ರಸ್ತೆ ವಿಸ್ತರಣೆಗೆ ಬಲಿಯಾಗಲಿದ್ದ ಮರ ಸ್ಥಳಾಂತರ

7
ಪರಿಸರವಾದಿಗಳ ಆಗ್ರಹಕ್ಕೆ ಮಣಿದ ಮಂಗಳೂರು ಮಹಾನಗರ ಪಾಲಿಕೆ

ರಸ್ತೆ ವಿಸ್ತರಣೆಗೆ ಬಲಿಯಾಗಲಿದ್ದ ಮರ ಸ್ಥಳಾಂತರ

Published:
Updated:
Deccan Herald

ಮಂಗಳೂರು: ನಗರದ ಲೇಡಿಹಿಲ್‌ ವೃತ್ತದಲ್ಲಿ ರಸ್ತೆ ವಿಸ್ತರಣೆಗಾಗಿ ಮಂಗಳೂರು ಮಹಾನಗರ ಪಾಲಿಕೆ ಕಡಿತಲೆ ಮಾಡಲು ಹೊರಟಿದ್ದ ಗುಲ್‌ಮೊಹರ್‌ ಮರವೊಂದನ್ನು ಪರಿಸರವಾದಿಗಳ ಒತ್ತಡಕ್ಕೆ ಮಣಿದು ಸೋಮವಾರ ಬುಡಸಮೇತ ಸ್ಥಳಾಂತರ ಮಾಡಿ, ಬೇರೆಡೆ ನೆಡಲಾಗಿದೆ.

ಲೇಡಿ ಹಿಲ್ ವೃತ್ತದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಬೆಳೆಸಿದ್ದ ಬೃಹತ್‌ ಮರ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರಿಗೆ ನೆರಳು ನೀಡುತ್ತಿತ್ತು. ಆದರೆ, ಅಲ್ಲಿ ರಸ್ತೆ ವಿಸ್ತರಣೆಗೆ ಮುಂದಾಗಿರುವ ಮಹಾನಗರ ಪಾಲಿಕೆ ಆಡಳಿತ, ಮರವನ್ನು ಕಟಾವು ಮಾಡಲು ಅನುಮತಿ ನೀಡಿತ್ತು.

ಎರಡು ತಿಂಗಳ ಹಿಂದೆ ಮರವನ್ನು ಕಡಿಯುವ ಪ್ರಯತ್ನವೂ ನಡೆದಿತ್ತು. ಆದರೆ, ಪರಿಸರವಾದಿಗಳ ಪ್ರತಿಭಟನೆಯ ಕಾರಣದಿಂದ ಕೈಬಿಡಲಾಗಿತ್ತು. ಒತ್ತಡಕ್ಕೆ ಮಣಿದ ಪಾಲಿಕೆ ಆಡಳಿತ ಮರವನ್ನು ಬೇರುಗಳ ಸಮೇತ ಸ್ಥಳಾಂತರ ಮಾಡಲು ತೀರ್ಮಾನಿಸಿತ್ತು. ಸೋಮವಾರ ಮರದ ರೆಂಬೆಗಳನ್ನು ಕತ್ತರಿಸಿ ತೆಗೆದು, ಜೆಸಿಬಿ ಸಹಾಯದಿಂದ ಬುಡವನ್ನು ಅಗೆಯಲಾಯಿತು. ನಂತರ ಖಾಲಿ ಸ್ಥಳವೊಂದರಲ್ಲಿ ಗುಂಡಿ ತೋಡಿ ಕ್ರೇನ್‌ ನೆರವಿನಲ್ಲಿ ಮರವನ್ನು ಸ್ಥಳಾಂತರಿಸಿ ಅಲ್ಲಿ ನೆಡಲಾಯಿತು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 2 ಗಂಟೆಗೆ ಪೂರ್ಣಗೊಂಡಿತು. ರಾಷ್ಟ್ರೀಯ ಪರಿಸರ ರಕ್ಷಣಾ ಫೌಂಡೇಶನ್‌ನ (ಎನ್‌ಇಸಿಎಫ್‌) ಶಶಿಧರ ಶೆಟ್ಟಿ, ಜೀತ್‌ ಮಿಲನ್ ರೋಶೆ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಾಂತರ ಮಾಡಿರುವ ಮರಕ್ಕೆ ನಿರಂತರವಾಗಿ ನೀರು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

‘ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ಹಸಿರು ಸೆಸ್‌ ವಸೂಲಿ ಮಾಡುತ್ತಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯಲು ನಾವು ಅವಕಾಶ ನೀಡುವುದಿಲ್ಲ. ಅನಿವಾರ್ಯ ಆಗಿದ್ದಲ್ಲಿ ಮರಗಳನ್ನು ಸ್ಥಳಾಂತರ ಮಾಡಲಿ’ ಎಂದು ಶಶಿಧರ ಶೆಟ್ಟಿ ಹೇಳಿದರು.

‘ಮಹಾನಗರ ಪಾಲಿಕೆ ಮರಗಳನ್ನು ಕಡಿಯುವುದನ್ನು ಮುಂದುವರಿಸಿದರೆ ನಗರದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟ. ಸಣ್ಣ ಪ್ರಯತ್ನದಿಂದಲೂ ನಾವು ಮರಗಳನ್ನು ಉಳಿಸಬಹುದು’ ಎನ್ನುತ್ತಾರೆ ಜೀತ್ ಮಿಲನ್ ರೋಶೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !