ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಕೂರಿನಲ್ಲಿ ಮೀನುಗಾರಿಕೆ ವಿಜ್ಞಾನಗಳ ವಿ.ವಿ

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಕೋಟ ಸೂಚನೆ
Last Updated 28 ಅಕ್ಟೋಬರ್ 2020, 4:52 IST
ಅಕ್ಷರ ಗಾತ್ರ

ಮಂಗಳೂರು: ನಗರದ ಎಕ್ಕೂರಿನಲ್ಲಿರುವ ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ್ದು, ಕರ್ನಾಟಕ ಮೀನುಗಾರಿಕಾ ವಿಶ್ವವಿದ್ಯಾಲಯ ಮಾಡುವ ಪ್ರಸ್ತಾವ ಮಂಡನೆಯಾಗಿದೆ.

ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಾವಿದ್ಯಾಲಯದ ಡೀನ್ ಡಾ.ಸೆಂಥಿಲ್ ವೇಲ್ ನೇತೃತ್ವದಲ್ಲಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದು, ವಾರದೊಳಗೆ ಟಿಪ್ಪಣಿ ಸಹಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಪ್ರಸ್ತುತ ಬೀದರ್‌ನಲ್ಲಿ ಕೇಂದ್ರಸ್ಥಾನ ಹೊಂದಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು, ರಾಜ್ಯ ವ್ಯಾಪ್ತಿಗೆ ಪ್ರತ್ಯೇಕ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಗಲಿದೆ. ಪ್ರಸ್ತುತ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಲ್ಲಿ ಮೀನುಗಾರಿಕೆ ವಿಜ್ಞಾನಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಇದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಸ್ಥಾಪನೆಯಾಗಲಿದೆ.

ಮಹಾವಿದ್ಯಾಲಯ ವ್ಯಾಪ್ತಿಯಲ್ಲಿ ಸುಮಾರು 75 ಕಾಲೇಜುಗಳು ಹಾಗೂ ಆರು ವಿಭಾಗಗಳನ್ನು ಹೊಂದಿವೆ. ಇನ್ನೂ 10 ವಿಭಾಗ ಹಾಗೂ ಹೆಚ್ಚುವರಿ ಕಾಲೇಜುಗಳ ಮಾನ್ಯತೆ ಮೂಲಕ ವಿಶ್ವವಿದ್ಯಾಲಯವು ಪರಿಸರ, ಹವಾಮಾನ ವೈಪರೀತ್ಯ, ಮಾರುಕಟ್ಟೆ, ಜಲವಾಸಿ ಮತ್ತಿತರ ವಿಭಾಗ ಹಾಗೂ ನಿಕಾಯಗಳನ್ನೂ ಹೊಂದಲಿದೆ. ಇದರಿಂದ ರಾಜ್ಯದ ಮೀನುಗಾರಿಕೆಯ ಮೌಲ್ಯವರ್ಧನೆ ಸಾಧ್ಯವಾಗಲಿದೆ.

‘ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸಚಿವರ ಸೂಚನೆಯಂತೆ ಸರ್ಕಾರಕ್ಕೆ ವಿಸ್ತೃತ ಪ್ರಸ್ತಾವವನ್ನು ಸಲ್ಲಿಸಲಾಗುವುದು. ಇದರಿಂದ ಐಸಿಎಆರ್‌ ಮಾನ್ಯತೆ ಪಡೆದ ಹೆಚ್ಚುವರಿ ಕಾಲೇಜುಗಳ ಸ್ಥಾಪನೆಯೂ ಸಾಧ್ಯವಾಗಲಿದೆ. ಅಲ್ಲದೇ, ಸುಮಾರು 200ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೂ ಉನ್ನತ ಶಿಕ್ಷಣ ಪಡೆದವರ ಲಭ್ಯತೆ ಹೆಚ್ಚಲಿದೆ’ ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಸೆಂಥಿಲ್ ವೇಲ್ ತಿಳಿಸಿದರು.

‘ಮೀನುಗಾರಿಕೆ ವಿಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಪ್ರಸ್ತಾವವೂ ಇದ್ದು, ವಿಶ್ವವಿದ್ಯಾಲಯವು ರಚನೆಯಾದರೆ, ದೇಶದಲ್ಲೇ ಹಲವು ಹೊಸ ಅಧ್ಯಯನ, ಕೋರ್ಸ್‌, ಸಂಶೋಧನೆಗಳಿಗೆ ವೇದಿಕೆಯಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT