ಟೋಲ್‌ ಕೇಂದ್ರ ರದ್ದುಗೊಳಿಸಲು ಅ.22ರಿಂದ ಸುರತ್ಕಲ್‌ನಲ್ಲಿ ಅನಿರ್ದಿಷ್ಟ ಧರಣಿ

7
ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಘೋಷಣೆ

ಟೋಲ್‌ ಕೇಂದ್ರ ರದ್ದುಗೊಳಿಸಲು ಅ.22ರಿಂದ ಸುರತ್ಕಲ್‌ನಲ್ಲಿ ಅನಿರ್ದಿಷ್ಟ ಧರಣಿ

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್‌ ಟೋಲ್‌ ಕೇಂದ್ರವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್‌ 22ರಿಂದ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸುರತ್ಕಲ್‌ ಜಂಕ್ಷನ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸುವುದಾಗಿ ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಘೋಷಿಸಿದೆ.

ಸಮಿತಿಯ ಇತರೆ ಮುಖಂಡರೊಂದಿಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ‘ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ಮುಚ್ಚಲು ಜನವರಿ 3ರಂದು ರಾಜ್ಯ ಸರ್ಕಾರದ ಉನ್ನತಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಮುಚ್ಚಿಟ್ಟು ಎರಡು ಬಾರಿ ಗುತ್ತಿಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಗುತ್ತಿಗೆ ನೀಡಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಟೋಲ್‌ ಕೇಂದ್ರವನ್ನು ಮುಚ್ಚುವವರೆಗೂ ಧರಣಿ ನಡೆಸಲಾಗುವುದು’ ಎಂದರು.

ಅ.30ಕ್ಕೆ ಟೋಲ್‌ ಸಂಗ್ರಹ ಗುತ್ತಿಗೆ ಮುಗಿಯಲಿದೆ. ಸುರತ್ಕಲ್‌ ಟೋಲ್‌ ಕೇಂದ್ರವನ್ನು ಹೆಜಮಾಡಿ ಟೋಲ್‌ ಕೇಂದ್ರದ ಜೊತೆ ವಿಲೀನಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಿಂದೆ ಘೋಷಿಸಿತ್ತು. ಈ ಟೋಲ್‌ ಕೇಂದ್ರವನ್ನು ರದ್ದು ಮಾಡುವಂತೆ ಸಂಸದ ನಳಿನ್‌ ಕುಮಾರ್ ಕಟೀಲ್‌ ಸೂಚಿಸಿದ್ದರು. ಆದರೆ, ಮತ್ತೆ ಅಕ್ರಮವಾಗಿ ಟೋಲ್‌ ಕೇಂದ್ರ ಮುಂದುವರಿಸಲು ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಳಿನ್‌ ಕುಮಾರ್‌ ಕಟೀಲ್‌ ನೇರ ಹೊಣೆ. ಸಂಸದರು ಟೋಲ್‌ ಕೇಂದ್ರದ ಗುತ್ತಿಗೆದಾರರ ಪರವಾದ ನಿಲುವು ತಳೆಯುವ ಮೂಲಕ ಜನವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಹೋರಾಟ ಸಮಿತಿಯ ಪಾದಯಾತ್ರೆ ಸಮಯದಲ್ಲಿ ಹೆದ್ದಾರಿಯ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಮತ್ತೆ ಕೆಲಸ ನಿಂತಿದೆ. ಪಣಂಬೂರಿನಿಂದ ಬೈಕಂಪಾಡಿವರೆಗೆ ಒಂದು ಮಾರ್ಗದಲ್ಲಿ ಮಾತ್ರ ಗುಂಡಿ ಮುಚ್ಚಲಾಗಿದೆ. ಅದರಲ್ಲೂ ಕಳಪೆ ಕಾಮಗಾರಿ ನಡೆದಿದೆ. ಕೂಳೂರು ಸೇತುವೆ ದುರಸ್ತಿ ಮಾಡಿಲ್ಲ. ಈಗ ಆ ಸೇತುವೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲು ಎನ್‌ಎಚ್‌ಎಐ ಮುಂದಾಗಿದೆ. ಪ್ರಾಧಿಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಬಿ.ಸಿ.ರೋಡ್‌ನಿಂದ ಸುರತ್ಕಲ್‌ ಟೋಲ್‌ ಕೇಂದ್ರದವರೆಗಿನ ರಸ್ತೆಯ ನಿರ್ವಹಣೆಯ ಗುತ್ತಿಗೆಯನ್ನು ಡಿ.ಪಿ.ಜೈನ್‌ ಎಂಬ ಗುತ್ತಿಗೆದಾರರಿಗೆ ನೀಡಲಾಗಿದೆ. ವಾರ್ಷಿಕ ₹ 8.30 ಕೋಟಿ ಅವರಿಗೆ ನೀಡಲಾಗುತ್ತಿದೆ. ಆದರೆ, ಅವರಿಂದ ಯಾವ ಕೆಲಸವೂ ಆಗುತ್ತಿಲ್ಲ. ಈ ಬಗ್ಗೆಯೂ ಎನ್‌ಎಚ್‌ಎಐ ಮೌನ ವಹಿಸಿದೆ ಎಂದು ಆರೋಪಿಸಿದರು.

ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಅ.22ರಂದು ಅನಿರ್ದಿಷ್ಟಾವಧಿ ಧರಣಿ ಆರಂಭವಾಗಲಿದೆ. ಸಮಿತಿಯ ಎಲ್ಲ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್‌, ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಅಧ್ಯಕ್ಷ ದಿನೇಶ್ ಕುಂಪಲ, ಕುಳಾಯಿ ನಾಗರಿಕ ಸಮಿತಿ ಅಧ್ಯಕ್ಷ ಭರತ್‌ ಶೆಟ್ಟಿ ಕುಳಾಯಿ, ಜಿಲ್ಲಾ ಆನ್‌ಲೈನ್‌ ಟ್ಯಾಕ್ಸಿ ಯೂನಿಯನ್‌ ಉಪಾಧ್ಯಕ್ಷ ಶಿವ, ಹೋರಾಟ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ ಪಡ್ರೆ, ಗಂಗಾಧರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !