ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡ ಬಿದ್ದ ಹೆದ್ದಾರಿಯಲ್ಲಿ ಹರಸಾಹಸ

ಉಪ ರಾಷ್ಟ್ರಪತಿ ಸಂಚರಿಸಲಿರುವ ರಸ್ತೆಯಲ್ಲಿ ನಿತ್ಯ ಗೋಳು
Last Updated 30 ಅಕ್ಟೋಬರ್ 2019, 15:50 IST
ಅಕ್ಷರ ಗಾತ್ರ

ಮಂಗಳೂರು: ಹೊಂಡದಲ್ಲಿಯೇ ರಸ್ತೆ ಇದೆಯೋ, ರಸ್ತೆಯಲ್ಲಿ ಹೊಂಡವಿದೆಯೋ ಒಂದೂ ತಿಳಿಯದಂತಹ ಪರಿಸ್ಥಿತಿ ಇಲ್ಲಿಯದು. ಪ್ರಮುಖ ಹೆದ್ದಾರಿಯ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದ್ದು, ಹೊಂಡ ಬಿದ್ದ ಹೆದ್ದಾರಿಯಲ್ಲಿ ಸಂಚರಿಸುವುದು ನಿತ್ಯ ಹರಸಾಹಸದ ಕೆಲಸವಾಗಿ ಪರಿಣಮಿಸಿದೆ.

ನಗರದ ಕೈಗಾರಿಕಾ ಪ್ರದೇಶವಾಗಿರುವ ಪಣಂಬೂರು, ಸುರತ್ಕಲ್‌ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು,ನಗರದ ಕೊಟ್ಟಾರ ಚೌಕಿಯಿಂದ ಸುರತ್ಕಲ್‌ವರೆಗಿನ ಹೆದ್ದಾರಿಯಲ್ಲಿ ಆಳೆತ್ತರ ಹೊಂಡಗಳು ಬಿದ್ದಿವೆ. ವಾಹನಗಳು ಸಾಲಾಗಿ ಚಲಿಸುವುದು ದುಸ್ತರವಾಗಿದೆ. ಅದರಲ್ಲೂ ಖಾಸಗಿ ಬಸ್‌ಗಳ ತರಾತುರಿಯಿಂದಾಗಿ ನಿತ್ಯ ಸಂಜೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಸಾಮಾನ್ಯ ಎನ್ನುವಂತಾಗಿದೆ.

ನವೆಂಬರ್‌ 2 ರಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸುರತ್ಕಲ್‌ನ ಎನ್‌ಐಟಿಕೆ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿದ್ದು, ಇದೇ ರಸ್ತೆಯ ಮೂಲಕ ಸಂಚರಿಸಲಿದ್ದಾರೆ. ಹೀಗಾಗಿ ಆ ಸಂದರ್ಭದಲ್ಲಾದರೂ ಹೆದ್ದಾರಿ ದುರಸ್ತಿ ಆದೀತು ಎನ್ನುವ ಆಶಾವಾದ ವಾಹನ ಸವಾರರದ್ದಾಗಿದೆ.

ಬೆಳಿಗ್ಗೆಯಿಂದಲೇ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಎಂಆರ್‌ಪಿಎಲ್‌, ಎನ್‌ಎಂಪಿಟಿ, ಎಂಸಿಎಫ್‌ ಹಾಗೂ ಬೈಕಂಪಾಡಿ ಸಣ್ಣ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಲಾರಿಗಳು, ಸರಕು ಸಾಗಣೆ ವಾಹನಗಳು, ಉಡುಪಿಗೆ ತೆರಳುವ ಖಾಸಗಿ, ಸರ್ಕಾರ ಬಸ್‌ಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಹೀಗಾಗಿ ಗುಂಡಿ ತಪ್ಪಿಸುವ ಭರದಲ್ಲಿ ಒಂದು ವಾಹನ ಅಡ್ಡ ನಿಂತರೆ, ಇಡಿ ಹೆದ್ದಾರಿಯಲ್ಲಿಯೇ ವಾಹನ ಸಂಚಾರ ಸ್ಥಗಿತವಾಗುತ್ತದೆ.

ಶಿಥಿಲ ಸೇತುವೆ ಮೇಲೇ ಸಂಚಾರ: ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೂಳೂರು ಹಳೆಯ ಸೇತುವೆ ಹಳೆಯದಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ವರದಿ ನೀಡಿದ್ದಾರೆ. ಆದರೂ, ಈ ಸೇತುವೆಯ ಮೇಲೆಯೇ ವಾಹನಗಳು ಇನ್ನೂ ಸಂಚರಿಸುತ್ತಿವೆ.

ಈ ಹಿಂದೆ ಸಸಿಕಾಂತ್‌ ಸೆಂಥಿಲ್‌ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಳೆಯ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿದ್ದರು. ನಂತರ ಮತ್ತೆ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿತ್ತು. ಒಂದೆಡೆ ಶಿಥಿಲ ಸೇತುವೆ, ಇನ್ನೊಂದೆಡೆ ಹದಗೆಟ್ಟ ಹೆದ್ದಾರಿಯಿಂದಾಗಿ ವಾಹನಗಳ ಚಾಲಕರು, ನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ವಾಹನ ಓಡಿಸುವಂತಾಗಿದೆ.

ಮಳೆ ನಿಂತ ಬಳಿಕ ದುರಸ್ತಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಡಾಂಬರ್‌ ರಸ್ತೆಗಳ ಗುಂಡಿ ಮುಚ್ಚುವ ಹಾಗೂ ತೇಪೆ ಹಾಕುವ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸತತವಾಗಿ ಬರುತ್ತಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಪ್ರತಿ ಮಳೆಗಾಲ ಮುಗಿದ ಬಳಿಕ ಉಂಟಾಗಿರುವ ಗುಂಡಿಯನ್ನು ಮುಚ್ಚಿ, ತೇಪೆ ಹಾಕುವ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಬಾರಿ ಅಕ್ಟೋಬರ್ ಅಂತ್ಯ ಸಮೀಪಿಸುತ್ತಿದ್ದರೂ, ದಿನ ಬಿಟ್ಟು ದಿನ ವಿಪರೀತ ಮಳೆ ಸುರಿಯುತ್ತಿದ್ದು, ಪ್ರತಿಕೂಲ ವಾತಾವರಣವಿರುವ ಹಿನ್ನೆಲೆಯಲ್ಲಿ ರಸ್ತೆಯ ಗುಂಡಿ ಮುಚ್ಚುವ ಹಾಗೂ ತೇಪೆ ಹಾಕುವ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಡಾಂಬರ್‌ ರಸ್ತೆ ಗುಂಡಿಯನ್ನು ಮುಚ್ಚಲು ನಿರಂತರವಾಗಿ ಕನಿಷ್ಠ 10 ದಿನ ಬಿಸಿಲಿನ ವಾತಾವರಣ ಅಗತ್ಯವಿದ್ದು, ಅಂತಹ ಸಂದರ್ಭದಲ್ಲಿ ಮಾತ್ರ ರಸ್ತೆ ಗುಂಡಿಯನ್ನು ಮುಚ್ಚಿ ತೇಪೆ ಮಾಡಿದಲ್ಲಿ ಅದು ದೃಢವಾಗಿ ನಿಲ್ಲುತ್ತದೆ. ಹಾಗಾಗಿ ಮಳೆ ನಿಂತ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT