ಮಂಗಳವಾರ, ಮೇ 24, 2022
27 °C
‘ವೇಶ್ಯಾವಾಟಿಕೆಯ ಕಥೆ–ವ್ಯಥೆ’ ಕೃತಿ ಬಿಡುಗಡೆ

‘ತೃತೀಯ ಲಿಂಗಿಗಳ ಸಂಕಷ್ಟ ತೆರದಿರುವ ಕೃತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ವೇಶ್ಯಾವಾಟಿಕೆಯ ಕಥೆ–ವ್ಯಥೆ’ ಕೃತಿಯು ವೇಶ್ಯೆ ವೃತ್ತಿ ಬಗೆಗಿನ ಸ್ಥೂಲ ಇತಿಹಾಸವನ್ನು ಕಟ್ಟಿಕೊಡುತ್ತದೆ, ದಮನಿತ ಸ್ತ್ರೀಯರ ಸಂಕಟಗಳನ್ನು ತೆರೆದಿಡುತ್ತದೆ ಎಂದು ರಂಗಕರ್ಮಿ ಮೋಹನಚಂದ್ರ ಯು ಹೇಳಿದರು.

ಕರಾವಳಿ ಲೇಖಕಿಯರ– ವಾಚಕಿಯರ ಸಂಘ, ಆಕೃತಿ ಆಶಯ ಪಬ್ಲಿಕೇಷನ್ಸ್ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ ಲೇಖಕಿ ಬಿ.ಎಂ.ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ–ವ್ಯಥೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ಕೃತಿಯನ್ನು ಸಾಹಿತ್ಯದ ನಿರ್ದಿಷ್ಟ ಪ್ರಕಾರ ಎನ್ನುವುದಕ್ಕಿಂತ ಎಲ್ಲ ಪ್ರಕಾರಗಳನ್ನು ಇದು ಒಳಗೊಂಡಿದೆ ಎನ್ನಬಹುದು. ತೃತೀಯ ಲಿಂಗಿಗಳು ಸಮಾಜದ ಹಿಂಸೆಯಿಂದ ನರಳುತ್ತಿರುವ ಸತ್ಯವನ್ನು ಸಮಾಜಕ್ಕೆ ತಿಳಿಸುವುದು ಈ ಕೃತಿಯ ಉದ್ದೇಶವಾಗಿದೆ’ ಎಂದರು.

‘ಕೃತಿಯನ್ನು ಓದಿದ ಮೇಲೆ ಜ್ಞಾನ ವಿಸ್ತಾರ ಆಗುತ್ತದೆ. ‌‌ಜಾಗತಿಕವಾಗಿ ಮಹಿಳೆಯನ್ನು ಸೊತ್ತಾಗಿ, ವಸ್ತುವಾಗಿ, ಭೋಗದ ಗೊಂಬೆಯಾಗಿ ಅರಸನಿಂದ ಆಳಿನವರೆಗೆ ಪುರುಷರು ಮಹಿಳೆಯರನ್ನು ನಡೆಸಿಕೊಂಡ ಬಗೆಯ ಪ್ರಾಚೀನತೆಯಿಂದ ಇಲ್ಲಿಯವರೆಗಿನ ದಾಖಲೆಗಳನ್ನು ಈ ಕೃತಿ ತಿಳಿಸಿಕೊಡುತ್ತದೆ. ಕೃತಿ ರಚಿಸಲು ಲೇಖಕಿ ವಹಿಸಿರುವ ಅವಿರತ ಶ್ರಮ ಎದ್ದು ಕಾಣುತ್ತದೆ’ ಎಂದರು.

ಸಮಾಜ ಸೇವಕಿ ಹರಿಣಿ ಕೃತಿ ಬಿಡುಗಡೆಗೊಳಿಸಿದರು. ‘ನಾನು ಮತ್ತು ರೋಹಿಣಿ ಒಟ್ಟಿಗೆ ಕೆಲಸ ಮಾಡಿದವರು. ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವಗಳನ್ನು ರೋಹಿಣಿ ದಾಖಲಿಸಿದ್ದಾರೆ. ತೃತೀಯ ಲಿಂಗಿಗಳ ಪರವಾಗಿ ಕೆಲಸ ಮಾಡುವಾಗ ಹಲವಾರು ಬಾರಿ ಪೊಲೀಸರ ಜತೆ ಸಂಘರ್ಷ ನಡೆದಿದ್ದೂ ಇದೆ. ಈಗ ಕಾನೂನು ಸ್ವಲ್ಪ ಮಟ್ಟಿಗೆ ಅವರ ಪರವಾಗಿರುವುದು ಸಮಾಧಾನದ ಸಂಗತಿಯಾಗಿದೆ’ ಎಂದರು.

ವೇಶ್ಯಾ ವೃತ್ತಿಯಲ್ಲಿ ವಯಸ್ಸು, ಮೇಲು–ಕೀಳು, ಜಾತಿ ಇಂತಹ ಯಾವ ಮಾನದಂಡಗಳು ಇರುವುದಿಲ್ಲ. ಯಾವ ಧರ್ಮ ರಕ್ಷಕರೂ ಕೂಡ ಇವರ ರಕ್ಷಣೆಗೆ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕಿ ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು. ಡಾ. ರೇಶ್ಮಾ ಉಳ್ಳಾಲ್ ‘ತೃತೀಯ ಲಿಂಗಿಗಳ ಬದುಕು ಬವಣೆ’ ಕುರಿತು ಉಪನ್ಯಾಸ ನೀಡಿದರು. ಪ್ರಕಾಶಕ ಕಲ್ಲೂರು ನಾಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು