ಬುಧವಾರ, ಮಾರ್ಚ್ 29, 2023
27 °C
ಚುನಾವಣೆ ಸಮೀಪಿಸಿದಾಗ ಅಧ್ಯಯನ ಸಮಿತಿ ರಚಿಸುವ ಅಗತ್ಯವೇನು: ಶಾಸಕ ಪ್ರಶ್ನೆ

ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಮೀನಮೇಷ ಎಣಿಸುತ್ತಿರುವ ಸರ್ಕಾರ: ಖಾದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆರೋಪಿಸಿದರು.  ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಪ್ರತ್ಯೇಕ ಅಧ್ಯಯನ ಸಮಿತಿಯನ್ನು ಚುನಾವಣೆ ಸಮೀಪಿಸಿದಾಗ ರಚಿಸುವ ಅಗತ್ಯ ಏನಿತ್ತು ಎಂದೂ ಅವರು ಪ್ರಶ್ನಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ಸಿಗಬೇಕು ಎಂದು ಜಿಲ್ಲೆಯ ಬಿಜೆಪಿ ಶಾಸಕರು ವಿರೋಧ ಪಕ್ಷದಲ್ಲಿದ್ದಾಗ ಒತ್ತಾಯಿಸಿದ್ದರು. ಬಿಜೆಪಿ ಅಧಿಕಾರಕ್ಕೆೆ ಬಂದು ನಾಲ್ಕು ವರ್ಷಗಳು ಕಳೆದಿವೆ. ಆದರೂ ಈ ಮಾನ್ಯತೆ ನೀಡಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಇದೀಗ ಚುನಾವಣೆ  ಸಮೀಪಿಸುತ್ತಿರುವಾಗ ಈ ಕುರಿತು ಅಧ್ಯಯನ ಸಮಿತಿ ರಚಿಸಿದೆ. ತುಳುನಾಡಿನ ಜನರ ಕಣ್ಣಿಗೆ ಮಣ್ಣೆೆರಚುವ ತಂತ್ರವಿದು’ ಎಂದರು.

‘ತುಳುವಿಗೆ ಪ್ರತ್ಯೇಕ ಅಕಾಡೆಮಿ ಇದೆ. ತುಳುವಿನಲ್ಲಿ ಸಾಕಷ್ಟು ಸಾಹಿತ್ಯವೂ ರಚನೆಯಾಗಿದೆ. ಅನೇಕ ಸಾಹಿತಿಗಳೂ ತುಳು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‌‌ತುಳು ಯಕ್ಷಗಾನಗಳಿವೆ. ಇಷ್ಟೆೆಲ್ಲ ಇರುವಾಗ ಪ್ರತ್ಯೇಕ ಅಧ್ಯಯನ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ. ತುಳುನಾಡಿನವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಈ ಬಗ್ಗೆ ಸರ್ಕಾರ ಇನ್ನೂ ಖಚಿತವಾದ ತೀರ್ಮಾನ ಕೈಗೊಳ್ಳದೇ ಇರುವುದು ತುಳುವರಿಗೆ ಮಾಡಿರುವ ಮೋಸ’ ಎಂದರು.

‘ತುಳುವಿಗೆ ನಿಜಕ್ಕೂ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೇರವಾಗಿ ಘೋಷಣೆ ಮಾಡಲು ಇರುವ ಸಮಸ್ಯೆಯಾದರೂ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸುಖಾಸುಮ್ಮನೆ ಜನರಲ್ಲಿ ಗೊಂದಲ ಮೂಡಿಸಬಾರದು. ಬಿಜೆಪಿ ನೇತೃತ್ವದ ಸರ್ಕಾರ ಈ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸದಿದ್ದರೆ, ಕಾಂಗ್ರೆೆಸ್ ಸರ್ಕಾರ ಬಂದಾಗ ಈ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯ: 2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಯಾವುದೇ ಯೋಜನೆಯನ್ನೂ ಘೋಷಿಸಿಲ್ಲ. ರಾಜ್ಯ ಸಂಸದರಲ್ಲಿ ಶೇ 95ಕ್ಕೂ ಹೆಚ್ಚು ಮಂದಿ ಬಿಜೆಪಿಯವರು. ಆದರೂ ನುದಾನ ಹಂಚಿಕೆ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ’ ಎಂದು ಖಾದರ್‌ ಆರೋಪಿಸಿದರು.

‘ಕರಾವಳಿಗೆ ಪ್ರತ್ಯೇಕ ರೈಲ್ವೆೆ ವಿಭಾಗವನ್ನು ಘೋಷಣೆ ಮಾಡಿಲ್ಲ.  ಬಂದರು ಅಭಿವೃದ್ಧಿ ಯೋಜನೆಗಳಿಗೂ ಅನುದಾನ ಒದಗಿಸಿಲ್ಲ. ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲು  ಸಾಧ್ಯವಿಲ್ಲ ಎಂದು ಕೇಂದ್ರ ಭೂಸಾರಿಗೆ ಸಿಚವ ನಿತಿನ್ ಗಡ್ಕರಿ ಸಂಸತ್ತಿನಲ್ಲೇ ಹೇಳಿಕೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ₹ 11 ಸಾವಿರ ಕೋಟಿ ವೆಚ್ಚದ ಈ ಯೋಜನೆ ಕೈಬಿಟ್ಟಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ನೀಡಿದ್ದರು. ಕೇಂದ್ರ ಸಚಿವರು ಬರೆದ ಪತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಆದರೆ, ಈ ಯೋಜನೆಗೆ  ಈ ಸಾಲಿನ ಬಜೆಟ್‌ನಲ್ಲಿ ಕೇಂದ್ರವು ಅನುದಾನವನ್ನೇ ಘೋಷಿಸಿಲ್ಲ ಏಕೆ’ ಎಂದು ಖಾದರ್‌ ಪ್ರಶ್ನಿಸಿದರು.

‘ಶೀರಾಡಿಯಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಇಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಾಕಿ ಗುಂಡಿಗಳನ್ನಾದರೂ ಮುಚ್ಚಲು ಕ್ರಮ ಕೈಗೊಳ್ಳಬೇಕು. ಈ ಹೆದ್ದಾರಿಯಲ್ಲಿ ಸಂಚರಿಸುವುದಕ್ಕೇ ಸಾಧ್ಯವಿಲ್ಲದ ಸ್ಥಿತಿ ಇದೆ’ ಎಂದರು.
ಕಾಂಗ್ರೆೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಉಮರ್ ಫಾರೂಕ್, ಬದ್ರುದ್ದೀನ್‌, ಮುಸ್ತಫಾ, ಜಬ್ಬಾರ್‌, ಅಬ್ದುಲ್ ಖಾದರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ಅಮಿತ್‌ ಶಾ ರಸ್ತೆಯಲ್ಲಿ ಬರಲಿ’

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 11ರಂದು ನಗರದಲ್ಲಿ ರೋಡ್ ಶೋ ಆಯೋಜಿಸಿರುವುದು ಸಂತೋಷ. ಅವರು ಬರುವಾಗ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬಂದರೆ ಒಳ್ಳೆಯದು. ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ಎಷ್ಟು ಹೊಂಡ ಗುಂಡಿಗಳಿವೆ ಎಂಬ ನೈಜ ಚಿತ್ರಣ ಅವರಿಗೆ ಸಿಗುತ್ತದೆ. ಅವರನ್ನು ರಸ್ತೆೆ ಮಾರ್ಗದಲ್ಲಿ ಕರೆದುಕೊಂಡು ಬಂದರೆ ಬಿಜೆಪಿಯವರಿಗೆ ಸೆಲ್ಯೂಟ್ ಹೊಡೆಯುತ್ತೇನೆ’ ಎಂದು ಖಾದರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು