ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಆಮದು ನಿಷೇಧಕ್ಕೆ ಆಗ್ರಹಿಸಿ ನಿರ್ಣಯ

ರೈತರ ಜೊತೆಗಿನ ಸಭೆಯಲ್ಲಿ ಸಚಿವ ಯು.ಟಿ.ಖಾದರ್‌ ಭರವಸೆ
Last Updated 19 ಜೂನ್ 2019, 12:23 IST
ಅಕ್ಷರ ಗಾತ್ರ

ಮಂಗಳೂರು: ಅಡಿಕೆ ಬೆಲೆ ಕುಸಿತದಿಂದ ರಾಜ್ಯದ ರೈತರಿಗೆ ಎದುರಾಗಿರುವ ಸಂಕಷ್ಟ ತಪ್ಪಿಸಲು ಅಡಿಕೆ ಆಮದು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸುವ ನಿರ್ಣಯವನ್ನು ರಾಜ್ಯ ಸರ್ಕಾರದಿಂದ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಭರವಸೆ ನೀಡಿದರು.

ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ರೈತರ ಜೊತೆ ಸಚಿವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಆಗ, ಅಡಿಕೆ ಬೆಳೆಗಾರರ ಹಿತ ರಕ್ಷಿಸಲು ಆಮದು ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆಗಳ ಪ್ರಮುಖರು ಆಗ್ರಹಿಸಿದರು.

‘ಆಮದು ನಿಷೇಧದ ಅಧಿಕಾರ ಇರುವುದು ಕೇಂದ್ರ ಸರ್ಕಾರದ ಬಳಿ. ಶೀಘ್ರದಲ್ಲೇ ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಸಚಿವರ ಜೊತೆ ಸಭೆ ನಡೆಸಲಾಗುವುದು. ಅಲ್ಲಿ ಅಡಿಕೆ ಆಮದು ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ಸಚಿವರು ಪ್ರತಿಕ್ರಿಯಿಸಿದರು.

ಶೀಘ್ರದಲ್ಲಿ ಪ್ರೋತ್ಸಾಹಧನ ಬಿಡುಗಡೆ: ‘ಭತ್ತದ ಬೆಳೆಗೆ ಜಿಲ್ಲೆಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ಕೃಷಿ ಇಲಾಖೆಯು ಭತ್ತ ಬೆಳೆಯುವ ಕೃಷಿಕರನ್ನು ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ಮೂಡುಬಿದಿರೆಯ ಕೃಷಿಕ ಧನಕೀರ್ತಿ ಬಲಿಪ ದೂರಿದರು.

ಆಗ ಉತ್ತರ ನೀಡಿದ ಸಚಿವರು, ‘ಕರಾವಳಿಯಲ್ಲಿ ಭತ್ತದ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರತಿ ಎಕರೆಗೆ ₹ 7,500 ಪ್ರೋತ್ಸಾಹಧನ ನೀಡಲಾಗುವುದು. ಹಣ ವಿತರಣೆ ಸಂಬಂಧ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಬರ ಪರಿಹಾರ ಕಾಮಗಾರಿಗಳಿಗೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಈ ತಾಲ್ಲೂಕುಗಳಿಗೂ ಬರ ಪರಿಹಾರ ಅನುದಾನ ಬಿಡುಗಡೆ ಆಗಲಿದೆ ಎಂದರು.

ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದೆ. ಹಂತ ಹಂತವಾಗಿ ಸಾಲ ಮನ್ನಾ ಹಣ ಬಿಡುಗಡೆ ಆಗುತ್ತಿದೆ. ರೈತರು ಯಾವುದೇ ಹಂತದಲ್ಲೂ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದರು.

ಮಾಹಿತಿ ಕೇಂದ್ರ ಸ್ಥಾಪನೆ:

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದರ ಬದಲಿಗೆ ಇಲಾಖೆಯಲ್ಲಿ ಪೂರೈಸಿದ ವಸ್ತುಗಳನ್ನು ಒತ್ತಡ ಹಾಕಲಾಗುತ್ತದೆ. ರೈತರ ಅನುಕೂಲಕ್ಕೆ ಪೂರೈಸುವ ಹೆಚ್ಚಿನ ವಸ್ತುಗಳು ಹಾಗೆಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿದ್ದಿವೆ ಎಂದು ಹಲವು ರೈತರು ದೂರಿದರು.

ಈ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ‘ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ಒದಗಿಸಲು ರೈತರ ಸಹಯೋಗದಲ್ಲೇ ಮಾಹಿತಿ ಕೇಂದ್ರ ಆರಂಭಿಸೋಣ. ಅಲ್ಲಿ ಶೀಘ್ರದಲ್ಲೇ ಈ ಕೇಂದ್ರ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪದೇ ಪದೇ ಚುನಾವಣೆಗಳು ಬಂದಾಗ ರೈತರ ಪರವಾನಗಿ ಹೊಂದಿದ ಬಂದೂಕುಗಳನ್ನು ವಶಕ್ಕೆ ಪಡೆಯುವ ಕ್ರಮವನ್ನು ಕೈಬಿಡಬೇಕೆಂಬ ಬೇಡಿಕೆ ರೈತರಿಂದ ವ್ಯಕ್ತವಾಯಿತು. ಆದರೆ, ಚುನಾವಣಾ ಆಯೋಗದ ನಿರ್ದೇಶನಗಳ ವಿವರ ನೀಡಿದ ಜಿಲ್ಲಾಧಿಕಾರಿ, ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪಟ್ಟಿ ಸಲ್ಲಿಸಲು ಸೂಚನೆ:

ಬೆಳೆ ವಿಮೆ ಹಣ ಸರಿಯಾಗಿ ಪಾವತಿ ಆಗುತ್ತಿಲ್ಲ ಎಂದು ರೈತರು ದೂರಿದರು. ಈ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್‌.ನಾಯ್ಕ್, ‘ಜಿಲ್ಲೆಯಲ್ಲಿ 56,000 ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದರು. 50,000 ಜನರಿಗೆ ಪರಿಹಾರ ಪಾವತಿಯಾಗಿದೆ. ಉಳಿದವರಿಗೆ ಕೆಲವೇ ದಿನಗಳೊಳಗೆ ಹಣ ಪಾವತಿಯಾಗಲಿದೆ’ ಎಂದು ತಿಳಿಸಿದರು.

ಅರ್ಹ ರೈತರಿಗೆ ಬೆಳೆವಿಮೆ ಯೋಜನೆಯಡಿ ಪರಿಹಾರ ದೊರೆಯದೇ ಇರುವ ಪ್ರಕರಣಗಳಿದ್ದಲ್ಲಿ ನೇರವಾಗಿ ಜಿಲ್ಲಾಡಳಿತಕ್ಕೆ ದಾಖಲೆ ಸಮೇತ ದೂರು ಸಲ್ಲಿಸಬಹುದು. ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT