ಕೋಚ್ ನಾಗೇಶ್ ಸ್ಮರಣಾರ್ಥ ವಾಲಿಬಾಲ್ ಟೂರ್ನಿ ಶನಿವಾರ

ಮಂಗಳೂರು: ವಾಲಿಬಾಲ್ ತರಬೇತುದಾರ ದಿ. ನಾಗೇಶ್ ಎ ಸ್ಮರಣಾರ್ಥ ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ಮತ್ತು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪದವಿಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿಯನ್ನು ಇದೇ 28ರಂದು (ಶನಿವಾರ) ಬೆಳಗ್ಗೆ 9ರಿಂದ ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ವಾಲಿವಾಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಮೇಶ್ ಶೆಟ್ಟಿ, ‘ಟೂರ್ನಿಯನ್ನು ಭಾರತೀಯ ವಾಲಿಬಾಲ್ ತಂಡದ ತರಬೇತುದಾರರಾಗಿದ್ದ ಬಾಲಚಂದ್ರನ್ ಉದ್ಘಾಟಿಸುವರು. ಶಾಸಕ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಸಂಜೆ 6ರಿಂದ ಅಂತಿಮ ಪಂದ್ಯಗಳು ನಡೆಯಲಿದ್ದು, ಬಳಿಕ ಸಮಾರೋಪ ನಡೆಯಲಿದೆ’ ಎಂದರು.
ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್‌ನ ಗಿರೀಶ್ ಶೆಣೈ, ‘ಬಾಲಕರ ವಿಭಾಗದಲ್ಲಿ ಆಹ್ವಾನಿತ ಎಂಟು ತಂಡಗಳು ಮತ್ತು ಬಾಲಕಿಯರ ವಿಭಾಗದಲ್ಲಿ (ಮುಕ್ತ) ಐದು ತಂಡಗಳು ಭಾಗವಹಿಸಲಿವೆ. ನಗದು ಬಹುಮಾನವೂ ಇರಲಿದೆ. ಆಟಗಾರರಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರವಿತರಿಸಲಿದ್ದೇವೆ’ ಎಂದರು.
ಮಹಾಲೇಖಪಾಲರ ಕಚೇರಿ ಅಧಿಕಾರಿ ಹಾಗೂ ಫ್ರೆಂಡ್ಸ್ ಸರ್ಕಲ್ ಸದಸ್ಯ ಸುನಿಲ್ ಬಾಳಿಗಾ, ‘ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ನಾಗೇಶ್ ವಾಲ್‌ಬಾಲ್ ಕ್ರೀಡೆಗಾಗಿ ಬದುಕನ್ನೇ ಅರ್ಪಿಸಿಕೊಂಡಿದ್ದರು. ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ನಿಸ್ವಾರ್ಥವಾಗಿ ಅವರನ್ನು ಬೆಳೆಸಿದ್ದರು. ಅವರ ಕೈಂಕರ್ಯ ಮುಂದುವರಿಸುವ ಸಲುವಾಗಿ ಇನ್ನು ಪ್ರತಿ ವರ್ಷ ಟೂರ್ನಿ ಹಮ್ಮಿಕೊಳ್ಳಲಿದ್ದೇವೆ’ ಎಂದರು.
ರಾಷ್ಟ್ರೀಯ ವಾಲಿಬಾಲ್ ಆಟಗಾರರಾಗಿದ್ದ ಸುಮಿತ್ ನಂಬಿಯಾರ್, ‘ಕರಾವಳಿಯ ಅನೇಕ ವಾಲಿಬಾಲ್ ಆಟಗಾರರರು ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳಿಗೆ ಆಯ್ಕೆ ಆಗಿದ್ದರ ಹಿಂದೆ ನಾಗೇಶ್ ಶ್ರಮ ಇದೆ’ ಎಂದರು.
ಫ್ರೆಂಡ್ಸ್ ಸರ್ಕಲ್ ಸದಸ್ಯ ಕಿಶೋರ್ ಬೋಳಾರ್, ‘ನಾಗೇಶ್ ಅವರ ಸ್ಮರಣಾರ್ಥ ಹಮ್ಮಿಕೊಂಡ ಈ ಟೂರ್ನಿಯಲ್ಲಿ ಅವರ ಶಿಷ್ಯಂದಿರು ಹಾಗೂ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಈ ಟೂರ್ನಿ ಸಲುವಾಗಿ, ಆಸ್ಟ್ರೇಲಿಯಾ, ಸಿಂಗಪುರ ಸೇರಿದಂತೆ ಆರು ದೇಶಗಳಿಂದ ಶಿಷ್ಯಂದಿರು ಬಂದಿದ್ದಾರೆ. ಇದು ಅವರ ಬಗ್ಗೆ ಶಿಷ್ಯಂದಿರಿಗೆ ಇರುವ ಗೌರವವನ್ನು ಸೂಚಿಸುತ್ತದೆ’ ಎಂದರು.
ಮಂಗಳಾ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಗುರುಪ್ರಸಾದ್ ರಾವ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.