ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಕೆ ಆಮದು ವಿರುದ್ಧ ಸಂಸತ್ತಿನಲ್ಲಿ ಧ್ವನಿಯಾಗುವೆ

ಕಡಬ– ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪದ್ಮರಾಜ್‌
Published 31 ಮಾರ್ಚ್ 2024, 5:59 IST
Last Updated 31 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ಉಪ್ಪಿನಂಗಡಿ/ಸುಳ್ಯ: ‘ಅಡಿಕೆ ಆಮದಿನ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಆಗಬೇಕು. ಅಡಿಕೆಗೆ ಎದುರಾಗಿರುವ ರೋಗಬಾಧೆಗಳ ನಿವಾರಣೆಗೆ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಅಗತ್ಯವಿದೆ. ಇದರ ಜೊತೆಗೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಗೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಇದೆ. ಗೆದ್ದು ಬಂದರೆ ಈ ನಿಟ್ಟಿನಲ್ಲಿ ಪ್ರಯತ್ನಪಡುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಡಬದಲ್ಲಿ  ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವ. ಧರ್ಮದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವ. ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದವ. ಎಲ್ಲಿಯೂ ಅಪಪ್ರಚಾರ, ಅಪನಂಬಿಕೆ ಬರುವಂತಹ ವರ್ತನೆ ತೋರಿಲ್ಲ. ನಾವು ಯಾರನ್ನು ದ್ವೇಷಿಸುವ, ವಿರೋಧಿಸುವ ಕೆಲಸ ಮಾಡುವುದು ಬೇಡ. ಕಾಂಗ್ರೆಸ್ ಸರಕಾರದ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ ಮತ ಕೇಳೋಣ’ ಎಂದರು.

‘ಈ ಬಾರಿ ಖಂಡಿತವಾಗಿಯೂ ಕಾಂಗ್ರೆಸ್ ಜಯ ಸಾಧಿಸಲಿದೆ. ನಾನು ಗೆದ್ದರೆ ಕಾಂಗ್ರೆಸ್ ಪಕ್ಷದ ಹಾಗೂ ನಿಮ್ಮ ಗೆಲುವು.  ಕಾಂಗ್ರೆಸ್ ಗೆಲುವಿಗೆ ಅವಿರತ ಶ್ರಮ ಪಡಿ’ ಎಂದರು.

ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ‘ಪದ್ಮರಾಜ್ ಆರ್. ವ್ಯಕ್ತಿತ್ವದಲ್ಲಿ ಸೌಹಾರ್ದವನ್ನು ಕಾಣಬಹುದು. ನಮ್ಮೆಲ್ಲ ಸಮಸ್ಯೆಗಳಿಗೂ ಸ್ಪಂದಿಸಬಲ್ಲ ಯುವ ನಾಯಕ ಅವರು’ ಎಂದರು.

‘ಕಡಬ  ತಾಲ್ಲೂಕನ್ನು ರಚಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಅದೇ ಸಂದರ್ಭದಲ್ಲಿ ಕಡಬ ಹಾಗೂ ವಿಟ್ಲವನ್ನು ಪಟ್ಟಣ ಪಂಚಾಯಿತಿ, ಪುತ್ತೂರನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಇದರಲ್ಲಿ ರಮಾನಾಥ ರೈ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದರು. 

ಎಐಸಿಸಿ ಸದಸ್ಯ ಐವನ್ ಡಿಸೋಜ, ‘ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ. ಗ್ಯಾರೆಂಟಿಗಳನ್ನು ಮನೆಮನೆಗೆ ತಲುಪಿಸಿ. ಅಶಾಂತಿ, ಭಯ ಹುಟ್ಟಿಸಿ ಮತ ಪಡೆಯುವ ಅವಶ್ಯಕತೆ ಇಲ್ಲ. ಬಡವರ ಕಷ್ಟವನ್ನು ಸ್ವತಃ ಅರಿತಿರುವ, ಬಡತನದಿಂದಲೇ ಮೇಲೆ ಬಂದಿರುವ ಪದ್ಮರಾಜ್ ಸಂಸದರಾದರೆ ಬಡವರ ಕಷ್ಟಗಳಿಗೂ ಪರಿಹಾರ ಕೊಡಿಸಲಿದ್ದಾರೆ’ ಎಂದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ , ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕೆಪಿಸಿಸಿ ಸದಸ್ಯ ಡಾ. ರಘು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಚುನಾವಣಾ ಉಸ್ತುವಾರಿ ಬಾಲಕೃಷ್ಣ ಬಳ್ಳೇರಿ, ಸುಳ್ಯ ಪ್ರಚಾರ ಸಮಿತಿ ಉಸ್ತುವಾರಿ ವೆಂಕಪ್ಪ ಗೌಡ, ಕಿರಣ್ ಬುಡ್ಲೆಗುತ್ತು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್ ಭಾಗವಹಿಸಿದ್ದರು.

ಸೈನಿಕ ಸ್ಮಾರಕಕ್ಕೆ ನಮನ:

ಸುಳ್ಯ ನಗರ ಪಂಚಾಯಿತಿ ಆವರಣದಲ್ಲಿರುವ ಸೈನಿಕ ಸ್ಮಾರಕಕ್ಕೆ  ಆರ್‌.ಪದ್ಮರಾಜ್ ಆರ್.  ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು.
ಜಿಲ್ಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಕ್ಷೇತ್ರದ  ಉಸ್ತುವಾರಿ ಎನ್.ಜಯಪ್ರಕಾಶ್ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮತ್ತಿತರರಿದ್ದರು

ಕಾಂಗ್ರೆಸ್ ಅಭ್ಯರ್ಥಿಯು  ಮೊಗರ್ಪಣೆ ಮುಹಿಯುದ್ದೀನ್ ಜುಮಾ ಮಸೀದಿಗೆ ಭೇಟಿ ನೀಡಿದರು.

ಕೆವಿಜಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಅವರು, ಸುಳ್ಯದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ  ಕುರುಂಜಿ ವೆಂಕಟರಮಣ ಗೌಡ ಅವರ ಸಾಧನೆಯನ್ನು ಶ್ಲಾಘಿಸಿದರು. ಕೆವಿಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಚಿದಾನಂದ ಅವರ ಮನೆಯವರು ಪದ್ಮರಾಜ್ ಆರ್. ಅವರನ್ನು ಗೌರವಿಸಿದರು.

ಮಂಗಳೂರಿನಲ್ಲಿ ಕ್ಯಾ.ಬೃಜೇಶ್ ಚೌಟ ಅವರು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರಿಂದ ಶನಿವಾರ ಆಶೀರ್ವಾದ ಪಡೆದರು
ಮಂಗಳೂರಿನಲ್ಲಿ ಕ್ಯಾ.ಬೃಜೇಶ್ ಚೌಟ ಅವರು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರಿಂದ ಶನಿವಾರ ಆಶೀರ್ವಾದ ಪಡೆದರು

Cut-off box - ಮೋದಿಯಿಂದ ಹಿಂದೂ ಜೀವನ ಪದ್ಧತಿಗೆ ವಿಶ್ವ ಮನ್ನಣೆ: ಕ್ಯಾ.ಬೃಜೇಶ್‌ ಚೌಟ ಮುಲ್ಕಿ: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಹಿಂದೂ ಜೀವನ ಪದ್ಧತಿಗೆ ಜಗತ್ತಿನಲ್ಲಿ ಮನ್ನಣೆ ಸಿಕ್ಕಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಹೇಳಿದರು. ಮೂಡುಬಿದರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು. ಶಾಸಕರಾದ ಉಮಾನಾಥ ಕೊಟ್ಯಾನ್‌ ಡಾ.ಭರತ್‌ ಶೆಟ್ಟಿ ಹರೀಶ್‌ ಪೂಂಜ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು ಚುನಾವಣಾ ಪ್ರಚಾರದ ನಡುವೆ ಬೃಜೇಶ್‌ ಚೌಟ ಅವರು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರನ್ನು ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ಮನೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.  ಮೂಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT