ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ: ಮುಂಜಾಗರೂಕತೆಯೇ ಮದ್ದು

ಹಳೆಯ ತ್ಯಾಜ್ಯ ವಿಲೇವಾರಿ ಪ್ರಾಥಮಿಕ ಕಾಮಗಾರಿ ಆರಂಭ
Last Updated 11 ಏಪ್ರಿಲ್ 2022, 8:33 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಪಚ್ಚನಾಡಿಯ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಈ ಹಿಂದೆ ಸಂಗ್ರಹವಾಗಿರುವ ಸುಮಾರು 9 ಲಕ್ಷ ಟನ್ ತ್ಯಾಜ್ಯ ವಿಲೇವಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಅಲ್ಲಿ ಸಂಸ್ಕರಣಾ ಪ್ರಕ್ರಿಯೆಯ ಪೂರ್ವ ಪ್ರಾಥಮಿಕ ಹಂತದ ಕಾಮಗಾರಿಗಳು ಆರಂಭವಾಗಿವೆ.

2019ರ ಆಗಸ್ಟ್ 6 ಮರೆಯಲಾಗದ ಕರಾಳ ದಿನ. ಮಳೆಯ ಅಬ್ಬರಕ್ಕೆ ಪಚ್ಚನಾಡಿಯ ತ್ಯಾಜ್ಯದ ಗುಡ್ಡ ಕುಸಿದು, ಸುಮಾರು 2 ಕಿ.ಮೀ ದೂರದವರೆಗೆ ಜಾರಿ, ಮಂದಾರ ಎನ್ನುವ ಕಣಿವೆ ಪ್ರದೇಶದ ಜನರ ಬದುಕನ್ನು ಕತ್ತಲಲ್ಲಿ ಮುಳುಗಿಸಿತು. ಅಲ್ಲಿದ್ದ 27 ಮನೆಗಳು ತ್ಯಾಜ್ಯದ ನಡುವೆ ಸಿಲುಕಿ, ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದವು. ಕೆಲವು ಮನೆಗಳು ಸಂಪೂರ್ಣ ನಾಶವಾದವು. ಈ ಕಹಿ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಜತೆಗೆ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕಾದ ಎಚ್ಚರಿಕೆಯನ್ನೂ ನೀಡಿತು.

ಈ ದುರಂತದಲ್ಲಿ ಹಲವರು ಮೂಲನೆಲೆ ಕಳೆದುಕೊಂಡರು, ತಲೆಮಾರುಗಳ ನಂಟುಹೊಂದಿದ್ದ ಕೃಷಿ ಭೂಮಿ, ಅಡಿಕೆ ತೋಟ ಕಳೆದುಕೊಂಡರು. ಇದಾಗಿ ಮೂರು ವರ್ಷಗಳ ನಂತರ, ರಾಜ್ಯ ಸರ್ಕಾರವು ಪಚ್ಚನಾಡಿಯ ತ್ಯಾಜ್ಯ ಗುಡ್ಡ ಕರಗಿಸುವ ₹ 73.73 ಕೋಟಿ ಯೋಜನೆಗೆ ಅನುಮತಿ ನೀಡಿದೆ. ಯಂತ್ರೋಪಕರಣ ಸೇರಿದಂತೆ ಆರಂಭಿಕ ಹೂಡಿಕೆಗೆ ₹19.16 ಕೋಟಿ ಹಾಗೂ ಸಂಸ್ಕರಣಾ ಪ್ರಕ್ರಿಯೆಗೆ ₹ 54.57 ಕೋಟಿ ಖರ್ಚು ಅಂದಾಜಿಸಲಾಗಿದೆ. ನ್ಯಾಕ್ ಆಫ್ ಸಂಸ್ಥೆ ಗುತ್ತಿಗೆ ಪಡೆದಿದ್ದು, ಕಾಮಗಾರಿಗೆ ನಾಲ್ಕು ವರ್ಷಗಳ ಕಾಲಾವಕಾಶ ದೊರೆತಿದೆ. ಬಯೊ ಮೈನಿಂಗ್ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.

ನದಿ ನೀರು ಕಲುಷಿತ: ಪಚ್ಚನಾಡಿಯ ಘನತ್ಯಾಜ್ಯ ಶೇಖರಣಾ ಪ್ರದೇಶದಿಂದ ಹರಿಯುವ ಕೊಳಚೆ ನೀರು ಫಲ್ಗುಣಿ ನದಿಗೆ ಸೇರಿ ಕಲುಷಿತಗೊಳ್ಳುತ್ತಿದೆ ಎಂಬ ವಿಚಾರ ಹಲವಾರು ಬಾರಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಈ ಸಂಬಂಧ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಈ ಹಿಂದೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಘನತ್ಯಾಜ್ಯ ಭೂ ಭರ್ತಿ ಘಟಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಅತಿಯಾಗಿ ಕಲುಷಿತಗೊಂಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್‌ಗೆ ವರದಿ ಕೂಡ ಸಲ್ಲಿಸಿತ್ತು. ಆ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಮೋನಿಯಾ ಮತ್ತು ಕಬ್ಬಿಣದ ಅಂಶಗಳು ಮಿತಿಗಿಂತ ಜಾಸ್ತಿ ಇರುವುದನ್ನು ಗಮನಿಸಿದ ನ್ಯಾಯಾಲಯ, ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು.

‘ಹಳೆಯ ತ್ಯಾಜ್ಯ ವಿಲೇವಾರಿ ಟೆಂಡರ್ ನಾಲ್ಕು ವರ್ಷ ಅವಧಿಯದಾಗಿದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕಾಲಾವಕಾಶ ನೀಡಿರುವುದರಿಂದ ಸದ್ಯದಲ್ಲಿ ಮಳೆಗಾಲ ಬರಲಿದ್ದು, ತ್ಯಾಜ್ಯ ಘಟಕದಲ್ಲಿ ಬೀಳುವ ಮಳೆ ನೀರು ಹರಿದು, ನದಿಯ ಒಡಲು ಸೇರುತ್ತದೆ. ಸುತ್ತಲಿನ ಜಲಮೂಲ ಕಲುಷಿತಗೊಳ್ಳುತ್ತದೆ. ಅಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ ಘಟಕದ ನೀರು ಕೂಡ ನದಿಗೆ ಬಂದು ಸೇರದಂತೆ ಕ್ರಮವಹಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ತ್ಯಾಜ್ಯಕ್ಕೆ ಬೆಂಕಿ: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಭೂ ಭರ್ತಿ ಘಟಕದ ಪ್ಲಾಸ್ಟಿಕ್ ಒಣತ್ಯಾಜ್ಯ ಬೇಲಿಂಗ್‌ ಘಟಕದಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಬೆಂಕಿ ಬಿದ್ದು ಮತ್ತೊಮ್ಮೆ ಆತಂಕ ಸೃಷ್ಟಿಯಾಗಿತ್ತು. ಅಗ್ನಿ ಶಾಮಕ ಸಿಬ್ಬಂದಿ ನೆರವಿನಲ್ಲಿ ಪಾಲಿಕೆ ತಕ್ಷಣ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿತಾದರೂ, ಇದು ಪಾಲಿಕೆಗೆ ಸದಾ ಎಚ್ಚರಿಕೆಯ ಗಂಟೆಯಾಗಿದೆ.

‘ಪಚ್ಚನಾಡಿ ತ್ಯಾಜ್ಯ ದುರಂತಕ್ಕೆ ಸಂಬಂಧಿಸಿ ಹೈಕೋರ್ಟ್‌ ಮಧ್ಯಂತರ ಆದೇಶದ ಅನ್ವಯ ಸಂತ್ರಸ್ತರಿಗೆ ₹ 14.8 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಅಲ್ಲಿ 7 ಮೀಟರ್‌ ಎತ್ತರದ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಯಾವುದೇ ರೀತಿಯ ಅವಘಡ ಸಂಭವಿಸದಂತೆ ನಿಗಾವಹಿಸುತ್ತಿದ್ದೇವೆ. ಘಟಕದ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ.

ಆಗಬೇಕಾಗಿದ್ದು ಏನು ?: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 330 ಟನ್ ಹಾಗೂ ಸಮೀಪದ ಗ್ರಾಮಗಳ 50 ಟನ್ ಸೇರಿ ಅಂದಾಜು 380 ಟನ್ ಘನತ್ಯಾಜ್ಯ ಪಚ್ಚನಾಡಿಯ ಘಟಕದ ಒಡಲು ಸೇರುತ್ತಿದೆ. ಪ‍್ರಸ್ತುತ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸುವ ಪ್ರಕ್ರಿಯೆ ಮೂಲದಿಂದಲೇ ನಡೆಯುತ್ತಿದ್ದರೂ, ಪೂರ್ಣ ಪ್ರಮಾಣದ ಗುರಿ ತಲುಪಲು ಮಹಾನಗರ ಪಾಲಿಕೆಗೆ ಇನ್ನೂ ಸಾಧ್ಯವಾಗಿಲ್ಲ. ಹಸಿ ಕಸದಿಂದ ಎರೆಹುಳು ಗೊಬ್ಬರ, ಬಯೊಗ್ಯಾಸ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಒಣ ಕಸ ಹಾಗೂ ದ್ರವಮಿಶ್ರಿತ ಒಣ ಕಸದ ನಿರ್ವಹಣೆ ಮಹಾನಗರ ಪಾಲಿಕೆಗೆ ತಲೆನೋವಾಗಿದೆ. ಯಂತ್ರಗಳ ಮೂಲಕ ಸಂಸ್ಕರಣೆ ಆಗುತ್ತಿದ್ದರೂ, ತ್ಯಾಜ್ಯದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ತಿನಿಸುಗಳ ಪ್ಯಾಕೆಟ್‌ಗಳು, ಗುಟ್ಕಾ ಪೌಚ್‌ಗಳಂತಹ ತ್ಯಾಜ್ಯ ನಗರಕ್ಕೆ ಕಪ್ಪುಚುಕ್ಕೆಯಾಗಿವೆ.

‘ಅಪಾಯಕಾರಿಯಾದ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಅತಿಯಾದ ಕ್ಯಾರಿಬ್ಯಾಗ್‌ಗಳ ಬಳಕೆಗೆ ಮಿತಿ, ಜತೆಗೆ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಕಸ ಎಸೆಯುವುದರ ತಡೆಗೆ ಪರಿಣಾಮಕಾರಿ ಕ್ರಮ, ಸಾರ್ವಜನಿಕರಲ್ಲಿ ಜಾಗೃತಿ, ಅಕ್ರಮವಾಗಿ ತ್ಯಾಜ್ಯ ಎಸೆಯುವವರಿಗೆ ಅಧಿಕ ಮೊತ್ತದ ದಂಡ ವಿಧಿಸಿದರೆ, ಕೊಂಚ ಪ್ರಯೋಜನವಾಗಬಹುದು’ ಎನ್ನುತ್ತಾರೆ ಪರಿಸರ ಪ್ರೇಮಿಗಳು.

‘2019ರಲ್ಲಿ ತ್ಯಾಜ್ಯ ದುರಂತ ಸಂಭವಿಸಿದಾಗ, ಸರ್ಕಾರ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುತುವರ್ಜಿಯಿಂದ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದವು. ಸಂತ್ರಸ್ತ ಕುಟುಂಬಗಳು ಈಗಲೂ ಅದೇ ಜಾಗದಲ್ಲಿ ವಾಸ ಇವೆ. ಆಗ ವಸತಿಗೆ ನೀಡಿದ್ದ ಜಾಗವನ್ನು ಉಚಿತವಾಗಿ ಸಂತ್ರಸ್ತರಿಗೆ ನೀಡುವ ಭರವಸೆ ದೊರೆತಿತ್ತು. ನಂತರದ ವರ್ಷಗಳಲ್ಲಿ ಹಲವಾರು ಅಧಿಕಾರಿಗಳ ಬದಲಾವಣೆಯೂ ಆಯಿತು. ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ಸಹಾಯದಿಂದ ಸಂತ್ರಸ್ತರಿಗೆ ಮಧ್ಯಂತರ ಮತ್ತು ಕೃಷಿ ಪರಿಹಾರ ಕೂಡ ಸಿಕ್ಕಿದೆ’ ಎನ್ನುತ್ತಾರೆ ಸಂತ್ರಸ್ತರ ಕುಟುಂಬದ ರಾಜೇಶ್ ಭಟ್ ಮಂದಾರ.

ಭೂಮಿಗೆ ಭಾರವಾಗುವ, ಮಣ್ಣಿನಲ್ಲಿ ಕರಗದೇ ಇರುವ ತ್ಯಾಜ್ಯಗಳ ಉತ್ಪತ್ತಿ ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಿ, ಮತ್ತೊಮ್ಮೆ ಪಚ್ಚನಾಡಿ ದುರಂತದ ದುಃಸ್ವಪ್ನ ಮರುಕಳಿಸದಿರಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

‘ವೈಜ್ಞಾನಿಕ ವಿಲೇವಾರಿಗೆ ಆದ್ಯತೆ’

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಗರಿಷ್ಠ ಪ್ರಮಾಣದ ಕಸವನ್ನು ಮೂಲದಿಂದಲೇ ಬೇರ್ಪಡಿಸಲಾಗುತ್ತಿದೆ. ತ್ಯಾಜ್ಯ ಸಂಸ್ಕರಣೆಯಲ್ಲಿ ಮಂಗಳೂರು ಪಾಲಿಕೆ ಉತ್ತಮ ಸ್ಥಾನಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

‘ಅಂತಿಮ ನೋಟಿಫಿಕೇಷನ್’

ಮಂದಾರದ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕಳೆದ ವಾರ ಅಂತಿಮ ನೋಟಿಫಿಕೇಷನ್ ಬಂದಿದೆ. 30 ದಿನಗಳ ನೋಟಿಫಿಕೇಷನ್ ನೀಡಿ ಅವರಿಗೆ ಪರಿಹಾರ ಅಂತಿಮಗೊಳಿಸಲಾಗುತ್ತದೆ. ಸದ್ಯ ಪರಿಹಾರ ನೀಡುವ ಬಗ್ಗೆ ಮಾತ್ರ ಯೋಚಿಸಲಾಗಿದ್ದು, ನಂತರ ಅವರು ವಾಸವಾಗಿರುವ ಮನೆ ನೀಡುವ ಬಗ್ಗೆ ಯೋಚಿಸಲಾಗುವುದು ಎಂದು ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿದರು.

ಪಚ್ಚನಾಡಿಯ ಹಳೆಯ ತ್ಯಾಜ್ಯ ವಿಲೇವಾರಿಗೆ ನಾಲ್ಕು ವರ್ಷದ ಅವಧಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ವಹಿಸಿಕೊಂಡ ಸಂಸ್ಥೆ ಈಗಾಗಲೇ ಪ್ರಾಥಮಿಕ ಹಂತದ ಕೆಲಸ ಆರಂಭಿಸಿದೆ. ಜೈವಿಕ ವಿಧಾನದ ಮೂಲಕ ಕಸವನ್ನು ಕರಗಿಸಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ, ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಬಹುದು. ಪ್ಲಾಸ್ಟಿಕ್, ರಬ್ಬರ್, ಗಾಜು ಮೊದಲಾದ ಮರು ಬಳಕೆಯ ವಸ್ತುಗಳನ್ನು ಕಾರ್ಖಾನೆಗಳಿಗೆ ನೀಡಬಹುದು. ಹಸಿ ತ್ಯಾಜ್ಯ ಸಂಸ್ಕರಣೆ ಮತ್ತು ಉಳಿದ ತ್ಯಾಜ್ಯವನ್ನು ನಾಶಪಡಿಸಲಾಗುತ್ತದೆ ಎಂದರು.

ಭೂ ಭರ್ತಿ ಘಟಕ್ಕೆ ಹೋಗುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಹೊಸ ಯಂತ್ರಗಳು ಬಂದಿವೆ. ಒಣ ತ್ಯಾಜ್ಯ ವಿಲೇವಾರಿ ಇನ್ನಷ್ಟು ಹೊಸ ಯಂತ್ರಗಳು ಬರಲಿವೆ. ಸಂಸ್ಕರಣೆ ಮಾಡಲು ಸಾಧ್ಯವಾಗದ 30–40 ಟನ್ ತ್ಯಾಜ್ಯಗಳನ್ನು ಮಾತ್ರ ಭೂ ಭರ್ತಿ ಘಟಕಕ್ಕೆ ಕಳುಹಿಸಲಾಗುತ್ತದೆ. ಘಟಕದಲ್ಲಿ ಜಿಯೊ ಸಿಂಥೆಟಿಕ್ ಲೈನರ್ ಮಾಡಿಕೊಂಡು ಸ್ಯಾನಿಟರ್ ಮಾದರಿಯಲ್ಲಿ ವೈಜ್ಞಾನಿಕವಾಗಿ ಭರ್ತಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

‘ಕಸ ಸಂಗ್ರಹ ವ್ಯವಸ್ಥಿತ ಆಗಲಿ’

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ, ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಆದರೆ, ಮನೆ–ಮನೆಯಿಂದ ಕಸ ಸಂಗ್ರಹ ವ್ಯವಸ್ಥಿತವಾಗಿ ಆಗುತ್ತಿಲ್ಲ. ಶುಕ್ರವಾರ ಹೆಚ್ಚುವರಿ ವಾಹನಗಳನ್ನು ಬಳಸಿ, ಕಸ ಸಂಗ್ರಹಿಸಬೇಕು. ಕಸ ಸಂಗ್ರಹ ನಿಗದಿತವಾಗಿ ನಡೆಯದಿದ್ದರೆ, ಬ್ಲ್ಯಾಕ್ ಸ್ಪಾಟ್‌ಗಳು ಹೆಚ್ಚುತ್ತವೆ. ಎಲ್ಲೆಂದರಲ್ಲಿ ಜನರು ಕಸ ಎಸೆಯುತ್ತಾರೆ. ಕಸ ಸಂಗ್ರಹ ವ್ಯವಸ್ಥಿತ ಆದಲ್ಲಿ ಮತ್ತು ಅದರ ವೈಜ್ಞಾನಿಕ ವಿಲೇವಾರಿಗೆ ಒತ್ತು ನೀಡಿದಲ್ಲಿ, ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಾರದು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯ ಶಶಿಧರ ಹೆಗ್ಡೆ ಅಭಿಪ್ರಾಯಪಟ್ಟರು.

‘ವಸತಿ ಸಂಕೀರ್ಣ ಉಚಿತವಾಗಿ ಕೊಡಿ’

‘ಸಂತ್ರಸ್ತರು ಉಳಿದಿರುವ ವಸತಿ ಸಂಕೀರ್ಣವನ್ನು ಉಚಿತವಾಗಿ ಅವರಿಗೆ ಕೊಡಬೇಕು. ಜಿಲ್ಲಾಧಿಕಾರಿ ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಅವರಿಗೆ ಪೂರ್ಣ ಪ್ರಮಾಣದ ಪರಿಹಾರವನ್ನು ಒದಗಿಸಬೇಕು. ಸಂತ್ರಸ್ತರ ಜತೆ ಈ ಬಗ್ಗೆ ಚರ್ಚಿಸಬೇಕು. ಆದಷ್ಟು ಬೇಗ ಈ ಕೆಲಸ ಆದರೆ ಮಾತ್ರ ಅವರಿಗೆ ಮರು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈಗ ದೊರೆತಿರುವ ಮಧ್ಯಂತರ ಪರಿಹಾರದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲ. ಮಧ್ಯಂತರ ಪರಿಹಾರದಿಂದ ದೊರೆತ ಮೊತ್ತದಲ್ಲಿ ಮಂಗಳೂರು ಪರಿಸರದಲ್ಲಿ ಸ್ಥಳ ಸಿಗುವುದು ಕಷ್ಟ ಎನ್ನುವುದು ವಾಸ್ತವ ಸತ್ಯ. ಸಂತ್ರಸ್ತರ ಕುಟುಂಬದಲ್ಲಿ ಹಲವರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಹಿರಿಯರು ಇರುವಾಗಲೇ ಇದನ್ನು ಇತ್ಯರ್ಥಪಡಿಸಿದರೆ ಅವರಿಗೆ ಸಮಾಧಾನವಾಗುತ್ತದೆ’ ಎನ್ನುತ್ತಾರೆ ಸಂತ್ರಸ್ತರ ಕುಟುಂಬದ ರಾಜೇಶ್ ಭಟ್ ಮಂದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT