ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧೆ ತ್ಯಜಿಸಿ, ಸಹಕಾರವನ್ನು ಅ‌‌ಪ್ಪಿಕೊಳ್ಳಿ: ಸಸಿಕಾಂತ್ ಸೆಂಥಿಲ್‌

Published 3 ಸೆಪ್ಟೆಂಬರ್ 2024, 9:34 IST
Last Updated 3 ಸೆಪ್ಟೆಂಬರ್ 2024, 9:34 IST
ಅಕ್ಷರ ಗಾತ್ರ

ಮಂಗಳೂರು: ‘ನೂರಾರು ವರ್ಷಗಳಿಂದ ನಾವು ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುತ್ತಿದ್ದೇವೆ. ನಮಗೆ ಬೇಕಿರುವುದು ಸ್ಪರ್ಧೆಯಲ್ಲ; ಪರಸ್ಪರ ಸಹಕಾರ’ ಎಂದು ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.

ಸಂತ ಮದರ್ ತೆರೆಸಾ ಸಂಸ್ಮರಣಾ ದಿನದ ಅಂಗವಾಗಿ ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಸಾಮರಸ್ಯ ಮಂಗಳೂರು ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬುಡಕಟ್ಟು ಜನರ ಸಂಸ್ಕೃತಿಯಲ್ಲಿ ನಾವು ಸ್ಪರ್ಧೆಯ ಬದಲು ಸಹಕಾರವನ್ನು ಕಾಣುತ್ತೇವೆ. ಸ್ಪರ್ಧಾ ಮನೋಭಾವ ತ್ಯಜಿಸಿ ಸಹಕಾರವನ್ನು ಅಪ್ಪಿಕೊಳ್ಳುವುದು, ಪ್ರೀತಿಯನ್ನು ಬೆಳೆಸುವುದು ಆದ್ಯತೆಯಾಗಬೇಕು. ಮಕ್ಕಳಿಗೆ ಒಳ್ಳೆಯ ಸಮಾಜ ರೂಪಿಸದೇ ಹೋದರೆ ನಮ್ಮ ಬದುಕಿಗೆ ಏನು ಅರ್ಥವಿದೆ. ಜಗತ್ತನ್ನು ಹಬ್ಬದ ರೀತಿ ಸಂಭ್ರಮಿಸು ಸಮಾಜವನ್ನು ಕಟ್ಟಿದರೆ ಅದೇ ಮದರ್ ತೆರೆಸಾಗೆ ಸಲ್ಲಿಸುವ ದೊಡ್ಡ ಗೌರವ. ಎಲ್ಲ ಜಂಜಡಗಳ ನಡುವೆಯೂ ಸಂತೋಷವಾಗಿರುವುದನ್ನು ಕಲಿಯಬೇಕು’ ಎಂದರು.

‘ಒಬ್ಬರನ್ನೊಬ್ಬರು ದ್ವೇಷ ಮಾಡುವವರ, ಆಕ್ರಮಣಶೀಲರ ಕೈಗೆ ದೇಶವನ್ನು ಕೊಟ್ಟಿದ್ದೇವೆ. ಎಲ್ಲರೂ ಸಂತೋಷದಿಂದ ಕೂಡಿ ಬಾಳಬಹುದು ಎಂಬುದನ್ನು ನಂಬುವವರ ಸಂಖ್ಯೆಯೇ ದೇಶದಲ್ಲಿ ಜಾಸ್ತಿ ಇದೆ. ಪರಸ್ಪರ ನಂಬಿಕೆ ಇಲ್ಲದವರು, ದ್ವೇಷಿಸುವವರು ಇಲ್ಲಿ ಅಲ್ಪಸಂಖ್ಯಾತರು. ಭಾರತೀಯ ಚಿಂತನೆ ಇರುವುದು ಪರಸ್ಪರ ನಂಬುಗೆಯಲ್ಲಿ. ದೇಶದ ವಿಭಿನ್ನತೆಯಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟವರೆಲ್ಲ ನಮ್ಮ ಕಡೆ. ನಾವೆಲ್ಲ ಒಟ್ಟು ಸೇರಿ ದೊಡ್ಡ ಧ್ವನಿಯಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ವಿಭಿನ್ನತೆಯನ್ನು ಆಚರಿಸುವ ಮನಸ್ಥಿತಿ ಇಲ್ಲಿನ ಜನರಲ್ಲಿ ಅಂತರ್ಗತವಾಗಿದೆ. ಅವರಿಗೆ ಅದನ್ನು ಮತ್ತೆ ಮನವರಿಕೆ ಮಾಡಿಕೊಡಬೇಕು. ಮಂಗಳೂರನ್ನು ಮತ್ತೆ ಪ್ರಗತಿಯ ಹಾದಿಗೆ ತರಲು, ಪ್ರೀತಿ–ವಿಶ್ವಾಸದ ಸಮಾಜವನ್ನು ಮರಳಿ ಕಟ್ಟಬೇಕು. ಇಂದಿನ ಮಕ್ಕಳೂ ಮುಂದೆ ಮುಖ್ಯವಾಹಿನಿಯ ರಾಜಕೀಯಕ್ಕೆ ಬರಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ‘ತ್ರಿವರ್ಣ ಧ್ವಜವನ್ನೇ ಅಶುಭ ಎಂದು ಹೇಳಿದ‌ವರು, ಸಂವಿಧಾನದಡಿ ಪ್ರಮಾಣ ಸ್ವೀಕರಿಸಿ ಈಗ ಸಂವಿಧಾನವನ್ನೇ ಬದಲಾಯಿಸಿ ಎನ್ನುತ್ತಿದ್ದಾರೆ. ಅಸ್ಪೃಶ್ಯತೆಯಂತಹ ಪದ್ಧತಿ ಮುಂದುವರಿಯಬೇಕು ಎಂದು ಬಯಸುವವರು ಹಿಂದುತ್ವದ ಸೋಗಿನಲ್ಲಿ‌ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಯಾರು ಏನನ್ನು ತಿನ್ನ ಬೇಕು, ಯಾವ ಬಟ್ಟೆ ಧರಿಸಬೇಕು ಎಂದು ನಿರ್ಧರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ದೇಶಕ್ಕೊಂದೇ ಚುನಾವಣೆ, ದೇಶಕ್ಕೊಬ್ಬನೇ ನಾಯಕ ಎನ್ನುತ್ತಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅವರು ದೇಶವನ್ನು ಮತ್ತೆ 500 ವರ್ಷ ಹಿಂದಕ್ಕೆ ಒಯ್ಯುತ್ತಾರೆ’ ಎಂದರು.

‘ಸಾಮಾಜಿಕ ಚಿಂತಕಿ, ಆಯೆಷಾ ಫರ್ಜಾನ‌ ಯು.ಟಿ., ‘ಕರುಣೆ ಪ್ರೀತಿ ಭ್ರಾತೃತ್ವ ಅಚರಣೆಯನ್ನೇ ಬದುಕಿನ ಮಂತ್ರವನ್ನಾಗಿಸಿದ ಮನುಕುಲದ ಅತ್ಯಂತ ದೊಡ್ಡ ದೀವಿಗೆ ಮದರ್‌ ತೆರೆಸಾ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂತ ಮದರ್ ತೆರೆಸಾ ವೇದಿಕೆ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೊ ‘ಸಾಮರಸ್ಯಕ್ಕೆ ಹುಳಿ ಹಿಂಡುವ ಪ್ರಯತ್ನಗಳು ಎಷ್ಟೇ ನಡೆದರೂ ಅದನ್ನು ಮೆಟ್ಟಿ ನಿಂತು ಪ್ರೀತಿ ಸೌಹಾರ್ದದ ನಾಡನ್ನು ಕಟ್ಟುತ್ತೇವೆ’ ಎಂದರು.

‘ಸಾಮರಸ್ಯ’ ಮಂಗಳೂರು ಸಂಘಟನೆಯನ್ನು ಕೆಲ ವರ್ಷಗಳ ಹಿಂದೆ ಉದ್ಘಾಟಿಸಿದ್ದ ಸಸಿಕಾಂತ್‌ ಸೆಂಥಿಲ್ ಅವರನ್ನು ಸಂಘಟನೆಯ ವತಿಯಿಂದ ಅಭಿನಂದಿಸಲಾಯಿತು. ‘ಸಾಮರಸ್ಯ ಮಂಗಳೂರು’ ಸಂಘಟನೆಯ ಮಂಜುಳಾ ನಾಯಕ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್ ಮತ್ತಿತರರು ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಡಾಲ್ಫಿ ಡಿಸೋಜ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT