ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ಕಂಪು ಬೀರಲಿರುವ ‘ತುಳುಪುರ್ಪ’

ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಹಕ್ಕೊತ್ತಾಯ
Last Updated 19 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ತುಳು ಭಾಷೆಯ ಬೆಳವಣಿಗೆಗೆ ಬಹುವಾಗಿ ಕೊಡುಗೆ ನೀಡಿರುವ ಜೈ ತುಳುನಾಡು ಸಂಘಟನೆ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು, ದೇಶವ್ಯಾಪಿ ತುಳುಲಿಪಿಯ ವಿಶೇಷತೆ ತಿಳಿಸಲು ಮುಂದಾಗಿದೆ. ಆ ಮೂಲಕ ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಮತ್ತು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಹಕ್ಕೊತ್ತಾಯ ಮಾಡಲಿದೆ.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ತುಳುಲಿಪಿಯಲ್ಲಿರುವ ‘ತುಳುಪುರ್ಪ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದೆ. ಈ ಸಂಕಲನವನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು, ಮಾನವ ಸಂಪನ್ಮೂಲ ಸಚಿವಾಲಯ, ದೇಶದ 30 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಲು ಸಿದ್ಧತೆ ನಡೆಸಿದೆ. ಈ ಕೃತಿಗೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಆಕಾಶ್‌ ಜೈನ್ ಮುನ್ನುಡಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ಬೆನ್ನುಡಿ ಬರೆದಿದ್ದಾರೆ. ಪೇಜಾವರ ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಚನವೂ ಇದೆ.

‘ಅಮೃತ ಮಹೋತ್ಸವದ ನೆನಪಿನಲ್ಲಿ ಹೊರತಂದ ಕೃತಿಯಲ್ಲಿ 75 ಕವನಗಳನ್ನು ಪ್ರಕಟಿಸಬೇಕು ಎಂದು ನಿರ್ಧರಿಸಲಾಗಿತ್ತು. ಅಂತಿಮವಾಗಿ, ದೇಶಭಕ್ತಿ ಗೀತೆ, ವೀರ ಗೀತೆ, ತುಳು ನಾಡಗೀತೆ, ಕೃಷಿ ಗೀತೆಗಳು ಒಳಗೊಂಡ 111 ಜನರ ಬರಹಗಳನ್ನು ತುಳುಲಿಪಿಯಲ್ಲಿ ಪ್ರಕಟಿಸಲಾಗಿದೆ. ಮುನ್ನುಡಿ ಇಂಗ್ಲಿಷ್‌ನಲ್ಲಿ, ಬೆನ್ನುಡಿಕನ್ನಡದಲ್ಲಿ, ಆಶೀರ್ವಚನ ಹಿಂದಿಯಲ್ಲಿದೆ. ದೇಶದ ವಿವಿಧೆಡೆಯ ಜನಪ್ರತಿನಿಧಿಗಳಿಗೆ ತುಳು ಭಾಷೆಯ ಮಹತ್ವ ತಿಳಿಸುವುದು ಇದರ ಉದ್ದೇಶ’ ಎಂದು ಜೈ ತುಳುನಾಡು ಸಂಘಟನೆಯ ಕಾರ್ಯದರ್ಶಿ ಅವಿನಾಶ್ ಮುಕ್ಕ ತಿಳಿಸಿದರು.

‘ಆರ್ಟಿಕಲ್ 345, 347ರ ಪ್ರಕಾರ ತುಳುಭಾಷೆಗೆ ಕರ್ನಾಟಕದಲ್ಲಿ ಭಾಷಾ ಸ್ಥಾನಮಾನ ನೀಡಬೇಕು, ಆ ಮೂಲಕ ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬುದು ನಮ್ಮ ವಿನಂತಿ. ಈ ಬಗ್ಗೆ ಗಮನ ಸೆಳೆಯಲು, ಎಲ್ಲ ಜನಪ್ರತಿನಿಧಿಗಳಿಗೆ ಪುಸ್ತಕವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಮುನ್ನಡಿ, ಬೆನ್ನುಡಿಯಲ್ಲೂ ಈ ಕೋರಿಕೆ ಇದೆ. ತುಳುನಾಡಿನ ಶಾಸಕರು, ಸಂಸದರನ್ನು ಖುದ್ದು ಭೇಟಿಯಾಗಿ ಪುಸ್ತಕ ನೀಡಲು ಯೋಚಿಸಲಾಗಿದೆ. ಪುಸ್ತಕದ ಜತೆಗೆ ತುಳು ಭಾಷೆಯ ಮಹತ್ವ, ಯಾಕಾಗಿ ಈ ಭಾಷೆಗೆ ಮಾನ್ಯತೆ ನೀಡಬೇಕು ಎಂಬ ಬಗ್ಗೆ ಮನವಿ ಪತ್ರವನ್ನು ಕೂಡ ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಜೈ ತುಳುನಾಡು ಸಂಘಟನೆಯು ‘ಬಲೆ ತುಳುಲಿಪಿ ಕಲ್ಪುಗ’ ಕಾರ್ಯಕ್ರಮದಡಿ ಉಚಿತವಾಗಿ ತುಳುಲಿಪಿಯನ್ನು ಕಲಿಸುತ್ತಿದೆ. 300ರಷ್ಟು ಶಿಕ್ಷಕರು, ಸುಮಾರು 15 ಸಾವಿರ ಜನರಿಗೆ 45 ಆನ್‌ಲೈನ್, 125 ಆನ್‌ಲೈನ್ ತರಗತಿಗಳ ಮೂಲಕ ತುಳುಲಿಪಿ ಕಲಿಸಿದ್ದಾರೆ’ಎಂದು ಸಂಘಟನೆ ಅಧ್ಯಕ್ಷ ಅಶ್ವತ್ಥ್ ತುಳುವೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT