ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಸೇವೆಗೆ ಆದ್ಯತೆ ನೀಡಿ: ನಳಿನ್‌ಕುಮಾರ್ ಸೂಚನೆ

ದೂರಸಂಪರ್ಕ ಸೇವಾ ಕಂಪನಿಗಳಿಗೆ ನಳಿನ್‌ಕುಮಾರ್ ಸೂಚನೆ
Last Updated 2 ಜೂನ್ 2021, 3:34 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ನೆಟ್‌ವರ್ಕ್ ಸೇರಿದಂತೆ ಮೊಬೈಲ್ ಸೇವಾ ಪೂರೈಕೆದಾರರು ಉತ್ತಮ ಸೇವೆ ಒದಗಿಸಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸರ್ಕಾರದ ಅನೇಕ ಸೌಲಭ್ಯಗಳನ್ನು ಒದಗಿಸಲು ತೊಂದರೆ ಆಗುತ್ತಿದೆ. ಜನಸಾಮಾನ್ಯರ ದೈನಂದಿನ ದೂರವಾಣಿ ಸೌಲಭ್ಯವನ್ನು ಉಪಯೋಗಿಸಲು ಆಗುತ್ತಿಲ್ಲ. ಹೀಗೆ ಆಗದಂತೆ ಎಲ್ಲ ಮೊಬೈಲ್ ನೆಟ್‌ವರ್ಕಿಂಗ್ ಕಂಪನಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕೋವಿಡ್ ಸೋಂಕಿತರಿಗೆ ವೈದ್ಯಕೀಯ ಸೇವೆ, ಪಡಿತರ ವಿತರಣೆ, ಜಿಪಿಎಸ್ ಆಧಾರದ ಮೇಲೆ ಗೃಹ ನಿರ್ಮಾಣದ ಅನುದಾನ ನೀಡುವುದು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕೋವಿಡ್‌–19 ನಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಮನೆಯಿಂದಲೇ ಕೆಲಸ ಮಾಡುವವರಿಗೂ ಸಮಸ್ಯೆ ಉಂಟಾಗುತ್ತಿದೆ. ಎತ್ತರ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರಿಗೆ ತೊಂದರೆ ಆಗದಂತೆ ಉತ್ತಮ ಮೊಬೈಲ್ ನೆಟ್‌ವರ್ಕ್‌ ಒದಗಿಸಲು, ಅಗತ್ಯವಿರುವ ಮೊಬೈಲ್ ಟವರ್‌ಗಳ ನಿರ್ಮಾಣಕ್ಕೆ ಸರ್ಕಾರದ ಜಾಗ ಅಥವಾ ಕಟ್ಟಡಗಳ ಮೇಲೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ನೆಟ್‌ವರ್ಕ್‌ ಒದಗಿಸುವ ಸಂಬಂಧ ಈಗಾಗಲೇ ಸಭೆಯನ್ನು ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಲಾಗಿದೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪ್ರಜ್ಞಾ, ಶಾಸಕರಾದ ಉಮಾನಾಥ್ ಕೋಟ್ಯಾನ್, ಡಾ.ಭರತ್ ವೈ. ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯಕ್, ಸಂಜೀವ ಮಠಂದೂರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ 676 ಟವರ್‌ಗಳು

ಜಿಲ್ಲೆಯ 223 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 676 ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಹೊಸದಾಗಿ ನಿರ್ಮಾಣ ಮಾಡಲು 26 ಅರ್ಜಿಗಳು ಬಾಕಿ ಇವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಬೆಳ್ತಂಗಡಿ, ಮೂಡುಬಿದಿರೆಯಲ್ಲಿ ತಲಾ 1, ಕಡಬದಲ್ಲಿ 2, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ತಲಾ 5 ಹಾಗೂ ಸುಳ್ಯ ತಾಲ್ಲೂಕಿನ 7 ಅರ್ಜಿಗಳು ಬಾಕಿ ಇವೆ. ಕೆಲವು ಜನರಿಂದ ಮೊಬೈಲ್ ಟವರ್ ನಿರ್ಮಾಣಕ್ಕೆ ಆಕ್ಷೇಪಣೆ ಬಂದರೆ, ಕೆಲವೊಂದು ಕಂಪನಿಗಳು ತಮ್ಮ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಬಂಟ್ವಾಳ ತಾಲ್ಲೂಕಿನಲ್ಲಿ ₹47 ಲಕ್ಷ, ಬೆಳ್ತಂಗಡಿ ತಾಲ್ಲೂಕಿನಲ್ಲಿ ₹9 ಲಕ್ಷ, ಕಡಬ ತಾಲ್ಲೂಕಿನಲ್ಲಿ ₹2 ಲಕ್ಷ, ಮಂಗಳೂರು ತಾಲ್ಲೂಕಿನಲ್ಲಿ ₹1.80 ಲಕ್ಷ , ಪುತ್ತೂರು ತಾಲ್ಲೂಕಿನಲ್ಲಿ ₹17 ಲಕ್ಷ. ಮೂಡುಬಿದಿರೆ ತಾಲ್ಲೂಕಿನಲ್ಲಿ ₹1.20 ಲಕ್ಷ ಹಾಗೂ ಸುಳ್ಯ ತಾಲ್ಲೂಕಿನಲ್ಲಿ ₹4 ಲಕ್ಷ ಶುಲ್ಕ ಬಾಕಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT