ಶನಿವಾರ, ಅಕ್ಟೋಬರ್ 31, 2020
20 °C
ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಧರಣಿ

ಮಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಜನಪರ ಹಾಗೂ ಸಮಾನ ಮನಸ್ಕ ಸಂಘಟನೆಗಳು, ರಾಜಕೀಯ ಪ್ರತಿನಿಧಿಗಳ ನೇತೃತ್ವದ ‘ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ಯ ವತಿಯಿಂದ ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆಯ ಶಾಸಕರ ಕಚೇರಿ ಎದುರು ಸೋಮವಾರ ಧರಣಿ ನಡೆಯಿತು.

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ‘ಖಾಸಗಿ ಎಂಟು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಒಂದು ಸರ್ಕಾರಿ ಕಾಲೇಜು ಸ್ಥಾಪನೆ ಮಾಡದಿರುವುದು, ರಾಜಕಾರಣ ಹಾಗೂ ಜನಸಾಮಾನ್ಯರ ಪ್ರಜ್ಞೆಯ ಸೋಲು’ ಎಂದರು.

‘ಸರ್ಕಾರ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ನೀಡಬೇಕಾದ ಸಮಯದಲ್ಲಿ ಕೋವಿಡ್ ನೆಪ ನೀಡಿ, ಜನವಿರೋಧಿ ನೀತಿ ಜಾರಿಗೊಳಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ವ್ಯಾಪಾರೀಕರಣದಿಂದ ಜನರು ಪರದಾಡುವಂತಾಗಿದೆ. ಈ ಹೋರಾಟವನ್ನು ಹೋಬಳಿ, ಗ್ರಾಮ ಮಟ್ಟದಲ್ಲಿಯೂ ಆಂದೋಲನ ರೀತಿಯಲ್ಲಿ ನಡೆಸಲಾಗುವುದು. ಸಾಮೂಹಿಕ ನಾಯಕತ್ವದಲ್ಲಿ ಈ ಹೋರಾಟ ನಡೆಯಲಿದೆ’ ಎಂದು ಹೇಳಿದರು.

ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿ, ‘ಶಾಸಕರು, ಜನಪ್ರತಿನಿಧಿಗಳಿಗೆ ಕೋವಿಡ್ ಸೇರಿದಂತೆ ಯಾವುದೇ ರೋಗಕ್ಕೂ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಆದರೆ, ಜನಸಾಮಾನ್ಯರಿಗೆ ಈ ವ್ಯವಸ್ಥೆ ಯಾಕಿಲ್ಲ’ ಎಂದು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಮುಖಂಡ ದೇವದಾಸ್ ಮಾತನಾಡಿ, ‘ಈಗಿನ ರಾಜಕಾರಣಿಗಳಿಗೆ ದೇಶದ ಬಗ್ಗೆ ಕನಿಷ್ಠ ಬ್ರಿಟಿಷರಷ್ಟೂ ಕಾಳಜಿ ಇಲ್ಲದಿರುವುದು ದುರದೃಷ್ಟಕರ. ಕೋವಿಡ್‌ ಸಂದರ್ಭದಲ್ಲಿ ಬಡವರ ಆರೋಗ್ಯ ಬೀದಿ ಪಾಲಾಗಿದೆ’ ಎಂದು ದೂರಿದರು. 

ಧರಣಿಯಲ್ಲಿ ವಿ. ಕುಕ್ಯಾನ್, ಜೆ. ಬಾಲಕೃಷ್ಣ ಶೆಟ್ಟಿ, ಶೋಭಾ ಕೇಶವ, ತಿಮ್ಮಪ್ಪ ಕೊಂಚಾಡಿ, ವಸಂತ ಆಚಾರಿ, ಸುನೀಲ್ ಕುಮಾರ್ ಬಜಾಲ್, ಶಶಿಕಲಾ ಯೆಯ್ಯಾಡಿ, ಯಶವಂತ ಮರೋಳಿ, ಮೈಕಲ್ ಡಿಸೋಜ, ದಿನೇಶ್ ಕುಂಪಲ, ವೆಂಕಟೇಶ್, ಯೋಗಿತಾ, ಸುರೇಶ್ ಶೆಟ್ಟಿ, ಫಾರೂಕ್ ಉಳ್ಳಾಲ್, ಮುಹಮ್ಮದ್, ಸೀತಾರಾಮ ಬೇರಿಂಜ, ಕರುಣಾಕರ, ವಾಸುದೇವ ಉಚ್ಚಿಲ್, ದಯಾನಂದ ಶೆಟ್ಟಿ, ಅಲಿ ಹಸನ್, ಪ್ರಭಾಕರ ರಾವ್, ಪ್ರಮೀಳಾ ದೇವಾಡಿಗ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು