ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲ: ಮಳೆ ಅಬ್ಬರ ಜನಜೀವನ ಅಸ್ತವ್ಯಸ್ತ‌

ರಸ್ತೆ, ತೋಟಗಳು ಜಲಾವೃತ, ಬಿದ್ದ ಮರಗಳು, ಗುಡ್ಡ ಕುಸಿತ
Last Updated 7 ಜುಲೈ 2018, 11:29 IST
ಅಕ್ಷರ ಗಾತ್ರ

ವಿಟ್ಲ: ಮಳೆಯ ಅಬ್ಬರಕ್ಕೆ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ರಸ್ತೆಗಳು ಜಲಾವೃತಗೊಂಡಿವೆ. ಗುಡ್ಡಗಳು ಕುಸಿದು, ರಸ್ತೆಗೆ ಮರಗಳು ಬಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ವಿಟ್ಲ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿಮಂಗಳೂರು ಸಂಪರ್ಕಿಸುವ ವಿಟ್ಲ-ಸಾಲೆತ್ತೂರು ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.

ರಸ್ತೆ ಮುಳುಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಂಟೆಗಟ್ಟಲೆ ಕಾದು, ಸಂಚಾರಕ್ಕೆ ಪರದಾಡಿದರು. ಇದೇ ರಸ್ತೆಯ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಮೂರು ಪಂಪ್ ಸೆಟ್, ಎರಡು ಮನೆಗಳು ಹಾಗೂ ಹಲವು ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಕರೈ ಅದ್ರಮ ಬ್ಯಾರಿ, ಶಾಂತಿಯಡ್ಕ ಮಹಮ್ಮದ್, ಶಾಫಿ ಕರೈ, ದೇವಪ್ಪ ಬಂಗೇರ ಸೇರಿದಂತೆ ಹಲವರ ತೋಟಗಳಿಗೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ಫಾರೂಕ್ ಹಾಗೂ ಝೊಹರ ಎಂಬುವರ ಮನೆಗಳಿಗೆ ನೀರು ನುಗ್ಗಿ ನಾಲ್ಕು ಪಂಪ್ ಸೆಟ್‌ಗಳಿಗೆ ಹಾನಿಯಾಗಿದೆ. ರಸ್ತೆ ಮುಳುಗಡೆಯಾಗಿದ್ದರಿಂದ ಗ್ರಾಮಸ್ಥರು ವಾಹನ ಸಂಚಾರ ಮಾಡದಂತೆ ಚಾಲಕರಿಗೆ ಮುಂಜಾಗ್ರತೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕ್ಕರ್ ಹಾಜಿ ಅವರ ತೋಟಕ್ಕಿ ನೀರು ನುಗ್ಗಿ ಬೆಳೆನಾಶಗೊಂಡಿದೆ. ಮೂರುಕಜೆ ಎಂಬಲ್ಲಿ ತೋಟಕ್ಕೆ, ಕಾಪುಮಜಲು ದೇವಸ್ಥಾನ, ಪರ್ತಿಪ್ಪಾಡಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷಿರ್ಶಿಗಳು ಮಾಹಿತಿ ನೀಡಿದ್ದಾರೆ.

ಮರ-ಧರೆ ಕುಸಿತ: ವಿಟ್ಲ-ಬಿಸಿರೋಡ್-ಮಂಗಳೂರು ರಸ್ತೆಯಲ್ಲಿ ಬರುವ ಮಜ್ಜೋನಿ-ಕೋಡಪದವು-ಕರೈ ರಸ್ತೆಯ ಸುಮಾರು 9 ಕಿ.ಮೀ ವರೆಗೂ ಮರಗಳು, ವಿದ್ಯುತ್ ಕಂಬಗಳು ಹಾಗೂ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರ ಮಧ್ಯಾಹ್ನವರೆಗೆ ಸ್ಥಗಿತಗೊಂಡಿತ್ತು. ಇದರಿಂದ ಮಜ್ಜೋನಿ-ಕೋಡಪದವು-ಮದಕ-ಕರೈ ವರೆಗೆ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಥಳಕ್ಕೆ ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಿಕ್ ಸರಾವು, ನಿಶಾಂತ್, ಮೆಸ್ಕಾಂ ಹಾಗೂ ಕಂದಾಯ ಅಧಿಕಾರಿಗಳು ತೆರಳಿ ತೆರವು ಕಾರ್ಯಾಚರಣೆಗೆ ನೇತೃತ್ವ ನೀಡಿದರು.

ಮಾಣಿ-ಮೈಸೂರು ಹೆದ್ದಾರಿ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಮೂರು ಕಡೆ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದುದರಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. 3 ಜೆಸಿಬಿಗಳ ಮೂಲಕ ಮಣ್ಣು ತೆರವುಗೊಳಿಸಿ, ಏಕಮುಖವಾಗಿ ವಾಹನ ಸಂಚಾರಕ್ಕೆ ಅನುಮಾಡಿಕೊಡಲಾಗಿದೆ.

ವಿಟ್ಲ-ಕಾಸರಗೋಡು ರಸ್ತೆಯ ಬಾಕಿಮಾರ್ ಎಂಬಲ್ಲಿ ಅಂಗಡಿಯ ಹಿಂಬದಿಯಲ್ಲಿ ಹರಿಯುವ ಚರಂಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪಕ್ಕದ ಅಂಗಡಿಯೊಂದು ಕುಸಿದು ಬಿದ್ದು ಹಾನಿ ಸಂಭವಿಸಿದೆ. ವಿಟ್ಲ-ಮಂಗಳೂರು ರಸ್ತೆಯ ವೀರಕಂಭ ಸಮೀಪದ ಮಜಿ ಎಂಬಲ್ಲಿ ಗುಡ್ಡ ಕುಸಿದಿದೆ.

ಅನಾಹುತ ಸಾಧ್ಯತೆ: ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇನ್ನೂ ಮುಂದುವರಿದರೆ ವಿಟ್ಲ ಭಾಗದ ಬಹುತೇಕ ಹೊಳೆಗಳಲ್ಲಿ ಪ್ರವಾಹ ಹೆಚ್ಚಿ, ತುಂಬಿ ಹರಿದು ಹೆಚ್ಚಿನ ಅನಾಹುತ ಸಂಭವಿಸಲಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT