ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗ ಚಟುವಟಿಕೆ ನಾಟಕಕ್ಕೆ ಸೀಮಿತವಲ್ಲ’

ನಾಟಕೋತ್ಸವ: ಕಾಸರಗೋಡು ಚಿನ್ನಾಗೆ ರಂಗ ಭಾಸ್ಕರ ಪ್ರದಾನ
Last Updated 24 ಸೆಪ್ಟೆಂಬರ್ 2019, 15:37 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ‘ರಂಗ ಭಾಸ್ಕರ–2019’ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಅವರಿಗೆ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿನ್ನಾ, ‘ರಂಗ ಚಟುವಟಿಕೆಗಳು ನಾಟಕಕ್ಕೆ ಸೀಮಿತವಾದರೆ ಸಾಲದು. ರಂಗಕರ್ಮಿಗಳೆಲ್ಲ ಒಂದು ಕುಟುಂಬವಾಗಬೇಕು’ ಎಂದರು.

‘ರಂಗಕರ್ಮಿಗಳಾದ ನಾವೆಲ್ಲ ನಾಟಕದಾಚೆಗೆ ಒಬ್ಬನ ನೋವಿಗೆ ಮತ್ತೊಬ್ಬ ಸ್ಪಂದಿಸಬೇಕು. ಸ್ಪಂದನೆ ಎಂದರೆ ಆರ್ಥಿಕವಾಗಿಯೇ ಇರಬೇಕಾಗಿಲ್ಲ. ನೋವಿನಲ್ಲಿ ಇರುವವನಿಗೆ ಎರಡು ಪ್ರೀತಿ ಮಾತು, ಸಂಕಷ್ಟದಲ್ಲಿ ಇರುವವನಿಗೆ ಬೆನ್ನುತಟ್ಟಿ, ತೀರಿ ಹೋದವನ ಮನೆಗೆ ಹೋಗಿ ಬನ್ನಿ. ಎಲ್ಲ ಭೇದಭಾವ, ಮೇಲು–ಕೀಳು, ಸ್ಪರ್ಧೆಗಳಿಂದ ಮುಕ್ತವಾಗಿ ಒಂದೇ ಕುಟುಂಬವಾಗಿರಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ನಾಟಕ ವೀಕ್ಷಣೆ ಹಾಗೂ ಪ್ರದರ್ಶನದಲ್ಲಿ ಯುವ ತಲೆಮಾರು ಹೆಚ್ಚಾಗಿ ಬರಬೇಕು. ಆ ಮೂಲಕ ರಂಗಕ್ಕೆ ಮತ್ತೆ ಜೀವಂತಿಕೆ ನೀಡಬೇಕು’ ಎಂದರು.

ಹಿರಿಯ ರಂಗಕರ್ಮಿ ಡಾ.ನಾ.ದಾ.ಶೆಟ್ಟಿ ಮಾತನಾಡಿ, ‘ಮಂಗಳೂರಿನಲ್ಲಿ ರಂಗ ಚಟುವಟಿಕೆಗಳು ಮತ್ತೆ ಪುನರುಜ್ಜೀವನಗೊಳ್ಳುತ್ತಿವೆ. ಯುವ–ಹವ್ಯಾಸಿಗಳು ಸಕ್ರಿಯರಾಗುತ್ತಿರುವುದು ಸಂತಸ ಮೂಡಿಸಿದೆ’ ಎಂದರು.

‘ನಾಟಕಕ್ಕೆ ನೋಡಲು ಹಾಗೂ ಆಡಲು ಹೊಸ ಹೊಸ ಮುಖಗಳು ಬರಬೇಕು. ಇಂಗ್ಲೆಂಡ್‌ನಲ್ಲಿ ಒಂದು ನಾಟಕವನ್ನು 68 ವರ್ಷಗಳಿಂದ ಒಂದೇ ಸ್ಥಳದಲ್ಲಿ ಪ್ರದರ್ಶಿಸುತ್ತಿದ್ದಾರೆ. ಅಂದು ಅಜ್ಜ ಹಾಕಿದ ಪಾತ್ರವನ್ನು, ಇಂದು ಮೊಮ್ಮಕ್ಕಳು ಹಾಕುತ್ತಿದ್ದಾರೆ. ಆ ನಾಟಕ ನೋಡಲು ಇಂದಿಗೂ ಜನ ಹೋಗುತ್ತಿದ್ದಾರೆ. ಇಂತಹ ಪರಂಪರೆಯು ನಮ್ಮಲ್ಲೂ ಬೆಳೆಯಬೇಕು’ ಎಂದರು.

‘ಭಾಸ್ಕರ ನೆಲ್ಲಿತೀರ್ಥ ಅವರು ‘ರಂಗ ಸವ್ಯಸಾಚಿ’. ಅಂತಹ ಇನ್ನೊಬ್ಬ ಸವ್ಯಸಾಚಿ ಕಾಸರಗೋಡು ಚಿನ್ನಾ. ಹೀಗಾಗಿ, ಅವರ ಹೆಸರಿನ ಪ್ರಶಸ್ತಿಯನ್ನು ಚಿನ್ನಾಗೆ ಪ್ರದಾನ ಮಾಡಿರುವುದು ಸಾರ್ಥಕತೆ ಪಡೆದಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್ ಮಾತನಾಡಿ, ‘ಉತ್ತಮ ನಾಟಕವು ನಮ್ಮನ್ನೆಲ್ಲ ಬೆಸೆಯುತ್ತತೆ. ಹೀಗೆ, ಬೆಸೆಯುವ, ಸಂತೈಸುವ ರಂಗ ಚಟುವಟಿಕೆ ಇನ್ನಷ್ಟು ಬೆಳೆಯಲಿ. ನಮ್ಮ ಸಂಸ್ಥೆಯ ಪ್ರೋತ್ಸಾಹ ಸದಾ ಇದೆ’ ಎಂದರು.

ಉದ್ಯಮಿ ಸತೀಶ್ ಬೋಳಾರ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್, ಅಲೋಶಿಯಸ್ ಕಾಲೇಜು ಕನ್ನಡ ಸಂಘದ ಅಧ್ಯಕ್ಷ ಡಾ.ದಿನೇಶ್‌ ನಾಯಕ್, ರಂಗಸಂಗಾತಿಯ ಟ್ರಸ್ಟಿ ಎಂ.ಕರುಣಾಕರ ಶೆಟ್ಟಿ , ಸುರೇಶ್‌ ಬೆಳ್ಚಾಡ, ಶಶಿರಾಜ್ ಕಾವೂರು, ಮೈಮ್ ರಾಮದಾಸ್,ರಾಮ್‌ ಶೆಟ್ಟಿ ಹಾರಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT