ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಸಡಗರ; ಸಾಂಸ್ಕೃತಿಕ ಸೌರಭ

ನೆಹರು ಮೈದಾನದಲ್ಲಿ ಪಥಸಂಚಲನದ ರೋಮಾಂಚನ; ವಿಂಟೇಜ್ ವಾಹನಗಳ ಪ್ರದರ್ಶನದ ಪುಳಕ
Last Updated 26 ಜನವರಿ 2023, 16:25 IST
ಅಕ್ಷರ ಗಾತ್ರ

ಮಂಗಳೂರು: ಆಕರ್ಷಕ ಪಥಸಂಚಲನ, ದೇಶಭಕ್ತಿ ಮತ್ತು ನಾಡಿನ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗಿನೊಂದಿಗೆ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಸಡಗರದಿಂದ ಗುರುವಾರ ಆಚರಿಸಲಾಯಿತು. ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿಂಟೇಜ್ ವಾಹನಗಳ ಪ್ರದರ್ಶನ ಜನರನ್ನು ಪುಳಕಗೊಳಿಸಿತು.

ಪೊಲೀಸ್‌, ಗೃಹರಕ್ಷಕದಳ, ಅಗ್ನಿಶಾಮಕ ಮತ್ತು ತುರ್ತು ಸೇವಾದಳ, ಅಬಕಾರಿ ಇಲಾಖೆಗಳ ಪಥ ಸಂಚಲನಕ್ಕೆ ಪೊಲೀಸ್ ಬ್ಯಾಂಡ್ ವಾದ್ಯ ಹಾಗೂ ಶಾಲಾ ಬ್ಯಾಂಡ್ ತಂಡದವರು ಮೆರುಗು ತುಂಬಿದರು. ತುಳು ಸೇರಿದಂತೆ ವಿವಿಧ ಭಾಷೆಗಳ ಹಾಡುಗಳಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕವೂ ಮುದ ನೀಡಿದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು. ರಾಷ್ಟ್ರೀಯತೆ ಬೆಳೆಸುವ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ಪಾತ್ರ ವಹಿಸುತ್ತಿದ್ದು ಈ ವಿಷಯದಲ್ಲಿ ಜಿಲ್ಲೆಯು ದೇಶದ ಪ್ರಯೋಗಶಾಲೆ ಎಂದು ಕರೆಸಿಕೊಳ್ಳುವತ್ತ ಸಾಗುತ್ತಿದೆ. ಜಾತಿ, ಭಾಷೆಯನ್ನು ಮೀರಿ ದೇಶ ಮೊದಲು ಎಂಬ ಪರಿಕಲ್ಪನೆ ಇಲ್ಲಿ ಬೆಳೆಯುತ್ತಿದೆ. ಇಲ್ಲಿನ ಜನರ ನಡವಳಿಕೆಯಲ್ಲಿ ಮಾತ್ರವಲ್ಲ, ಯೋಜನೆಗಳ ಅನುಷ್ಠಾನದಲ್ಲೂ ಅದು ಎದ್ದು ಕಾಣುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಎಲ್ಲ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧ ಬೆಳೆಸುವ ಭಾರತದ ನೀತಿಯು ವಿಶ್ವಮಾನ್ಯವಾಗಿದ್ದು ಎಲ್ಲ ವರ್ಗದವರ ಹಕ್ಕುಗಳ ರಕ್ಷಣೆ ಮಾಡುತ್ತಿರುವುದರಿಂದ ನಮ್ಮದು ಶ್ರೇಷ್ಠ ಸಂವಿಧಾನ ಎಂದು ಕರೆಸಿಕೊಂಡಿದೆ. ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಸಮಗ್ರ ಬದಲಾವಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವದಂದು ದೇಶದ ಇತಿಹಾಸವನ್ನು ಪ್ರತಿಯೊಬ್ಬರಿಗೆ ತಿಳಿಸುವ ಪ್ರಯತ್ನ ನಡೆಯುತ್ತದೆ. ಇದರಿಂದ ಜನರಿಗೆ ಅವರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡುತ್ತದೆ. ಜಾತಿ, ಧರ್ಮ ಎಂದು ಕಚ್ಚಾಡುವ ಜನರ ಮಧ್ಯೆ ಸಂವಿಧಾನದ ವಿದ್ಯುತ್ ಸಂಚಾರ ಆದಾಗ ಎಲ್ಲರೂ ಒಂದೇ ಎಂಬ ಭಾವ ಮೂಡುತ್ತದೆ. ಇಂಥ ಕಾರ್ಯಕ್ಕೆ ಗಣರಾಜ್ಯೋತ್ಸವ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ₹ 1040 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿದ್ದು ಜಲಜೀವನ್ ಮಿಷನ್ ಯೋಜನೆಯಡಿ 3 ಹಂತಗಳಲ್ಲಿ ‘ಮನೆಮನೆಗೆ ಗಂಗೆ’ ತಲುಪಿಸಲು ₹ 576 ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಸಿಗಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮ ಪಂಚಾಯತ್, ಅಮೃತ ಅಂಗನವಾಡಿ, ಅಮೃತ ಆರೋಗ್ಯ, ಅಮೃತ ಶಾಲೆ, ಅಮೃತ ಸ್ವಸಹಾಯ ಶೀರ್ಷಿಕೆಯಲ್ಲಿ ಜಿಲ್ಲೆಗೆ ₹ 8 ಕೋಟಿ ಮೊತ್ತ ಬಿಡುಗಡೆಗೊಳಿಸಲಾಗಿದೆ. ಗ್ರಾಮೀಣ ಭಾಗದ ಶೌಚಾಲಯಗಳಲ್ಲಿ ಉತ್ಪತ್ತಿಯಾಗುವ ಬೂದು ನೀರು ಮತ್ತು ಕಪ್ಪು ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಮತ್ತು ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಮಲತ್ಯಾಜ್ಯ ಘಟಕ ನಿರ್ಮಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಕುಮಾರ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಮಹಾನಗರದ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದರು.

ಪ್ಲಾಸ್ಟಿಕ್ ಪಾರ್ಕ್: ಕಾಮಗಾರಿ ಫೆಬ್ರುವರಿಯಲ್ಲಿ ಆರಂಭ

ಜಿಲ್ಲೆಯ ಗಂಜಿಮಠದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪ್ಲಾಸ್ಟಿಕ್ ಪಾರ್ಕ್‌ಗೆ 104 ಎಕರೆ ಜಾಗ ತೆಗೆದಿರಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಫೆಬ್ರುವರಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು. ವಿವೇಕ ಶಾಲೆ ಯೋಜನೆಯಡಿ ಜಿಲ್ಲೆಯ ಶಾಲೆಗಳಲ್ಲಿ 275 ಕೊಠಡಿಗಳ ದುರಸ್ತಿಗೆ ₹ 39.32 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಾಲೆಗಳ ದುರಸ್ತಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ₹ 50 ಲಕ್ಷ ಅನುದಾನ ಮಂಜೂರು ಆಗಿದೆ. ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ 289 ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ ₹ 5.54 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದಕ್ಕಾಗಿ ₹ 8 ಕೋಟಿ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.


ಡೀಮ್ಡ್ ಅರಣ್ಯ: 34850 ಹೆಕ್ಟೇರ್ ಪ್ರದೇಶ ಕೈಬಿಡಲು ನಿರ್ಧಾರ

ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ಪಟ್ಟಿಯಿಂದ 34850 ಹೆಕ್ಟೇರ್ ಪ್ರದೇಶವನ್ನು ಕೈಬಿಡಲು ನಿರ್ಧರಿಸಲಾಗಿದ್ದು ಆ ಪ್ರದೇಶಗಳು ಕಂದಾಯ ಇಲಾಖೆಗೆ ಹಸ್ತಾಂತರ ಆಗಿವೆ. ಅವುಗಳನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿರಿಸುವಂತೆ ಆಯಾ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಅದನ್ನು ಸಕ್ರಮ ಮಾಡಿಸಿಕೊಳ್ಳಲು ಕ್ರಮ ವಹಿಸಲಾಗಿದ್ದು 94ಸಿ ಅಡಿಯಲ್ಲಿ 53,049 ಮತ್ತು 94 ಸಿಸಿ ಅಡಿಯಲ್ಲಿ 25,943 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT