ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಯಲ್ಲಿ ಮ್ಯಾರಥಾನ್‌ ಓಟದ ಸೊಬಗು

ವಿವಿಧ ವಿಭಾಗಗಳಲ್ಲಿ ನೂರಾರು ಮಂದಿ ಸ್ಪರ್ಧೆ; 82ರ ಹರಯದ ವ್ಯಕ್ತಿಯೂ ಭಾಗಿ
Last Updated 6 ನವೆಂಬರ್ 2022, 15:59 IST
ಅಕ್ಷರ ಗಾತ್ರ

ಮಂಗಳೂರು: ಮುಂಜಾನೆಯ ಚುಮು ಚುಮು ಚಳಿಯಲ್ಲಿ ಓಟದ ರಸ ಉಂಡ ಕ್ರೀಡಾಪಟುಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಲ್ಲೂ ಹುರುಪು ತುಂಬಿದರು. ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌, 10–ಕೆ, 5–ಕೆ ಮತ್ತು 2–ಕೆ ಓಟದಲ್ಲಿ ಬೆಂಗಳೂರು, ಮೈಸೂರು, ಮುಂಬೈ ಮುಂತಾದ ನಗರಗಳಿಂದ ಬಂದಿದ್ದ ಓಟಗಾರರು ಸ್ಥಳೀಯರೊಂದಿಗೆ ಸೇರಿ ಮಿಂಚಿನ ಸಂಚಾರ ಮೂಡಿಸಿದರು.

ಬೆಳಕು ಹರಿಯುವ ಹೊತ್ತಿಗೆ ಮಂಗಳಾ ಕ್ರೀಡಾಂಗಣದಲ್ಲಿ ಮೊದಲು ಆರಂಭಗೊಂಡದ್ದು 21.1 ಕಿಲೋಮೀಟರ್ ಹಾಫ್ ಮ್ಯಾರಥಾನ್‌. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತು ಎಸಿಪಿ ಗೀತಾ ಕುಲಕರ್ಣಿ ಅವರು ಚಾಲನೆ ನೀಡಿದ ಈ ಓಟದಲ್ಲಿ 350ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕೂಳೂರು ಫೆರಿ ರಸ್ತೆ, ಕೊಟ್ಟಾರ ಚೌಕಿ, ಕೂಳೂರು ಸೇತುವೆ ಮೂಲಕ ತಣ್ಣೀರು ಬಾವಿಗೆ ಸಾಗಿದ ಓಟಗಾರರು ‘ಯು’ ಟರ್ನ್ ತೆಗೆದುಕೊಂಡು ವಾಪಸ್ ಬಂದು ಮಂಗಳಾ ಕ್ರೀಡಾಂಗಣ ತಲುಪಿದರು.

10 ಕಿಲೋಮೀಟರ್‌, 5 ಕಿಲೋಮೀಟರ್ ಮತ್ತು 2 ಕಿಲೋಮೀಟರ್ ಓಟಕ್ಕೆ ಡೆಕಾಥ್ಲಾನ್ ಸ್ಟೋರ್ ವ್ಯವಸ್ಥಾಪಕ ಜಿತೇಶ್ ರೈ, ನಿವಿಯಸ್ ಸೊಲ್ಯುಷನ್ಸ್‌ನ ಸಿಒಒ ರೋಷನ್ ಬಾವ, ಎಸ್‌.ಎಲ್‌.ಶೇಟ್ ಜುವೆಲರ್ಸ್‌ನ ಪ್ರಶಾಂತ್ ಶೇಟ್‌, ರೇಸ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಮತ್ತು ಮಂಗಳೂರು ರನ್ನರ್ಸ್‌ ಕ್ಲಬ್ ಅಧ್ಯಕ್ಷೆ ಅಮಿತಾ ಡಿಸೋಜ ಹಸಿರು ನಿಶಾನೆ ತೋರಿದರು.

5 ವರ್ಷದ ಬಾಲೆಯಿಂದ ಹಿಡಿದು 82ರ ಹರಯದ ವ್ಯಕ್ತಿಯೂ ಈ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಚೇತನಾ ಮಕಳ ಅಭಿವೃದ್ಧ ಕೇಂದ್ರ ಮತ್ತು ಸರ್ವಮಂಗಳ ಟ್ರಸ್ಟ್‌ನ ಮಕ್ಕಳು ವಿಶೇಷ ಗಮನ ಸೆಳೆದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಳುನಾಡಿನ ಸಂಸ್ಕೃತಿ ಮೇಳೈಸಿತು. ಹುಲಿಕುಣಿತ, ಯಕ್ಷಗಾನ, ಭೂತಕೋಲ ಮುಂತಾದ ಕಲಾಪ್ರಕಾರಗಳು ಮೈ ನವಿರೇಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT