ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಜಾನುವಾರು ಸಾಗಣೆ: ಇತ್ತಂಡದ ನಡುವೆ ಘರ್ಷಣೆ ಬಜರಂಗದಳ, ಪಿಎಫ್‌ಐ ಮುಖಂಡರ ವಶ

Last Updated 26 ಜನವರಿ 2019, 14:57 IST
ಅಕ್ಷರ ಗಾತ್ರ

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಶನಿವಾರ ಅಕ್ರಮ ಜಾನುವಾರು ಸಾಗಾಣೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ಪರಿಶೀಲನೆಗೆ ಹೋದ ಸಮಯದಲ್ಲಿ ಇತ್ತಂಡದವರು ಜಮಾಯಿಸಿ, ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ವಿಟ್ಲ ಸಾಲೆತ್ತೂರು ರಸ್ತೆಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಣೆ ಮಾಡಲಾಗುತ್ತದೆ ಎಂದು ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಮುಂದಾದಾಗ ವಾಹನ ಹಾಗೂ ಜಾನುವಾರುಗಳನ್ನು ನಾಪತ್ತೆ ಮಾಡಲಾಗಿತ್ತು. ಒಳ ರಸ್ತೆಗಳಲ್ಲಿ ತಪಾಸಣೆಗೆ ನಡೆಸಿದಾಗ, ಎರಡು ಕೋಣಗಳು ಮನೆಯೊಂದರ ಮುಂಭಾಗ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆದರೆ ವಾಹನ ಇರಲಿಲ್ಲ.

ಈ ಸಮಯ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದಾರೆ. ಕೋಣ ಇದ್ದ ಸ್ಥಳದಲ್ಲಿ ನೂರಾರು ಜನ ಜಮಾಯಿಸಿ, ಮಾತಿಗೆ ಮಾತು ಆರಂಭಿಸುತ್ತಿದ್ದಂತೆ ಎಲ್ಲರನ್ನೂ ಪೊಲೀಸರು ಓಡಿಸಿದ್ದಾರೆ. ಅಲ್ಲಿಂದ ಬಂದವರೇ ಕಡಂಬು ಜಂಕ್ಷನ್‌ನಲ್ಲಿ ಮಾತಿನ ಚಕಮಕಿ ಆರಂಭಿಸಿದ್ದಾರೆ. ಸಂಘಟನೆಗಳ ಮುಖಂಡರ ನಡುವೆ ಘರ್ಷಣೆ ನಡೆದಿದೆ.

ಹೆಚ್ಚುವರಿ ಪೊಲೀಸರು ಬಂದು ಲಘು ಲಾಠಿ ಪ್ರಹಾರ ಮಾಡಿದ್ದು, ಸ್ಥಳದಲ್ಲಿದ್ದ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸರವನ್ನು ಪೊಲೀಸರು ಹತೋಟಿಗೆ ತಂದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲ ಅಡವಾತ್, ಇನ್‌ಸ್ಪೆಕ್ಟರ್‌ ನಾಗರಾಜ್, ವಿಟ್ಲ ಸಬ್‌ ಇನ್‌ಸ್ಪೆಕ್ಟರ್‌ ಯಲ್ಲಪ್ಪ ಸೇರಿದಂತೆ ಪೊಲೀಸರ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದೆ. ಹೆಚ್ಚುವರಿ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿಯನ್ನೂ ಸ್ಥಳದಲ್ಲಿ ನಿಯೋಜಿಸಿದ್ದು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಒಂದೇ ಸಮುದಾಯಕ್ಕೆ ಸೇರಿದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ನೀಡಿದ ದೂರಿನ ಪ್ರಕಾರ ಮೊದಲ ಪ್ರಕರಣ ದಾಖಲಾಗಿದೆ. ಅಕ್ರಮ ಜಾನುವಾರು ವಧೆಗೆ ಪ್ರಯತ್ನ ಪಟ್ಟ ವಿಚಾರದಲ್ಲಿ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಿಚಾರ ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಒಟ್ಟು 50ಕ್ಕಿಂತಲೂ ಅಧಿಕ ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಿಂದೂ ಸಂಘಟನೆಯವರು ಹಲ್ಲೆ ನಡೆಸಿ ಗಾಯವಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿರುವ ಯುವಕ ತಲೆಮರೆಸಿಕೊಳ್ಳದಂತೆ ಆಸ್ಪತ್ರೆಗೆ ಪೊಲೀಸ್ ಕಾವಲು ಹಾಕಲಾಗಿದೆ.

ಒಂದು ಮನೆಯ ಮುಂಭಾಗದ ಗೇಟಿಗೆ ಎರಡು ಕೋಣಗಳನ್ನು ಕಟ್ಟಿ ಹಾಕಿದ್ದು ಪತ್ತೆಯಾಗಿದ್ದು, ಯಾರು ತಂದರು ಎಂದು ವಿಚಾರಿಸಿದಾಗ ಮನೆ ಮಂದಿ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ. ಒಟ್ಟಿನಲ್ಲಿ ಕೋಣಗಳನ್ನು ಯಾರು ತಂದರು ಎಂಬಿತ್ಯಾದಿ ಮಾಹಿತಿ ಇಲ್ಲ. ಇನ್ನೊಂದು ಮೂಲದ ಪ್ರಕಾರ ಬೆಳ್ತಂಗಡಿ ಕಡೆಯಿಂದ ವಿಟ್ಲ ಸಾಲೆತ್ತೂರು ರಸ್ತೆ ಮೂಲಕ ಕೇರಳದ ತಲೆಕ್ಕಿ ಕಸಾಯಿಖಾನೆ ಕೊಂಡೊಯ್ಯುತ್ತಿದ್ದ ವೇಳೆ ಹಿಂದಿನಿಂದ ಹಿಂದೂ ಸಂಘಟನೆಯವರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಡಂಬು ಎಂಬಲ್ಲಿಯ ಮನೆಯೊಂದರಲ್ಲಿ ಕಟ್ಟಿ ಹಾಕಿ ಆರೋಪಿಗಳು ವಾಹನ ಸಹಿತ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT