ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ದಿನದಲ್ಲಿ ಕರಡು ಯುಪಿಒಆರ್‌

ಕಂದಾಯ ಸಚಿವರ ಸಭೆಯಲ್ಲಿ ಅಧಿಕಾರಿಗಳ ಭರವಸೆ
Last Updated 18 ಜೂನ್ 2019, 17:48 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಈಗಾಗಲೇ ಭೂಮಾಪನ ಪೂರ್ಣಗೊಂಡಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಎರಡೇ ದಿನದಲ್ಲಿ ನಗರ ಆಸ್ತಿ ಹಕ್ಕುಗಳ ದಾಖಲೆ (ಯುಪಿಒಆರ್‌) ಕರಡು ಕಾರ್ಡ್‌ ವಿತರಿಸಲಾಗುವುದು ಎಂದು ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಷ್‌ ಮೌದ್ಗಿಲ್‌ ಭರವಸೆ ನೀಡಿದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯುಪಿಒಆರ್‌ ಕಡ್ಡಾಯ ಕುರಿತು ಚರ್ಚೆ ನಡೆಯಿತು. ಸರ್ವೆ ಮುಗಿದಿದ್ದರೆ, ಅರ್ಜಿ ಸಲ್ಲಿಸಿದ ಎರಡನೇ ದಿನಗಳಲ್ಲಿ ಕಾರ್ಡ್‌ ಸಿಗುತ್ತದೆ. ಸರ್ವೆ ಕೆಲಸಕ್ಕೆ ಹತ್ತು ದಿನ ಬೇಕಾಗುತ್ತದೆ. ಆ ಬಳಿಕ ತ್ವರಿತವಾಗಿ ಕಾರ್ಡ್‌ ನೀಡಲಾಗುವುದು ಎಂದರು.

ಮಂಗಳೂರು ನಗರದಲ್ಲಿ ಒಟ್ಟು 1,53,446 ಆಸ್ತಿಗಳ ಭೂಮಾಪನ ಪೂರ್ಣಗೊಳಿಸಿ, ನಕ್ಷೆ ತಯಾರಿಸಲಾಗಿದೆ. 87,717 ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 41,777 ಕರಡು ಯುಪಿಒಆರ್‌ ಕಾರ್ಡ್‌ಗಳನ್ನು ಅನುಮೋದಿಸಿದ್ದು, 28,646 ಕಾರ್ಡ್‌ಗಳನ್ನು ವಿತರಿಸಲಾಗಿದೆ. 28,064 ಅಂತಿಮ ಯುಪಿಒಆರ್‌ ಕಾರ್ಡ್‌ಗಳನ್ನು ಅನುಮೋದಿಸಿದ್ದು, 25,009 ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಿರಾಸ್ತಿಗಳ ನೋಂದಣಿಗೆ ಯುಪಿಒಆರ್‌ ಕಡ್ಡಾಯಗೊಳಿಸಿರುವುದನ್ನು ಆಕ್ಷೇಪಿಸಿದ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್‌, ‘ಶೇಕಡ 80ರಷ್ಟು ಕಾರ್ಡ್‌ಗಳನ್ನು ವಿತರಿಸಿದ ಬಳಿಕ ಕಡ್ಡಾಯಗೊಳಿಸಬೇಕಿತ್ತು. ನಾಲ್ಕು ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಈವರೆಗೂ ಕಾರ್ಡ್‌ ವಿತರಿಸಿಲ್ಲ. ದಲ್ಲಾಳಿಗಳ ಮೂಲಕ ಅರ್ಜಿ ಸಲ್ಲಿಸಿದರೆ ತಕ್ಷಣವೇ ಕಾರ್ಡ್‌ ಸಿಗುತ್ತದೆ. ನಿತ್ಯವೂ ಹತ್ತಾರು ಮಂದಿ ನಮ್ಮ ಬಳಿ ದೂರು ಹೊತ್ತು ಬರುತ್ತಾರೆ’ ಎಂದರು.

‘ಯುಪಿಒಆರ್‌ ಯೋಜನೆ 2009ರಲ್ಲೇ ಆರಂಭವಾಗಿತ್ತು. 2015ರವರೆಗೂ ಕುಂಟುತ್ತಾ ಸಾಗಿತ್ತು. ಆ ಬಳಿಕ ಅದಕ್ಕೆ ವೇಗ ನೀಡಲಾಯಿತು. ನಾನು ಬಂದ ಬಳಿಕ ತ್ವರಿತವಾಗಿ ಅನುಷ್ಠಾನಕ್ಕೆ ಯತ್ನಿಸಿದ್ದೇವೆ. ಈಗ ದಿನಕ್ಕೆ 100ರಿಂದ 200ರಷ್ಟು ಆಸ್ತಿಗಳಿಗೆ ಸಂಬಂಧಿಸಿದಂತೆ ಅರ್ಜಿ ಪಡೆಯಲಾಗುತ್ತಿದೆ. ಸಮಸ್ಯೆಗಳ ನಿವಾರಣೆಗೆ ನನ್ನ ಅಧ್ಯಕ್ಷತೆಯಲ್ಲೇ ಸಮಿತಿಯನ್ನೂ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ತುರ್ತು ಬಳಕೆಗೆ ಬೇಕಿದ್ದಲ್ಲಿ ತಕ್ಷಣವೇ ಯುಪಿಒಆರ್‌ ಕಾರ್ಡ್‌ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಡ್‌ ಅನ್ನು ಮನೆಯಲ್ಲಿ ಅಥವಾ ಸೈಬರ್‌ ಕೆಫೆಗಳಲ್ಲಿ ಮುದ್ರಣ ಮಾಡಿಕೊಳ್ಳಬಹುದಾದ ವ್ಯವಸ್ಥೆಯನ್ನೂ ತರಲಾಗುವುದು ಎಂದು ಮೌದ್ಗಿಲ್‌ ತಿಳಿಸಿದರು.

ಸಹಕಾರ ನೀಡಲು ಕೋರಿಕೆ: ‘ಯಾವುದೇ ಹೊಸ ಸುಧಾರಣೆ ತರಲು ಹೊರಟಾಗ ಸಮಸ್ಯೆಗಳು ಆಗುವುದು ಸಹಜ. ಕಂದಾಯ ಇಲಾಖೆಯಲ್ಲಿ ಇದೊಂದು ಮಹತ್ವದ ಯೋಜನೆ. ನಗರ ಪ್ರದೇಶದ ಆಸ್ತಿಗಳ ಮಾಲೀಕತ್ವಕ್ಕೆ ದಾಖಲೆ ನೀಡುವ ಕ್ರಮ ಈವರೆಗೂ ಆಗಿರಲಿಲ್ಲ. ಈಗ ಎಲ್ಲರೂ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಿ’ ಎಂದು ಕಂದಾಯ ಸಚಿವರು ಮನವಿ ಮಾಡಿದರು.

ಒತ್ತುವರಿ ತೆರವಿಗೆ ಸೂಚನೆ:

ನಗರದ ಕೆಲವು ಕಡೆಗಳಲ್ಲಿ ರಾಜ ಕಾಲುವೆಗಳ ಒತ್ತುವರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಶೀಘ್ರದಲ್ಲಿ ಒತ್ತುವರಿ ತೆರವು ಮಾಡುವಂತೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾಯ್ಕ್, ಡಾ.ಭರತ್‌ ವೈ. ಶೆಟ್ಟಿ, ಹರೀಶ್‌ ಪೂಂಜ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT