ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ರೀನ್ ಸಮಯ: ಮಕ್ಕಳಿಗೆ ಅಪಾಯ

ಅತಿಯಾದ ಗ್ಯಾಜೆಟ್‌ ಬಳಕೆ, ದೈಹಿಕ ವ್ಯಾಯಾಮ ಇಲ್ಲದೆ ದೇಹಕ್ಕೆ ಬೊಜ್ಜು
Last Updated 27 ಜುಲೈ 2021, 3:39 IST
ಅಕ್ಷರ ಗಾತ್ರ

ಮಂಗಳೂರು: ಶಾಲೆಗಳು ಕೇವಲ ಅಕ್ಷರ ಜ್ಞಾನದ ತಾಣಗಳಲ್ಲ, ಮಕ್ಕಳು ಅಲ್ಲಿ ಹೊಂದಾಣಿಕೆ, ಹಿರಿಯರ ಜತೆ ಸಂವಹನ, ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ಗುಣವನ್ನು ಸಹಜ ಜೀವನ ಕ್ರಮದಲ್ಲಿ ಕಲಿಯುತ್ತಾರೆ. ಒಂದು ವರ್ಷದಿಂದ ಗೋಡೆಗಳ ನಡುವೆ ಬಂದಿಯಾಗಿ ಆನ್‌ಲೈನ್ ಕ್ಲಾಸ್ ಕೇಳುತ್ತಿರುವ ಮಕ್ಕಳು ಇವೆಲ್ಲವುಗಳಿಂದ ವಂಚಿತರಾಗಿದ್ದಾರೆ.

ಇದರ ಪರಿಣಾಮವಾಗಿ ಮಕ್ಕಳು ಮಾದಕವಸ್ತು ಸೇವನೆಯಷ್ಟೇ ಅಪಾಯಕಾರಿ ರೀತಿಯಲ್ಲಿ ಇಂಟರ್‌ನೆಟ್ ಚಟಕ್ಕೆ ಒಳಗಾಗಿದ್ದಾರೆ. ಹದಿಹರೆಯದ ಮಕ್ಕಳು ಆನ್‌ಲೈನ್ ಗೇಮ್, ವಯಸ್ಕರ ಚಿತ್ರ ವೀಕ್ಷಣೆಯ ದುರಭ್ಯಾಸಕ್ಕೆ ಅಂಟಿಕೊಂಡಿದ್ದಾರೆ. ಇದಕ್ಕೆ ಪರಿಹಾರ ಕೇಳಿ ಪಾಲಕರಿಂದ ಬರುವ ಕರೆಗಳು ಇತ್ತೀಚಿಗೆ ಹೆಚ್ಚಾಗಿವೆ ಎನ್ನುತ್ತಾರೆ ಮನೋವೈದ್ಯರು.

ಹಳಿ ತಪ್ಪಿರುವ ಶಿಕ್ಷಣ ವ್ಯವಸ್ಥೆ, ಆನ್‌ಲೈನ್ ಕ್ಲಾಸ್‌ಗಳು ಬಡವರು– ಉಳ್ಳವರ ನಡುವಿನ ಕಂದಕವನ್ನು ಹಿಗ್ಗಿಸಿದೆ. ಇಷ್ಟು ವರ್ಷಗಳಲ್ಲಿ ಶೈಕ್ಷಣಿಕವಾಗಿ ಸಾಧಿಸಿದ್ದನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆರ್ಥಿಕ ಮುಗ್ಗಟ್ಟು ಇರುವ ಕೂಲಿ ಕಾರ್ಮಿಕ ಕುಟುಂಬಗಳ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರುವ ಸವಾಲು ಸಮಾಜದ ಮುಂದಿದೆ. ಕಂಪ್ಯೂಟರ್, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಉಳ್ಳವರ ಮೇಲೆ ಒಂದು ರೀತಿಯ ಪರಿಣಾಮ ಬೀರಿದರೆ, ಅದರಿಂದ ವಂಚಿತರಾದ ಬಡ ಮಕ್ಕಳ ಮೇಲೆ ಇನ್ನೊಂದು ರೀತಿ ಪರಿಣಾಮ ಉಂಟುಮಾಡಿದೆ ಎಂಬುದು ಮನೋವೈದ್ಯರ ವಿಶ್ಲೇಷಣೆ.

‘ಶಾಲೆಯ ಚಟುವಟಿಕೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆ ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ ಸಂಗತಿಗಳ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಆನ್‌ಲೈನ್‌ ಕ್ಲಾಸ್‌ ಕಾರಣಕ್ಕೆ ಮಕ್ಕಳು ಮನೆಯಲ್ಲೇ ಇರುವುದರಿಂದ ಪಾಲಕರ ವೃತ್ತಿ ಗೊಂದಲ, ಅನಿಶ್ಚಿತತೆ, ಆತಂಕಗಳ ನೆರಳು ಮಗುವಿನ ಮೇಲೆ ಬೀರುತ್ತದೆ. ಒತ್ತಡ ನಿಭಾಯಿಸಲು ಸಾಧ್ಯವಾಗದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ’ ಎನ್ನುತ್ತಾರೆ ಫಾದರ್ ಮುಲ್ಲರ್ ಆಸ್ಪತ್ರೆಯ ಮನೋವೈದ್ಯೆ ಡಾ. ಅರುಣಾ ಯಡಿಯಾಳ್.

‘ಮಕ್ಕಳ ಬೆಳವಣಿಗೆಯಲ್ಲಿ ದೈಹಿಕ ಚಟುವಟಿಕೆ ಅತಿ ಮಹತ್ವದ್ದು. ಕ್ರೀಡೆ ಜತೆಗೆ ಆಟದ ತರಗತಿಗಳು, ದೈಹಿಕ ಶಿಕ್ಷಣ ಕ್ಲಾಸ್‌ಗಳು ಮಕ್ಕಳ ಮನೋವಿಕಾಸಕ್ಕೆ ಅಗತ್ಯ. ಕ್ರೀಡಾ ಸ್ಪರ್ಧೆಗಳು ಕೂಡಿ ಬಾಳುವ ಪಾಠ ಕಲಿಸುತ್ತವೆ. ಶಾಲೆ ಇಲ್ಲದ ಪರಿಣಾಮ ಮಕ್ಕಳು, ಈ ಎಲ್ಲ ಸಮಯವನ್ನು ಗ್ಯಾಜೆಟ್‌ನಲ್ಲಿ ಕಳೆಯುತ್ತಿದ್ದಾರೆ. ಮಕ್ಕಳ ಜೀವನ ಶೈಲಿ ಹಳಿತಪ್ಪಿದೆ. ಕುರುಕಲು ತಿಂಡಿ ಮೆಲ್ಲುತ್ತಾ ಸ್ಕ್ರೀನ್‌ ಜತೆ ಹೆಚ್ಚು ವೇಳೆ ಕಳೆಯುವುದರಿಂದ, ತಿನ್ನುವ ಪ್ರಮಾಣ ಕೂಡ ಅರಿವಿಲ್ಲದೆ ಹೆಚ್ಚಾಗುತ್ತದೆ. ಇದರಿಂದ ದೇಹದ ಬೊಜ್ಜು ಹೆಚ್ಚುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಡಾ. ಅರುಣಾ ಸೂಚಿಸಿರುವ ಪರಿಹಾರ
*
ಇವೆಲ್ಲ ಔಷಧ ಕೊಟ್ಟು ಪರಿಹರಿಸುವ ಸಮಸ್ಯೆಗಳಲ್ಲ. ಜೀವನ ಶೈಲಿ ಬದಲಾವಣೆಯಿಂದ ಮಕ್ಕಳಲ್ಲಿ ಪರಿವರ್ತನೆ ತರಬೇಕು.
*ಶಾಲೆಯಂತೆ ವೇಳಾಪಟ್ಟಿ ನಿಗದಿಗೊಳಿಸಿ, ಮಕ್ಕಳು ಕಡ್ಡಾಯವಾಗಿ ಪಾಲಿಸುವಂತೆ ತಿಳಿ ಹೇಳಬೇಕು. ಇದರಲ್ಲಿ ಪಾಲಕರ ಪಾತ್ರ ಮಹತ್ವದ್ದು.
*ಮಕ್ಕಳು ಎಷ್ಟು ತಾಸು ಮೊಬೈಲ್ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿಯಲು ಆ್ಯಪ್‌ಗಳಿವೆ. ಇದರ ಮೂಲಕ ಮಕ್ಕಳ ಮೇಲೆ ನಿಗಾ ಇಡಬಹುದು.
*ಅನುಮತಿ ಪಡೆದೇ, ಕೆಲವು ಸೈಟ್‌ಗಳನ್ನು ಪ್ರವೇಶಿಸುವ ಸಾಫ್ಟ್‌ವೇರ್‌ಗಳನ್ನು ಪಾಲಕರು ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡು, ಮಕ್ಕಳ ಚಟುವಟಿಕೆ ನಿಯಂತ್ರಿಸಬಹುದು. ಮಕ್ಕಳ ಖಾಸಗಿತನಕ್ಕೆ ಧಕ್ಕೆ ಬರದಂತೆ ಈ ಕಾರ್ಯ ಮಾಡಬೇಕು.
*ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮಲಗಲು ಅರ್ಧಗಂಟೆ ಮೊದಲು ಮುಚ್ಚಿಡುವ ಪರಿಪಾಟ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಮೊಬೈಲ್‌ನ ನೀಲಿ ಬೆಳಕು ಸುಖನಿದ್ರೆಗೆ ಅಡ್ಡಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT