ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಬೇಡ

ವಿಎಚ್‌ಪಿ–ಬಜರಂಗದಳ ಮನವಿ: ಅಧಿಕಾರಿಗಳಿಗೆ ಸಚಿವರ ಸೂಚನೆ
Last Updated 29 ಫೆಬ್ರುವರಿ 2020, 12:52 IST
ಅಕ್ಷರ ಗಾತ್ರ

ಮಂಗಳೂರು: ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು, ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿಂದೆ ಕುದ್ರೋಳಿ ಕಸಾಯಿಖಾನೆಯನ್ನು ₹15 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲು ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಇದಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಶನಿವಾರ ಸಚಿವ ಭೈರತಿ ಬಸವರಾಜ ಅವರನ್ನು ಭೇಟಿ ಮಾಡಿದ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು, ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಕೈಬಿಡುವಂತೆ ಒತ್ತಾಯಿಸಿದರು.

ಸಾರ್ವಜನಿಕರ ವಿರೋಧವಿರುವ ಕುದ್ರೋಳಿಯ ಕಸಾಯಿಖಾನೆಯನ್ನು ಅದೇ ಸ್ಥಳದಲ್ಲಿ ಸ್ಮಾರ್ಟ್ ಕಸಾಯಿಖಾನೆಯನ್ನಾಗಿ ನಿರ್ಮಿಸಲು ಯೋಜನಾ ವರದಿ ತಯಾರಿಸಲಾಗಿದೆ. ಈ ಸ್ಥಳದಲ್ಲಿ ಹೊಸ ಸ್ಮಾರ್ಟ್ ಕಸಾಯಿಖಾನೆ ಅಥವಾ ಈಗಿರುವ ಜಾನುವಾರು ವಧಾಗೃಹದ ಆಧುನೀಕರಣ ಮಾಡುವುದಕ್ಕೆ ತೀವ್ರ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ತಿಳಿಸಿದರು.

ಈಗ ಇರುವ ಸ್ಥಳದ ವಿಸ್ತೀರ್ಣವು ಆಧುನಿಕ ವಧಾಗೃಹಕ್ಕೆ ಸಾಲದು ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ನದಿ ದಂಡೆಯ ಮೇಲೆ ಯಾವುದೇ ವಧಾಗೃಹ ಇರಬಾರದೆಂದು ಪರಿಸರ ಇಲಾಖೆಯ ನಿಯಮಾವಳಿ ಉಲ್ಲಂಘನೆ ಮಾಡಲಾಗುತ್ತದೆ ಎಂದು ಹೇಳಿದರು.

ಕುದ್ರೋಳಿ ಪರಿಸರದಲ್ಲಿ ದೇವಸ್ಥಾನಗಳಿದ್ದು, ಕಸಾಯಿಖಾನೆಯಿಂದ ಮಾಂಸ ಕೊಂಡೊಯ್ಯುವಾಗ ದಾರಿಯಲ್ಲಿ ರಕ್ತ, ಮಾಂಸದ ತುಣುಕುಗಳು ಬಿದ್ದಿರುತ್ತವೆ. ಇದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಈಗ ಶಾಶ್ವತವಾಗಿ ಅಲ್ಲೇ ವಧಾಗೃಹ ಮಾಡಿದಲ್ಲಿ, ಇಲ್ಲಿಯ ಹಿಂದೂಗಳು ಸುಮ್ಮನಿರಲು ಸಾಧ್ಯವೇ ಇಲ್ಲ. ಕೋಮುಸಂಘರ್ಷಕ್ಕೂ ದಾರಿಯಾಗುತ್ತದೆ ಎಂದು ಎಚ್ಚರಿಸಿದರು.

ಕಸಾಯಿಖಾನೆ ಆಧುನೀಕರಣ ಮಹಾನಗರ ಪಾಲಿಕೆಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ಪ್ರಸ್ತಾವವಾಗಿ ಅನುಮೋದನೆ ಆಗಬೇಕಿತ್ತು. ಆದರೆ ಯಾವುದೇ ಪ್ರಸ್ತಾವವಾಗಲೀ, ಅನುಮೋದನೆಯಾಗಲಿ ಆಗಿಲ್ಲ. ಅಲ್ಲದೇ ಪ್ರಾರಂಭದಲ್ಲಿ ಮಾಡಿದ ಕಾಮಗಾರಿಗಳ ಪಟ್ಟಿಯಲ್ಲಿ ಸ್ಮಾರ್ಟ್ ಕಸಾಯಿಖಾನೆ ಇರಲಿಲ್ಲ. ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಸ್ಮಾರ್ಟ್ ಕಸಾಯಿಖಾನೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪವೆಲ್, ಗೋಪಾಲ್ ಕುತ್ತಾರ್, ಶಿವಾನಂದ್ ಮೆಂಡನ್, ಪುನೀತ್ ಅತ್ತಾವರ್, ಪ್ರದೀಪ್ ಪಂಪವೆಲ್, ಗುರುಪ್ರಸಾದ್ ಉಳ್ಳಾಲ ಸಚಿವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT