ಗುರುವಾರ , ಆಗಸ್ಟ್ 5, 2021
21 °C
ತೆರೆದ ಹಾಲಿನ ಮಳಿಗೆಗಳು: ರಸ್ತೆಗಿಳಿಯದ ವಾಹನ

ಕಟ್ಟುನಿಟ್ಟಿನ ಭಾನುವಾರದ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್‌ಡೌನ್ ವಿಧಿಸಲಾಗಿದೆ. ಈ ಲಾಕ್‌ಡೌನ್‌ ಮಧ್ಯೆ ಭಾನುವಾರದ ಸಂಪೂರ್ಣ ಲಾಕ್‌ಡೌನ್‌ ಮತ್ತಷ್ಟು ಕಟ್ಟುನಿಟ್ಟಾಗಿತ್ತು. ಜನರೇ ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಉಳಿದಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ನಗರವು ಬಹುತೇಕ ಸ್ತಬ್ಧವಾಗಿತ್ತು.

ಹಾಲು, ವೈದ್ಯಕೀಯ ಸೇವೆ, ತುರ್ತು ಸೇವಾ ಕೇಂದ್ರಗಳಿಗಷ್ಟೇ ವಿನಾಯತಿ ನೀಡಲಾಗಿತ್ತು. ಉಳಿದ ಎಲ್ಲ ಅಂಗಡಿಗಳು ಬಂದ್ ಆಗಿದ್ದು, ಮಾರುಕಟ್ಟೆ ಪ್ರದೇಶಗಲ್ಲಿ ಜನರು, ವ್ಯಾಪಾರಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಎಲ್ಲೆಡೆ ನಂದಿನಿ ಪಾರ್ಲರ್‌ಗಳು ತೆರೆದಿದ್ದು, ಕೆಲ ಗ್ರಾಹಕರು ಹಾಲು, ಹಾಲಿನ ಉತ್ಪನ್ನ ಖರೀದಿ ಮಾಡಿದರು.

ಒಂದು ವಾರದ ಲಾಕ್‌ಡೌನ್‌ ಇದ್ದರೂ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಭಾನುವಾರ ಇದಕ್ಕೆ ಅನುಮತಿ ಇರಲಿಲ್ಲ. ಬೆಳಿಗ್ಗೆ 11 ಗಂಟೆಯವರೆಗೆ ಹಾಲು ಖರೀದಿಗೆ ಅವಕಾಶ ನೀಡಲಾಗಿತ್ತು.

ಮಂಗಳೂರು ನಗರ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದ್ದು, ನಗರದ ಹಲವೆಡೆ ನಾಕಾಬಂದಿ ಮಾಡಲಾಗಿತ್ತು. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿ, ವಾಪಸ್‌ ಕಳುಹಿಸಿದರು. ಭಾನುವಾರದ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಪೊಲೀಸ್‌ ಇಲಾಖೆಯಿಂದ ವಿವಿಧ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನಗರದ ಹಂಪನಕಟ್ಟೆ, ಎಂ.ಜಿ. ರಸ್ತೆ, ಪಿವಿಎಸ್‌ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಎಲ್ಲ ರಸ್ತೆಗಳು ಬಹುತೇಕ ಖಾಲಿಯಾಗಿದ್ದವು. ಕೆಲವೇ ಕೆಲವು ವಾಹನಗಳು ಅಲ್ಲಲ್ಲಿ ಓಡಾಡುತ್ತಿರುವುದು ಕಂಡು ಬಂತು. ಮಧ್ಯಾಹ್ನದ ನಂತರವಂತೂ ನಗರ ಸಂಪೂರ್ಣವಾಗಿ ಬಂದ್‌ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.