ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ

7
ಜಿಲ್ಲೆಯಲ್ಲಿ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ

ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ

Published:
Updated:
Deccan Herald

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಸೋಮವಾರ ನಡೆದ ಭಾರತ ಬಂದ್‌ ಅನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಬೆಂಬಲಿಸಿದ್ದು, ಬೆಳಿಗ್ಗೆಯಿಂದ ಸಂಜೆ 4 ಗಂಟೆವರೆಗೂ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಆನ್‌ ಲೈನ್‌ ಟ್ಯಾಕ್ಸಿ, ಆಟೊ ಸೇವೆಯಲ್ಲೂ ವ್ಯತ್ಯಯವಾಗಿದ್ದು, ಜನಜೀವನ ಎಂದಿನಂತಿರಲಿಲ್ಲ.

ನಗರ ಸಾರಿಗೆ, ಸರ್ವೀಸ್‌ ಬಸ್‌ ಸೇರಿದಂತೆ ಬಸ್‌ ಮಾಲೀಕರ ಎಲ್ಲ ಸಂಘಟನೆಗಳು ಬಂದ್‌ಗೆ ನೇರ ಬೆಂಬಲ ಸೂಚಿಸಿದ್ದವು. ಹೀಗಾಗಿ ಯಾವುದೇ ಖಾಸಗಿ ಬಸ್‌ಗಳು ಸಂಜೆ 4ರವರೆಗೂ ರಸ್ತೆಗೆ ಇಳಿಯಲಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಕೂಡ ತನ್ನ ಬಸ್‌ಗಳನ್ನು ಸಂಜೆಯವರೆಗೂ ಓಡಿಸಲಿಲ್ಲ. ಬಹುಪಾಲು ಬಸ್‌ ಸಾರಿಗೆಯನ್ನೇ ನೆಚ್ಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇಡೀ ದಿನ ಪರದಾಡುವಂತಾಗಿತ್ತು.

ಓಲಾ, ಉಬರ್‌ ಸೇರಿದಂತೆ ಆನ್‌ಲೈನ್‌ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಕೂಡ ಬಂದ್‌ ಬೆಂಬಲಿಸಿದ್ದರು. ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್‌ ಬೆಂಬಲಿತ ಆಟೊ ಮಾಲೀಕರು ಮತ್ತು ಚಾಲಕರ ಸಂಘಟನೆಗಳು ಬಂದ್‌ ಬೆಂಬಲಿಸಿದ್ದವು. ಹೀಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಹುತೇಕ ಸ್ತಬ್ಧಗೊಂಡಿತ್ತು.

ಈ ನಡುವೆಯೇ ಕೆಲವು ಆಟೊ ಚಾಲಕರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದರು. ರೈಲ್ವೆ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಿಗೆ ಬಂದಿಳಿದ ಪ್ರಯಾಣಿಕರನ್ನು ಕರೆದೊಯ್ಯಲು ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಡುತ್ತಿದ್ದುದು ಕಂಡುಬಂತು.

ಬಂದ್‌ ಕಾರಣದಿಂದ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಖಾಸಗಿ ಉದ್ದಿಮೆಗಳು ಮತ್ತು ಕಂಪೆನಿಗಳಲ್ಲೂ ಕರ್ತವ್ಯಕ್ಕೆ ಹಾಜರಾಗಿದ್ದ ನೌಕರರ ಸಂಖ್ಯೆ ಕಡಿಮೆ ಇತ್ತು. ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆ ಇತ್ತು. ಆಸ್ಪತ್ರೆಗಳಲ್ಲೂ ಜನದಟ್ಟಣೆ ತೀರಾ ಕಡಿಮೆ ಕಂಡುಬಂತು.

ಶಾಸಕರಿಂದ ಆಹಾರ ಪೂರೈಕೆ: ವಿವಿಧ ಕಡೆಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದಿಳಿದ ಹಲವು ಪ್ರಯಾಣಿಕರು ಮುಂದಕ್ಕೆ ಹೋಗಲಾಗದೇ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲೇ ಉಳಿದಿದ್ದರು. ಅವರಿಗೆ ನೀರು, ಆಹಾರದ ಕೊರತೆ ಇತ್ತು. ಶಾಸಕ ಡಿ.ವೇದವ್ಯಾಸ ಕಾಮತ್‌ ಮಧ್ಯಾಹ್ನ ಈ ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯ ಪೂರೈಸಿದರು.

ಬಿಕೋ ಎನ್ನುತ್ತಿದ್ದ ಮಾರುಕಟ್ಟೆಗಳು: ನಗರದ ಬಹುತೇಕ ಮಾರುಕಟ್ಟೆಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಹಲವು ಮಂದಿ ವರ್ತಕರು ಬಂದ್‌ ಕರೆಯನ್ನು ಬೆಂಬಲಿಸಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರು. ಸದಾಕಾಲಗಿಜಿಗುಡುತ್ತಿದ್ದ ಮೀನು ಮಾರುಕಟ್ಟೆಗಳಲ್ಲೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

ಹಲವು ಹೋಟೆಲ್‌ಗಳು ವಹಿವಾಟು ಬಂದ್‌ ಮಾಡಿದ್ದವು. ಕೆಲವು ಹೋಟೆಲ್‌ಗಳು ಬಂದ್‌ ನಡುವೆಯೂ ಕಾರ್ಯನಿರ್ವಹಿಸಿದರೆ, ಕೆಲವು ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಬಾಗಿಲು ತೆರೆದವು.

ಹೋಟೆಲ್‌, ಬಸ್ಸಿಗೆ ಕಲ್ಲು: ಕದ್ರಿಯ ಶಿವಭಾಗ್‌ ಕೆಫೆ ಹೋಟೆಲ್‌ ಮೇಲೆ ಕಿಡಿಗೇಡಿಗಳು ಸೋಮವಾರ ಬೆಳಿಗ್ಗೆ ಕಲ್ಲೆಸಿದಿದ್ದಾರೆ. ಬಂದ್‌ ನಡುವೆಯೂ ಹೋಟೆಲ್‌ ವಹಿವಾಟು ನಡೆಯುತ್ತಿತ್ತು. ಆಗ ದುಷ್ಕರ್ಮಿಗಳು ದೂರದಿಂದ ಕಲ್ಲೆಸೆದಿದ್ದು, ಗಾಜಿಗೆ ಹಾನಿಯಾಗಿದೆ. ನಂತರ ಹೋಟೆಲ್‌ ಬಂದ್‌ ಮಾಡಲಾಯಿತು. ಈ ಸಂಬಂಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಬಂದ ದುರ್ಗಾಂಬಾ ಬಸ್ಸಿನ ಮೇಲೆ ಕಲ್ಲೆಸೆದಿದ್ದು, ಮುಂಭಾಗದ ಗಾಜಿಗೆ ಹಾನಿಯಾಗಿದೆ. ಆದರೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಮಾಣಿ ಬಳಿ ನಾಲ್ವರು ಯುವಕರು ಪಿಕಪ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕಡಬದಲ್ಲಿ ಬಂದ್‌ ವೇಳೆ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !