ಮಂಗಳವಾರ, ಮೇ 18, 2021
30 °C
ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್

ಮಾದರಿ ಸಂಚಾರ ವ್ಯವಸ್ಥೆಗೆ ಸಹಕರಿಸಿ: ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಮಂಗಳೂರು ಬುದ್ಧಿವಂತರು ಹಾಗೂ ವಿದ್ಯಾವಂತರ ನಗರ. ದೇಶಕ್ಕೆ ಮಾದರಿ ಸಂಚಾರ ವ್ಯವಸ್ಥೆಗೆ ಇಲ್ಲಿಂದಲೇ ದಿಕ್ಸೂಚಿ ಸಿಗಬೇಕು’ ಎಂದು ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಆಶಯ ವ್ಯಕ್ತಪಡಿಸಿದರು.

ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್  ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾತನಾಡಿದರು.

‘ಈ ನಿಟ್ಟಿನಲ್ಲಿ ಯುವಜನತೆ ಎಚ್ಚರಿಕೆಯಿಂದ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಮಾಲೀಕರು ತಮ್ಮ ಚಾಲಕರಿಗೆ ಸಂಚಾರ ನಿಯಮ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ನಿಯಂತ್ರಿಸಲು ದಂಡ ಹಾಕಲಾಗುತ್ತದೆಯೇ ಹೊರತು ಸರ್ಕಾರದ ಬೊಕ್ಕಸ ತುಂಬಿಸುವ ಉದ್ದೇಶದಿಂದ ಅಲ್ಲ’ ಎಂದರು. 

‘ನಿರ್ಲಕ್ಷ್ಯದಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಸಾಕಷ್ಟು ಪ್ರಾಣಾಪಾಯಗಳು ಸಂಭವಿಸುತ್ತಿವೆ. ಅಪರಾಧ ಪ್ರಕರಣಗಳ ಒಟ್ಟು ಸಾವಿನಲ್ಲಿ ರಸ್ತೆ ಅಪಘಾತದ್ದೇ ಅಧಿಕವಾಗಿರುತ್ತದೆ. ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದಾಗ ಅಪಘಾತ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದರು.

ಅಂಚೆ ಇಲಾಖೆಯ ಮಂಗಳೂರು ವಿಭಾಗದ ಮುಖ್ಯ ಅಧೀಕ್ಷಕ ಶ್ರೀಹರ್ಷ, ಯೂನಿಯನ್ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ  ಜಗನ್ನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಂ. ವರ್ಣೇಕರ್, ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲರಾದ ಜೂಲಿಯೆಟ್, ಎಸಿಪಿ ನಟರಾಜ್ ಇದ್ದರು.

ಯೂನಿಯನ್ ಬ್ಯಾಂಕ್‌ ವತಿಯಿಂದ ರಸ್ತೆ ಸುರಕ್ಷತೆಗಾಗಿ ಮಂಗಳೂರು ಪೊಲೀಸ್ ಕಮಿಷನರೇಟ್‌ಗೆ 200 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ನೆಹರೂ ಮೈದಾನದಿಂದ ರಮಣ ಪೈ ಸಭಾಂಗಣದವರೆಗೆ ರಸ್ತೆ ಸುರಕ್ಷತಾ ಜಾಥಾ ನಡೆಯಿತು. ರೋಶನಿ ನಿಲಯದ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯ ಅಗತ್ಯತೆ ಕುರಿತಂತೆ ಕಿರು ಪ್ರಹಸನ ಪ್ರದರ್ಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು