ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಜಿಯುಎಚ್‌ಎಸ್‌ ವಲಯ ಕಚೇರಿ ಸ್ಥಾಪನೆ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಹೇಳಿಕೆ
Last Updated 15 ಜೂನ್ 2019, 14:05 IST
ಅಕ್ಷರ ಗಾತ್ರ

ಮಂಗಳೂರು: ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಕಾರ ಹೊಂದಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ವಲಯ ಕಚೇರಿಯನ್ನು ಶೀಘ್ರದಲ್ಲಿಯೇ ಮಂಗಳೂರಿನಲ್ಲಿ ಆರಂಭಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ವಿವಿಧ ಕೆಲಸಗಳಿಗಾಗಿ ಬೆಂಗಳೂರಿನಲ್ಲಿರುವ ಆರ್‌ಜಿಯುಎಚ್‌ಎಸ್‌ ಕೇಂದ್ರ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅದನ್ನು ತಪ್ಪಿಸಲು ಮಂಗಳೂರಿನಲ್ಲಿ ವಲಯ ಕಚೇರಿ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದರು.

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಪಕ್ಕದಲ್ಲೇ ಆರ್‌ಜಿಯುಎಚ್‌ಎಸ್‌ ವಲಯ ಕಚೇರಿ ಆರಂಭಿಸಲಾಗುವುದು. ಇದಕ್ಕಾಗಿ 5 ಎಕರೆ ಜಮೀನು ಗುರುತಿಸಲಾಗಿದೆ. ವಿಶ್ವವಿದ್ಯಾಲಯದ ಕಚೇರಿ ಮತ್ತು ಕ್ರೀಡಾ ಸಂಕೀರ್ಣವನ್ನು ಇಲ್ಲಿ ಆರಂಭಿಸಲಾಗುವುದು. ಆರ್‌ಜಿಯುಎಚ್‌ಎಸ್‌ ಸಿಂಡಿಕೇಟ್‌ನ ಮುಂದಿನ ಸಭೆ ಮಂಗಳೂರಿನಲ್ಲೇ ನಡೆಯಲಿದೆ ಎಂದು ತಿಳಿಸಿದರು.

ಶಾಶ್ವತ ಪರಿಹಾರ:

ಉಳ್ಳಾಲದ ವಿವಿಧೆಡೆ ಕಡಲ್ಕೊರೆತದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಎರಡು ಮಲಗುವ ಕೋಣೆಗಳುಳ್ಳ ಮನೆ ಅಥವಾ ತಲಾ ಮೂರು ಸೆಂಟ್ಸ್‌ ಜಮೀನು ನೀಡಿ, ಕೊಡಗು ಮಾದರಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.

ಉಳ್ಳಾಲದಲ್ಲಿ ಕಡಲ್ಕೊರೆತದಿಂದ ಅಪಾಯದಲ್ಲಿರುವ 150 ಮನೆಗಳು ಮತ್ತು ಬೀಚ್‌ ಅಭಿವೃದ್ಧಿ ಯೋಜನೆಯಡಿ ನಿರಾಶ್ರಿತರಾಗಲಿರುವ 40 ಕುಟುಂಬಗಳನ್ನು ಸ್ಥಳಾಂತರಿಸಲಾಗುವುದು. ಪುನರ್ವಸತಿ ಯೋಜನೆಯಡಿ ಒಂದು ಮಲಗುವ ಕೋಣೆಯುಳ್ಳ ಮನೆಯನ್ನು ನಿರ್ಮಿಸಿಕೊಡುವ ಪ್ರಸ್ತಾವವಿತ್ತು. ಆದರೆ, ತೊಂದರೆಗೊಳಗಾಗಿರುವ ಬಹುತೇಕ ಕುಟುಂಬಗಳು ಎರಡು ಕೋಣೆಗಳುಳ್ಳ ಮನೆ ನೀಡುವಂತೆ ಒತ್ತಾಯಿಸಿವೆ. ಹೊಸ ಪ್ರಸ್ತಾವವನ್ನು ಮಂಜೂರಾತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ತಕ್ಷಣವೇ ಸ್ಥಳಾಂತರವಾಗಲಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಆಗುವವರೆಗೂ ಮಾಸಿಕ ನಿಗದಿತ ಬಾಡಿಗೆ ಮೊತ್ತವನ್ನು ಪರಿಹಾರದ ರೂಪದಲ್ಲಿ ಪಾವತಿಸಲಾಗುವುದು ಎಂದರು.

ಬೇರೆ ಮನೆಗಳಿದ್ದರೂ ಕೆಲವರು ಪರಿಹಾರಕ್ಕಾಗಿ ಕಡಲ ತೀರದಲ್ಲಿ ನೆಲೆಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ಉತ್ತಮ ಸೌಕರ್ಯ ಹೊಂದಿರುವವರು ಕಡಲ ತೀರದಲ್ಲಿ ಉದ್ದೇಶಪೂರ್ವಕವಾಗಿ ನೆಲೆಸಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಈ ಆರೋಪವನ್ನು ನಂಬಲಾಗದು. ಆದರೂ, ಅರ್ಹರನ್ನು ಮಾತ್ರವೇ ಗುರುತಿಸಿ ಪರಿಹಾರ ಒದಗಿಸಲಾಗುವುದು’ ಎಂದು ತಿಳಿಸಿದರು.

ಕಡಲ್ಕೊರೆತದಿಂದ ಮನೆಹಾನಿ, ಮನೆ ಕಳೆದುಕೊಂಡವರಿಗೆ ಪರಿಹಾರ ಮೊತ್ತವನ್ನು ಶೀಘ್ರವೇ ನೀಡಲಾಗುವುದು. ಮಳೆ ನಿಂತ ಬಳಿಕ ಶಾಶ್ವತ ತಡೆಗೋಡೆ ಕಾಮಗಾರಿ ಆರಂಭವಾಗಲಿದೆ ಎಂದರು.

ಇಲೆಕ್ಟ್ರಿಕ್‌ ವಾಹನ:

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯುತ್‌ ಚಾಲಿತ ಕಾರು, ಆಟೊ ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು. ಮಂಗಳೂರು ನಗರದಲ್ಲೂ ಈ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.

ಪಾಲಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್‌ ಮತ್ತು ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗುವುದು. ಈ ಸಂಬಂಧ ನೀತಿಯೊಂದನ್ನು ರೂಪಿಸುತ್ತಿದ್ದು, ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು.

ಎಪಿಎಂಸಿ ಉಪಾಧ್ಯಕ್ಷೆ ಮುತ್ತಕ್ಕ, ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ್‌, ದಿನೇಶ್‌ ಪೂಜಾರಿ, ಪೀಯೂಸ್‌ ಮೊಂತೆರೊ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT