ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದರೋಡೆ ಪ್ರಕರಣ: 8 ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ

Last Updated 1 ಏಪ್ರಿಲ್ 2022, 16:26 IST
ಅಕ್ಷರ ಗಾತ್ರ

ಮಂಗಳೂರು: ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಗೆ ಆರೋಪಿಗಳಿಗೆ ಇಲ್ಲಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಕಿಲಿಂಜಾರು ಗ್ರಾಮದ ಶಿವಪ್ರಸಾದ್ ಆಲಿಯಾಸ್ ಅಯ್ಯಪ್ಪ, ಸಂದೀಪ್ ಬಿ.ಪೂಜಾರಿ, ಕಾರ್ತಿಕ್ ಶೆಟ್ಟಿ, ತೆಂಕ ಎರ್ಮಾಳಿನ ವರುಣ್ ಕುಮಾರ್, ಹೆಜಮಾಡಿಯ ಸುವಿನ್ ಕಾಂಚನ್ ಆಲಿಯಾಸ್ ಮುನ್ನ, ಪಡುಪೆರಾರದ ಗೋಪಾಲ ಗೌಡ, ಕೊಡೆತ್ತೂರಿನ ಸುಜಿತ್ ಶೆಟ್ಟಿ, ಕಿಲೆಂಜಾರಿನ ಸುಧೀರ್ ಶಿಕ್ಷೆಗೊಳಗಾದ ಅಪರಾಧಿಗಳು.

ಆರೋಪಿಗಳು ಐಪಿಸಿ 395 ಹಾಗೂ 397 ಕಲಂನಡಿ ಎಸಗಿದ ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಶಿಕ್ಷೆ ಮತ್ತು ಕಲಂ 440ರಡಿ ಎಸಗಿದ ಅಪರಾಧಕ್ಕೆ 2 ವರ್ಷ ಸಾದಾ ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಿ.ಬಿ. ಜಕಾತಿ ಶುಕ್ರವಾರ ಆದೇಶಿಸಿದ್ದಾರೆ.

ಆರೋಪಿತರು ದಂಡದ ಹಣ ಪಾವತಿಸಿದರೆ ದೂರುದಾರ ಚಿದಾನಂದ ಶೆಟ್ಟಿ, ಸಾಕ್ಷಿದಾರರಾದ ಅಶ್ವಿತ್, ಭರತ್, ಶಿವಪ್ರಸಾದ್ ಶೆಟ್ಟಿ ಅವರಿಗೆ ತಲಾ ₹15 ಸಾವಿರ ಹಣ ಪಾವತಿಸುವಂತೆ ಹಾಗೂ ಹಾನಿಯಾದ ಕಾರಿನ ಮಾಲೀಕ ಶಿವಪ್ರಸಾದ್ ಶೆಟ್ಟಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.

ಪ್ರಕರಣದ ವಿವರ:ಇಲ್ಲಿನ ಅಶೋಕನಗರದ ಚಿದಾನಂದ ಶೆಟ್ಟಿ ಹಳೆಯ ಕಾರು ಖರೀದಿಸಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕಿಲೆಂಜಾರಿನ ಸುಧೀರ್ ಎಂಬಾತ ಚಿದಾನಂದ ಶೆಟ್ಟಿಗೆ ಕರೆ ಮಾಡಿ, ‘ಚಿಕ್ಕಪ್ಪನ ಹಳೆಯ ಕಾರು ಮಾರಾಟಕ್ಕಿದೆ. ಈ ಬಗ್ಗೆ ಮಾತನಾಡಲು ಸುರತ್ಕಲ್ ಬಳಿ ಬನ್ನಿ’ ಎಂದು ಕರೆದಿದ್ದ. ಅದರಂತೆ ಚಿದಾನಂದ ಶೆಟ್ಟಿ 2016ರ ಡಿ.23ರಂದು ಗೆಳೆಯ ಅಶ್ವಿತ್‌ರೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಸುಧೀರ್, ಸಂಜೆ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್‌ಗೆ ಬರುವಂತೆ ತಿಳಿಸಿದ್ದ.

ಅದನ್ನು ನಂಬಿ ಚಿದಾನಂದ ಶೆಟ್ಟಿ ಅವರು, ಅಶ್ವಿತ್ ಮತ್ತು ಭರತ್ ಅವರೊಂದಿಗೆ ಕಾರಿನಲ್ಲಿ ₹2 ಲಕ್ಷ ಹಣದೊಂದಿಗೆ ಕಾರ್ನಾಡಿಗೆ ತೆರಳಿದ್ದರು. ಬಳಿಕ ಸುಧೀರ್‌ನೊಂದಿಗೆ ತಾಳಿಪ್ಪಾಡಿ ಹೊಸಮನೆ ಎಂಬಲ್ಲಿನ ಗುಡ್ಡ ಪ್ರದೇಶಕ್ಕೆ ತೆರಳಿದರು. ಅಲ್ಲಿ ಸುಧೀರ್ ಕಾರಿನಿಂದ ಇಳಿದು ‘ಚಿಕ್ಕಪ್ಪನ ಮನೆ ಇಲ್ಲಿಯೇ ಇದೆ. ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಹೋಗಿದ್ದ. ಅಷ್ಟರಲ್ಲಿ ತಲವಾರು, ಕಬ್ಬಿಣದ ರಾಡ್, ಪಂಚ್‌ಗಳೊಂದಿಗೆ ಕಾರು, ಸ್ಕೂಟರ್ ಮತ್ತು ಬೈಕ್‌ನಲ್ಲಿ ಬಂದ ಆರೋಪಿಗಳು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ₹2 ಲಕ್ಷ ದರೋಡೆ ಮಾಡಿದ್ದರು. ಅಶ್ವಿತ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT