕಲ್ಪಿಸಿದ್ದೆವು. ಆಕ್ಷೇಪಣೆ ಸಲ್ಲಿಸಿದವರಲ್ಲಿ ಶೇ 60ರಷ್ಟು ಮಂದಿ ಜಾಗ ನೀಡಲು ಮುಂದೆ ಬಂದಿದ್ದಾರೆ’ ಎಂದರು.

‘ಬಹುತೇಕ ಗ್ರಾಮಸ್ಥರು ಜಮೀನು ಬಿಟ್ಟುಕೊಡಲು ಸಿದ್ಧರಿಲ್ಲ. ಕೆಐಎಡಿಬಿ ಅಧಿಕಾರಿಗಳು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಭೂಸಂತ್ರಸ್ತರ ಹಿತರಕ್ಷಣಾ ಸಮಿತಿ ಆರೋಪಿಸಿದೆ.

‘ಉಳೆಪಾಡಿ ಗ್ರಾಮದಲ್ಲಿ ಜಮೀನು ಕಳೆದುಕೊಳ್ಳಲಿರುವ 75 ಕುಟುಂಬಗಳಲ್ಲಿ 70 ಕುಟುಂಬಗಳು, ಕೊಲ್ಲೂರು ಗ್ರಾಮದಲ್ಲಿ 70ರಲ್ಲಿ 65 ಕುಟುಂಬಗಳು ಹಾಗೂ ಬಳ್ಕುಂಜೆ ಗ್ರಾಮದಲ್ಲಿ 35 ಕುಟುಂಬಗಳಲ್ಲಿ ಶೇ 50ರಷ್ಟು ಕುಟುಂಬಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ’ ಎಂದು ಸಮಿತಿಯ ಕಾರ್ಯದರ್ಶಿ ಫ್ರೀಡಾ ರಾಡ್ರಿಗಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT