ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ವೆಲ್ ಮೇಲ್ಸೇತುವೆ: ಮತ್ತೊಂದು ಗಡುವು

ನವಯುಗ ಸಂಸ್ಥೆ ಬಗ್ಗೆ ಸಂಸದ ಕಟೀಲ್ ಹತಾಶೆ
Last Updated 31 ಡಿಸೆಂಬರ್ 2019, 15:14 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ದಶಕದ ಕನಸಾಗಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಗೆ ಮತ್ತೊಂದು ಡೆಡ್‌ಲೈನ್ ನಿಗದಿಯಾಗಿದೆ!

2020ರ ಜನವರಿ 31ರೊಳಗೆ ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ನವಯುಗ ಉಡುಪಿ ಟೋಲ್‌ವೇಸ್ (ಎನ್‌ಯುಟಿಪಿಎಲ್) ಅಧಿಕಾರಿಗಳು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮಂಗಳವಾರ ಪತ್ರ ನೀಡಿದ್ದು, ಕಾಮಗಾರಿಯ ಮೇಲುಸ್ತುವಾರಿಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹಾಗೂ ಕಂದಾಯ ಇಲಾಖೆಯಿಂದ ತಹಶೀಲ್ದಾರ್ ದರ್ಜೆ ಅಧಿಕಾರಿ ನಿಯೋಜಿಸುವಂತೆ ಸಂಸದ ನಳಿನ್‌ ಕುಮಾರ್ ಕಟೀಲ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯು ಈ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಗುತ್ತಿಗೆದಾರ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳ ಸತತ ಭರವಸೆಗಳಿಂದ ಹತಾಶರಾದ ಸಂಸದ ಕಟೀಲ್, ‘ನೀವೇ ನೀಡಿದ ಗಡುವನ್ನು ಪೂರ್ಣಗೊಳಿಸುತ್ತಿಲ್ಲ. ಜನರ ಮುಂದೆ ಜನಪ್ರತಿನಿಧಿಗಳು ಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಈ ಬಗ್ಗೆ ಗಂಭೀರ ನಿರ್ಧಾರ ಕೈಗೊಂಡಿದ್ದು, ಜಿಲ್ಲಾಧಿಕಾರಿಗಳಿಗರಉಸ್ತುವಾರಿ ವಹಿಸಲಾಗಿದೆ. ಅಲ್ಲದೇ, ಗುತ್ತಿಗೆದಾರ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳ ವಿರುದ್ಧ ಕೆಲವರುಸಾರ್ವಜನಿಕ ಹಿತಾಸಕ್ತಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕಾಮಗಾರಿ ನಿರ್ಲಕ್ಷ್ಯ ವಹಿಸಿದರೆ ಬಂಧನಕ್ಕೆ ಒಳಗಾಗುತ್ತೀರಿ’ ಎಂದು ಎಚ್ಚರಿಸಿದರು.

‘ಮೇಲ್ಸೇತುವೆ ಪೂರ್ಣಗೊಳ್ಳುವ ತನಕ ತಲಪಾಡಿ ಮತ್ತು ಹೆಜಮಾಡಿ ಟೋಲ್‌ ಪ್ಲಾಜಾದಲ್ಲಿ ಶುಲ್ಕ ಪಾವತಿಸುವುದಿಲ್ಲ’ ಎಂದು ಬಸ್, ಟ್ಯಾಕ್ಸಿ ಮಾಲೀಕ–ಚಾಲಕರು ತಿಳಿಸಿದ್ದು, ನಾನು ಜನರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಸಂಸದರು ಘೋಷಿಸಿದರು.

ನಳಿನ್ ಹತಾಶೆ

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ‘ನಾನು ಸಂಸದನಾಗುವ ಮೊದಲೇ ಕುಂದಾಪುರ–ತಲಪಾಡಿ ರಾ.ಹೆ.17ರ (90.08 ಕಿ.ಮೀ.) ಚತುಷ್ಪಥ ರಸ್ತೆಯನ್ನು ಡಿಬಿಎಫ್‌ಒಟಿ (ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಹಾಗೂ ಹಸ್ತಾಂತರ) ಆಧಾರದಲ್ಲಿ ನವಯುಗ (ಎನ್‌ಯುಟಿಪಿಎಲ್)ಗೆ ನೀಡಲಾಗಿತ್ತು. ಈ ಪೈಕಿ ಪಂಪ್‌ವೆಲ್ ಮೇಲ್ಸೇತುವೆಯು ಹಲವು ಸಮಸ್ಯೆಗಳ ಮಧ್ಯೆ ಕುಂಟುತ್ತಾ ಬಂದಿದೆ. ಮಹಾವೀರ ವೃತ್ತ ಸ್ಥಳಾಂತರ, ಕೆಳಸೇತುವೆ ಸೇರ್ಪಡೆ, ಪಾಲಿಕೆಯಿಂದ ಒಪ್ಪಿಗೆ ಮತ್ತಿತರ ಗೊಂದಲಗಳಿದ್ದವು. ಅಷ್ಟು ಮಾತ್ರವಲ್ಲ, ಗುತ್ತಿಗೆ ಕಂಪೆನಿಗೆ ಆರ್ಥಿಕ ಸಮಸ್ಯೆ ಉಂಟಾದಾಗ ಆ್ಯಕ್ಸಿಸ್ ಬ್ಯಾಂಕ್ ಮೂಲಕ ₹56 ಕೋಟಿ ಹಾಗೂ ಸರ್ವೀಸ್ ರಸ್ತೆಗೆ ₹6 ಕೋಟಿ ಕೊಡಿಸಲಾಯಿತು. ಆದರೂ...’ ಎಂದು ನಳಿನ್‌ ಕುಮಾರ್ ಕಟೀಲ್ ಅಸಮಾಧಾನ ಹೊರಹಾಕಿದರು.

‘2019ರ ಜನವರಿಯಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಆ ಬಳಿಕ ಮೇ 31ರ ಗಡುವುದು ನೀಡಿದ್ದರು. ಅನಂತರ ಅಕ್ಟೋಬರ್ 31 ಎಂದು ಹೇಳಿದ್ದರು. ಈಚೆಗೆ ಡಿಸೆಂಬರ್ 31ರೊಳಗೆ ಕಾಮಗಾರಿ ಪೂರೈಸದಿದ್ದರೆ, ಚಪ್ಪಲಿಯಲ್ಲಿ ಹೊಡೆಯಿರಿ ಎಂದೂ ಹೇಳಿದ್ದರು. ಆದರೂ... ನಿರಾಶೆ ಮೂಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದೇನೆ’ ಎಂದರು.

ಟ್ರೋಲ್ ಸಹಜ

ಪಂಪ್‌ವೆಲ್ ಕುರಿತ ಟ್ರೋಲ್‌ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ‘ಸಹಜವಾಗಿ ಜನರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಕೆಲವೊಂದು ವೈಯಕ್ತಿಕ ದೃಷ್ಟಿಯ ಟ್ರೋಲ್‌ಗಳನ್ನು ಮಾಡಬಾರದು. ಅದು ಸಮಾಜಕ್ಕೂ ಉತ್ತಮವಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಗ್ಷುಗಿರಿ ಇದ್ದರು.

ತಲಪಾಡಿ–ಹೆಜಮಾಡಿ: ಟೋಲ್ ಇಲ್ಲ–ಪ್ರತಿಭಟನೆ

ಪಂಪ್‌ವೆಲ್ ಮೇಲ್ಸೇತುವೆ ಸೇರಿದಂತೆ ರಾ.ಹೆ.17ರ ಕಾಮಗಾರಿ ವೈಫಲ್ಯದ ಹಿನ್ನೆಲೆಯಲ್ಲಿ 2020ರ ಜನವರಿ 1ರಿಂದ ಟೋಲ್ ಪಾವತಿಸದೇ ಸಂಚರಿಸಲು ಬಸ್, ಟ್ಯಾಕ್ಸಿ ಸೇರಿದಂತೆ ವಾಹನ ಮಾಲೀಕರು ನಿರ್ಧರಿಸಿದ್ದಾರೆ. ಈ ಕುರಿತು ಜ.1ರಂದು ಬೆಳಿಗ್ಗೆ 7.30ಕ್ಕೆ ತಲಪಾಡಿ ಟೋಲ್‌ ಬಳಿ ಪ್ರತಿಭಟನೆಯನ್ನೂ ನಡೆಸುವುದಾಗಿ ತಿಳಿಸಿದ್ದಾರೆ.

‘ಜನರ ಜೊತೆ ನಾವಿದ್ದೇವೆ’ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಘೋಷಿಸಿದರು.

‘ಜನರಿಗಾಗಿ ಪ್ರತಿಭಟನೆ ನಡೆಸಲು ನಾನು ಸಿದ್ಧ. ಜನರ ಕುರಿತ ಹೋರಾಟದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದರೂ, ಹಿಂದೆ ಸರಿಯುವುದಿಲ್ಲ’ ಎಂದು ಶಾಸಕ ಕಾಮತ್ ಹೇಳಿದರು.

ಮತ್ತೊಂದು ಪತ್ರ!

ಜನವರಿ 31ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್ ಹಾಗೂ ಗುತ್ತಿಗೆದಾರ ಕಂಪೆನಿಯ ನಿರ್ದೇಶಕರು ಜಿಲ್ಲಾಧಿಕಾರಿ ಅವರಿಗೆ ಸಹಿ ಮಾಡಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT