ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿತ ತಹಸೀಲ್ದಾರ್‌ಗೆ ಜಾಮೀನು ನಿರಾಕರಣೆ

Last Updated 12 ಅಕ್ಟೋಬರ್ 2022, 15:19 IST
ಅಕ್ಷರ ಗಾತ್ರ

ಮಂಗಳೂರು: ಲಂಚ ಪಡೆದ ಆರೋಪದ ಮೇಲೆ ಬಂಧಿತರಾಗಿರುವ ತಹಶೀಲ್ದಾರ್‌ ಪುರಂದರ ಹೆಗ್ಡೆ ಹಾಗೂ ತಹಸೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟ್ಯಾಕರ್‌ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ತಿರಸ್ಕರಿಸಿದೆ.

ನಗರದ ಕಾವೂರು ನಿವಾಸಿಯೊಬ್ಬರು ಜಾಗ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ (ಎನ್.ಓ.ಸಿ) ನೀಡುವಂತೆ ತಹಸೀಲ್ದಾರ್‌ಗೆ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.

‘ಕೆಲಸ ಮಾಡಿಕೊಡಬೇಕಾದರೆ ತನಗೆ ಹಾಗೂ ತಹಸೀಲ್ದಾರ್‌ಗೆ ಲಂಚ ಕೊಡಬೇಕು’ ಎಂದು ಆರೋಪಿ ಶಿವಾನಂದ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಜಾಗ ಮಾರಾಟಕ್ಕೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರ ನೀಡಲು ₹ 4700 ಲಂಚ ಪಡೆದ ಆರೋಪದ ಮೇರೆಗೆ ಶಿವಾನಂದ ನಾಟ್ಯಾಕರ್‌ನನ್ನು ಲೋಕಾಯುಕ್ತ ಪೊಲೀಸರು ಸೆ.30ರಂದು ಬಂಧಿಸಿದ್ದರು. ಲಂಚದಲ್ಲಿ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರಿಗೂ ಪಾಲು ಇತ್ತು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳಿದ್ದ ಕಾರಣ, ಅವರನ್ನೂ ಬಂಧಿಸಿದ್ದರು.

ಲೋಕಾಯುಕ್ತ ಸಂಸ್ಥೆ ಪರವಾಗಿ ವಾದಿಸಿದ್ದ ವಕೀಲ ರವೀಂದ್ರ ಮುನ್ನಿಪ್ಪಾಡಿ ಅವರು ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಬುಧವಾರ ಆದೇಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT