ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯಾ ಹತ್ಯೆ ಪ್ರಕರಣದ ಮರುತನಿಖೆಗೆ ಬಿಜೆಪಿ ಒತ್ತಾಯ, 27ರಂದು ಪ್ರತಿಭಟನೆ

Published 12 ಆಗಸ್ಟ್ 2023, 10:45 IST
Last Updated 12 ಆಗಸ್ಟ್ 2023, 10:45 IST
ಅಕ್ಷರ ಗಾತ್ರ

ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕಗಳ ಮುಖಂಡರು ಮತ್ತು ಶಾಸಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ಸಭೆ ನಡೆಸಿದ್ದು, ಇದೇ 27 ರಂದು ಪಕ್ಷದ ವತಿಯಿಂದ ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಬಳಿ ಭಾರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಳಿನ್ ಕುಮಾರ್ ಕಟೀಲ್, ‘ಈ ಪ್ರಕರಣದ ಮರು ತನಿಖೆ ಆಗಬೇಕು. ಈ ಕುರಿತಾದ ಸಂಶಯಗಳು ನಿವಾರಣೆ ಆಗಬೇಕು. ಈ ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿರಲಿ, ಹಂತಕರನ್ನು ಬಂಧಿಸಿ, ಅವರಿಗೆ ಕಠೋರ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ’ ಎಂದರು

‘2012ರ ಅ. 9ರಂದು ಸೌಜನ್ಯಾ ಕಾಣೆಯಾಗಿದ್ದು, ಮರುದಿನ ಆಕೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಪೊಲೀಸರು, ನಂತರ ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ತಪ್ಪಿತಸ್ಥ ಅಲ್ಲ ಎಂದು ಸಿಬಿಐ ನ್ಯಾಯಾಲಯದ ತೀರ್ಪಿ ನಲ್ಲಿ ಹೇಳಿದೆ. ಸಿಬಿಐ ತನಿಖೆಯಿಂದಲೂ ಪ್ರಕರಣದ ಆರೋಪಿಗಳು ಯಾರು ಎಂದು ಸ್ಪಷ್ಟ ಆಗಿಲ್ಲ’ ಎಂದರು.

‘ಪ್ರಕರಣದ ಮರು ತನಿಖೆ ಆಗಬೇಕು ಎಂಬುದು ಸೌಜನ್ಯಾ ಕುಟುಂಬ ಆಗ್ರಹಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ನಿಲುವು ಕೂಡಾ. ಈ ಉದ್ದೇಶದಿಂದ ಇದೇ 27ರಂದು (ಆದಿತ್ಯವಾರ) ಬೆಳ್ತಂಗಡಿಯಲ್ಲಿ ಪಕ್ಷದ ವತಿಯಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ’ ಎಂದರು.

‘ಸೌಜನ್ಯಾ ಕುಟುಂಬಕ್ಕೆ ಅನ್ಯಾಯ ಆಗಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ಕಾರಣಕ್ಕೆ ನಾವು ಹೋರಾಟ ನಡೆಸಲಿದ್ದೇವೆ. ಈ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೂ ಪಕ್ಷದ ಶಾಸಕರನ್ನು ಒಳಗೊಂಡ ನಿಯೋಗವು ಮನವಿ ಸಲ್ಲಿಸಲಿದೆ’ ಎಂದರು.

‘ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜ ಹಾಗೂ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನ್ಯಾಯಕ್‌ ಅವರು ಸಿಬಿಐ ನ್ಯಾಯಾಲಯದ ತೀರ್ಪು ಬಂದ ತಕ್ಷಣವೇ ಈ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ, ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ’ ಎಂದರು.

ಪತ್ರಕರ್ತರು ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಿದ್ದಂತೆಯೇ, ನಳಿನ್‌, ‘ಈ ಪ್ರಕರಣದ ಕುರಿತು ಬೇರೆ ಬೇರೆ ಸಂಘಟನೆಗಳು ಹೋರಾಟ ಮಾಡುತ್ತಿರಬಹುದು. ಆದರೆ, ಬಿಜೆಪಿ ನಿಲುವು ಸ್ಪಷ್ಟ. ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಪಕ್ಷದ ನಿಲುವು’ ಎಂದು ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ದ‌ಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಶಾಸಕರಾದ ರಾಜೇಶ್ ನಾಯ್ಕ್‌ ಉಳಿಪಾಡಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್, ಪಕ್ಷದ ಮುಖಂಡ ಗಣೇಶ್ ಕಾರ್ಣಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT