ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ: ಕಾಸರಗೋಡು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

ಭತ್ತ, ಅಡಿಕೆ ಕಟಾವಿಗೆ ವರುಣ ಅಡ್ಡಿ– ಕೃಷಿಕರು ಕಂಗಾಲು
Last Updated 14 ನವೆಂಬರ್ 2021, 16:35 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಾದ್ಯಂತ ಭಾನುವಾರ ಧಾರಾಕಾರ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿದಿದೆ.

ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಕಡಬ, ಸುಳ್ಯ, ಮೂಡುಬಿದಿರೆ ತಾಲ್ಲೂಕುಗಳಲ್ಲೂ ಮಧ್ಯಾಹ್ನದ ಬಳಿಕ ಉತ್ತಮ ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು.

ಸುಬ್ರಹ್ಮಣ್ಯ ವರದಿ: ಇಲ್ಲಿನ ಕಲ್ಲುಗುಡ್ಡೆ ಪರಿಸರದಲ್ಲಿ ಶನಿವಾರ ತಡರಾತ್ರಿ ಹಾಗೂ ಭಾನುವಾರವೂ ಧಾರಾಕಾರ ಮಳೆಯಾಗಿದೆ. ಹಳ್ಳ, ತೋಡುಗಳು ತುಂಬಿ ಹರಿದು ಕೃಷಿ ಭೂಮಿಗೂ‌ ನೀರು ನುಗ್ಗಿದೆ. ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಐನೆಕಿದು, ಯೇನೆಕಲ್ಲು, ಬಳ್ಪ, ಪಂಜ, ಕೈಕಂಬ, ಬಿಳಿನೆಲೆ, ಕಲ್ಲುಗುಡ್ಡೆ, ನೂಜಿಬಾಳ್ತಿಲ, ಇಚ್ಲಂಪಾಡಿ, ಕೊಣಾಜೆ ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಜಿಲ್ಲೆಯಲ್ಲಿ ಭತ್ತ ಮತ್ತು ಅಡಿಕೆ ಕಟಾವು ಅವಧಿಯಾಗಿದ್ದು, ಮಳೆ ಸುರಿಯುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಕೊಯ್ಲು ಮಾಡಲಾಗಿದ್ದರೂ ಬಿಸಿಲು ಇಲ್ಲದೆ ಒಣಗಿಸಲು ಕೃಷಿಕರು ಪರಾದಾಡುವಂತಾಗಿದೆ.

ಪುತ್ತೂರು ವರದಿ: ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ನೆಲ್ಲಿಗುರಿಯಲ್ಲಿ ರಾಮಪ್ರಸಾದ ಭಟ್‌ ಎಂಬುವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಯೊಳಗಿದ್ದ ರೆಪ್ರಿಜರೇಟರ್, ಇನ್ವರ್ಟರ್, ಪಂಪ್‌ಸೆಟ್‌ ಸಹಿತ ವಿದ್ಯುತ್ ವಯರಿಂಗ್ ವ್ಯವಸ್ಥೆ ಸುಟ್ಟು ಹೋಗಿದೆ. ಗೋಡೆಯೂ ಬಿರುಕು ಬಿಟ್ಟಿದೆ. ಮನೆಯ ಪಕ್ಕದಲ್ಲಿದ್ದ ರಬ್ಬರ್ ಗಿಡಗಳಿಗೂ ಹಾನಿಯಾಗಿದೆ.

ಪಿಲ್ಲಂಬು ಮನೆಗೆ ಹಾನಿ

ಬೆಳ್ತಂಗಡಿ ವರದಿ: ತಾಲ್ಲೂಕಿನ ಆರಂಬೋಡಿ ಗ್ರಾಮದಪಿಲ್ಲಂಬು ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ. ಇದು ದಿವಂಗತ ಭೋಜರಾಜ ಹೆಗ್ಡೆ ಅವರ ಕುಟುಂಬದ ಮೂಲ ಮನೆಯಾಗಿದೆ.

ಮನೆಯ ವೈರಿಂಗ್ ಹಾಗೂ ವಿದ್ಯುತ್ ಪಂಪ್‌ಗಳಿಗೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸಿಡಿಲಿನ ರಭಸಕ್ಕೆ ಮನೆಯ ಪಕ್ಕದಲ್ಲಿದ್ದ ಬಾವಿಯ ಕಟ್ಟೆಯ ಕಲ್ಲುಗಳು ತುಂಡಾಗಿವೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಪಿಲ್ಲಂಬು ಕುಟುಂಬದ ಸದಸ್ಯ ನವೀನ್ ಜೈನ್ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

ಮಂಗಳೂರು: ಭಾರಿ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ ಸೋಮವಾರ (ನ.15) ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಜೆ ಘೋಷಣೆ ಮಾಡಿದ್ದಾರೆ. ಕಾಲೇಜುಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಸೋಮವಾರವೂ ಮಳೆ ಸಾಧ್ಯತೆ ಇರುವುದರಿಂದ ಆರಂಜ್ ಅಲರ್ಟ್ ಘೋಷಿಸಲಾಗಿದೆ.

ನಿರಂತರ ಮಳೆಯಿಂದಾಗಿ ಹಲವೆಡೆ ಭೂಕುಸಿತದ ಭೀತಿ ತಲೆದೋರಿದೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT