ಬುಧವಾರ, ಫೆಬ್ರವರಿ 8, 2023
16 °C
ತಲೆ ಕೆಳಗಾಗಿ ಹಾರಾಡಿದ ಧ್ವಜ; ಸರಿಪಡಿಸಿದ ಅಧಿಕಾರಿಗಳು

ಜಿಲ್ಲೆಯಲ್ಲಿ ಸಾಮರಸ್ಯ ನೆಲೆಸಲಿ: ಮೀನುಗಾರಿಕೆ ಸಚಿವ ಎಸ್. ಅಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಚಿವ ಎಸ್. ಅಂಗಾರ ಧ್ವಜಾರೋಹಣ ನೆರವೇರಿಸಿದರು.

ಸಚಿವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜ ತಲೆಕೆಳಗಾಗಿ ಹಾರಾಡಿತು. ನಂತರ ಅಧಿಕಾರಿಗಳು ಅದನ್ನು ಸರಿಪಡಿಸಿದರು.

ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಸಚಿವರು, ‘ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ. ನಾಗರಿಕರು ಶಾಂತಿಯುತ, ಸಹಬಾಳ್ವೆ ನಡೆಸುವಂತಾಗಲಿ ಎಂದು ತಾಯಿ ಭುವನೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ’ ಎಂದರು.

‘ಕರ್ನಾಟಕದ ಪರಂಪರೆಯು ದೇಶದ ಪುರಾತನ ಪರಂಪರೆಗಳಲ್ಲಿ ಒಂದು. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಪಸರಿಸಿತ್ತು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ವಿವಿಧ ಆಡಳಿತಕ್ಕೆ ಒಳಪಟ್ಟಿದ್ದ ಈ ನಾಡು ಮತ್ತೆ ಒಂದಾಗಬೇಕಾದರೆ ಹಲವು ಶತಮಾನ ಕಾಯಬೇಕಾಯಿತು. ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲ ಅರ್ಥ ಹೊಂದಿದೆ’ ಎಂದರು.

‘ಬ್ರಿಟಿಷರ ಅಧಿಕಾರದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದ ಕನಸನ್ನು ಡೆಪ್ಯೂಟಿ ಚೆನ್ನಬಸಪ್ಪ ಅವರು ಕಂಡಿದ್ದರು. ಅವರು 1865ರಲ್ಲಿ ಚಾಲನೆ ನೀಡಿದ ಚಳವಳಿ 100 ವರ್ಷಗಳವರೆಗೆ  ನಡೆದ ಫಲವಾಗಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಉದಯವಾಗುವುದರೊಂದಿಗೆ ವಿವಿಧೆಡೆ ಹಂಚಿಹೋಗಿದ್ದ ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆಯಲಾಯಿತು. ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯ, ಆಚಾರ್ಯ ಬಿ.ಎಂ ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವಾರು ಮಹನೀಯರು ಹಾಗೂ ಅಸಂಖ್ಯಾತ ಲೇಖಕ - ಲೇಖಕಿಯರು, ಸಂಘ - ಸಂಸ್ಥೆಗಳು, ಪತ್ರಿಕೋದ್ಯಮಿಗಳು ಹಾಗೂ ಹೋರಾಟಗಾರರನ್ನು ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

12 ವೈದ್ಯಕೀಯ ಆಮ್ಲಜನಕ ಘಟಕ: ಕೋವಿಡ್ ಸಂಭಾವ್ಯ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ 12 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಐದು ಹಾಸಿಗೆಗಳಿಗೆ ಐಸಿಯು ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ 89ರಷ್ಟು ಮಂದಿಗೆ ಕೋವಿಡ್‌ ಮೊದಲನೇ ಡೋಸ್ ಹಾಗೂ ಶೇ 52 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.  ಒಂದು ಸಾವಿರ ಹಾಗೂ 930 ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡುವ ಘಟಕವನ್ನು ಇತ್ತೀಚೆಗಷ್ಟೇ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಆವರಣದಲ್ಲಿ ಉದ್ಘಾಟಿಸಲಾಗಿದೆ ಎಂದು ಹೇಳಿದರು.

ಪಣಂಬೂರು, ತಣ್ಣೀರು ಬಾವಿ, ಸೊಮೇಶ್ವರ, ತಲಪಾಡಿ, ಸಸಿಹಿತ್ಲು, ಸುರತ್ಕಲ್, ಉಳ್ಳಾಲ ಹಾಗೂ ಮುಕ್ಕ ಕಡಲ ತೀರಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕಟೀಲು ದುರ್ಗಾಪರಮೇಶ್ವರಿ, ಕದ್ರಿ ಮಂಜುನಾಥ, ಉರ್ವ ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಧರ್ಮಸ್ಥಳ, ಸೌತಡ್ಕ ಗಣಪತಿ, ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಯಾತ್ರಿ ನಿವಾಸ, ರಸ್ತೆ, ಶೌಚಾಲಯಗಳು ಸೇರಿದಂತೆ ₹ 23.6 ಕೋಟಿ ವೆಚ್ಚದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದರು.

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು 58 ಸಾಧಕರಿಗೆ ನೀಡಿ, ಪುರಸ್ಕರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು