ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಉಲ್ಲಂಘಿಸಿ ಪ್ರತಿಭಟನೆ: ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳ ಎಚ್ಚರಿಕೆ

ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ನಿಯಮ ಬಾಹಿರ
Last Updated 7 ಮೇ 2020, 5:34 IST
ಅಕ್ಷರ ಗಾತ್ರ

ಮಂಗಳೂರು: ನೂತನ ಮಾರುಕಟ್ಟೆ ನಿರ್ಮಾಣಕ್ಕಾಗಿ ಕೇಂದ್ರ ಮಾರುಕಟ್ಟೆಯಲ್ಲಿರುವ ಚಿಲ್ಲರೆ ವ್ಯಾಪಾರಿಗಳಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಲು ಬೀದಿಬದಿ ವ್ಯಾಪಾರ ವಲಯವನ್ನು ಬಳಕೆ ಮಾಡಿರುವುದು ಬೀದಿಬದಿ ವ್ಯಾಪಾರಿಗಳಿಗೆ ಮಾಡಿದ ಅನ್ಯಾಯ ಎಂದು ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಲಾಕ್‌ಡೌನ್‌ ಜಾರಿಯಲ್ಲಿರುವಾಗ ಜನರು ಯಾವುದೇ ಪ್ರತಿರೋಧ ತೋರಲು ಸಾಧ್ಯವಿಲ್ಲ ಎಂದು ಜಿಲ್ಲೆ ಮತ್ತು ನಗರಾಡಳಿತ ಕಾನೂನು ಬಾಹಿರ ತೀರ್ಮಾನಗಳನ್ನು ಜಾರಿ ಮಾಡುತ್ತಿವೆ. ಲೇಡಿಗೋಷನ್ ಆಸ್ಪತ್ರೆ ಬಳಿ ಬಡ ಬೀದಿಬದಿ ವ್ಯಾಪಾರಿಗಳು 2 ಅಡಿ ಜಾಗದಲ್ಲಿ ವ್ಯಾಪಾರ ಮಾಡುವಾಗ, ಸಂಚಾರಕ್ಕೆ ಮತ್ತು ಆಸ್ಪತ್ರೆಗೆ ತೊಂದರೆ ಆಗುತ್ತದೆ ಎಂದು ಪದೇ ಪದೇ ದಾಳಿ ಮಾಡುತ್ತಿದ್ದ ಪಾಲಿಕೆ ಅಧಿಕಾರಿಗಳು, ಇದೀಗ 10 ಅಡಿ ಉದ್ದ ರಸ್ತೆಯ ಮೇಲೆ ತಾತ್ಕಾಲಿಕ ಮಳಿಗೆಯನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದಾರೆ. ಆಸ್ಪತ್ರೆಯ ಗೋಡೆಗೆ ತಾಗಿಕೊಂಡು ಶೀಟ್‌ಗಳನ್ನು ಅಳವಡಿಸುತ್ತಿದ್ದಾರೆ ಎಂದು ದೂರಿದೆ.

ನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಇದ್ದರೂ, ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬೀದಿ ಬದಿ ವ್ಯಾಪಾರ ವಲಯನ್ನು ಇತರ ಉದ್ದೇಶಕ್ಕೆ ಬಳಸಿರುವುದು ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.

ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳ ಮೇಲೆ ಕಠೋರವಾಗಿ ವರ್ತಿಸುವುದನ್ನು ನಿಲ್ಲಿಸಬೇಕು. ಸಾಧ್ಯವಾಗದಿದ್ದರೆ ಸಾಮೂಹಿಕವಾಗಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕುಟುಂಬಸಮೇತ ಸಾಮೂಹಿಕವಾಗಿ ಪ್ರತಿಭಟನೆ ನಡೆಸಲಾಗುವುದು. ಸಾಮೂಹಿಕ ಕ್ವಾರಂಟೈನ್‌ಗೆ ಒಳಗಾಗುವಂಥ ತೀವ್ರ ರೀತಿಯ ಹೋರಾಟ ಹಮ್ಮಿಕೊಳ್ಳಬೇಕಾದೀತು ಎಂದು ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT